– ಹಿರಿಯ ಅಧಿಕಾರಿ ಸೇರಿ ನಾಲ್ವರು ಅಮಾನತು
ಲಕ್ನೋ: ಉತ್ತರ ಪ್ರದೇಶದ (Uttara Pradesh) ಸಹರಾನ್‌ಪುರದಲ್ಲಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ (Punjab National Bank) ಕರೆನ್ಸಿ ಚೆಸ್ಟ್‌ನಿಂದ ಭಾರತೀಯ ರಿಸರ್ವ್ ಬ್ಯಾಂಕ್‌ಗೆ (Reserve Bank of India) ಕಳುಹಿಸಲಾದ ಹಣದಲ್ಲಿ 4.36 ಲಕ್ಷ ರೂ. ಕೊರತೆ ಕಂಡುಬಂದಿದೆ. ಇದರ ತನಿಖೆಯ ವೇಳೆ ಬರೋಬ್ಬರಿ 7.40 ಕೋಟಿ ರೂ. ಮೌಲ್ಯದ ನಕಲಿ ಕರೆನ್ಸಿ ಪತ್ತೆಯಾಗಿದೆ.
ಬ್ಯಾಂಕ್ ಮೂಲಗಳ ಪ್ರಕಾರ, ಸಹರಾನ್‌ಪುರದ ಪಿಎನ್‌ಬಿ ಶಾಖೆಯಿಂದ ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಹಣ ಕಳುಹಿಸಲಾಗಿತ್ತು. ಕಳೆದ ಆಗಸ್ಟ್ 10-11ರಂದು ಈ ಹಣದ ಖಾತೆಗಳನ್ನು ಮರುಪರಿಶೀಲನೆ ಮಾಡಿದಾಗ, 4.36 ಲಕ್ಷ ರೂ. ಹಣ ಕೊರತೆ ಇರುವುದು ಮೊದಲು ಗಮನಕ್ಕೆ ಬಂದಿತ್ತು. ಈ ಸಣ್ಣ ವ್ಯತ್ಯಾಸದ ಆಧಾರದ ಮೇಲೆ ಪಿಎನ್‌ಬಿಯು ತನಿಖೆಗೆ ಆದೇಶಿಸಿತ್ತು. ತನಿಖೆ ಮುಂದುವರಿದಂತೆ ಕರೆನ್ಸಿ ಚೆಸ್ಟ್‌ನಲ್ಲಿ ಪರಿಶೀಲನೆ ನಡೆಸಿದಾಗ ಅಂದಾಜು 7.40 ಕೋಟಿ ರೂ. ಮೌಲ್ಯದ ನಕಲಿ ನೋಟುಗಳು ಸಂಗ್ರಹವಾಗಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಭಯೋತ್ಪಾದನೆ ಯಾರಿಗೂ ತಂತ್ರಗಾರಿಕೆಯ ಅಸ್ತ್ರವಾಗಲು ಸಾಧ್ಯವಿಲ್ಲ – ಪಾಕ್ ಪ್ರಧಾನಿ ಎದುರಲ್ಲೇ ಗುಡುಗಿದ ಮೋದಿ
ಈ ಕುರಿತು ಮಾತನಾಡಿರುವ ಪಿಎನ್‌ಬಿ ಮುಖ್ಯ ವ್ಯವಸ್ಥಾಪಕಿ ನಿಶಾ ಸಿಂಗ್, ತನಿಖೆ ಇನ್ನೂ ಮುಗಿದಿಲ್ಲ. ನಕಲಿ ಕರೆನ್ಸಿ ಬ್ಯಾಂಕಿನೊಳಗೆ ಹೇಗೆ ಮತ್ತು ಯಾರ ಮೂಲಕ ಬಂತು? ಎಂಬ ಸಂಪೂರ್ಣ ವಿವರಗಳು ತನಿಖಾ ವರದಿ ಬಂದ ಬಳಿಕವಷ್ಟೇ ಸ್ಪಷ್ಟವಾಗಲಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ಒಳಗೆ ಇಷ್ಟು ದೊಡ್ಡ ಪ್ರಮಾಣದಲ್ಲಿ ನಕಲಿ ನೋಟುಗಳು ಪತ್ತೆಯಾಗಿರುವುದು ಸ್ಥಳೀಯವಾಗಿ ತೀವ್ರ ಸಂಚಲನ ಸೃಷ್ಟಿಸಿದೆ.
ಪೊಲೀಸ್ ತನಿಖೆ ಮತ್ತು ಅಮಾನತು ಕ್ರಮ:
ನಕಲಿ ನೋಟುಗಳನ್ನು ಪತ್ತೆ ಹಚ್ಚಿದ ನಂತರ, ಹಿರಿಯ ಪಿಎನ್‌ಬಿ ಅಧಿಕಾರಿಯೊಬ್ಬರು ಈ ಬೆಳವಣಿಗೆಯನ್ನು ಪೊಲೀಸರಿಗೆ ವರದಿ ಮಾಡಿದ್ದಾರೆ. ಈ ಮಧ್ಯೆ, ಪಿಎನ್‌ಬಿ ಈ ವಿಷಯಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಅಮಾನತುಗೊಳಿಸಿದೆ. ಆದರೆ, ಇವರ ವೈಯಕ್ತಿಕ ಪಾತ್ರಗಳ ಬಗ್ಗೆ ಇನ್ನೂ ಬಹಿರಂಗವಾಗಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ರಾಯರೆಡ್ಡಿ ನಾಲ್ಕೈದು ಮದುವೆ ಆಗುವ ಆಸೆಯಿಂದ ಇಸ್ಲಾಂ ಶ್ರೇಷ್ಠ ಎಂದಿದ್ದಾರೆ: ಸಿ.ಟಿ. ರವಿ
ವಿಭಾಗೀಯ ಕಚೇರಿಯ ಹಿರಿಯ ವ್ಯವಸ್ಥಾಪಕ ಮತ್ತು ನೋಡಲ್ ಅಧಿಕಾರಿ ರವಿ ಕುಮಾರ್, ಕರೆನ್ಸಿ ಚೆಸ್ಟ್ ವ್ಯವಸ್ಥಾಪಕ ಸುಶೀಲ್ ಶರ್ಮಾ ಹಾಗೂ ಹರಿಯಾಣದ ಜಗದರಿಯ ಖೇರಾ ಬಜಾರ್‌ನ ಕರೆನ್ಸಿ ಚೆಸ್ಟ್ ವ್ಯವಸ್ಥಾಪಕ ಅಮಿತ್ ಕುಮಾರ್ ಹಾಗೂ ಇನೋರ್ವ ವ್ಯಕ್ತಿಯನ್ನು ಅಮಾನತು ಮಾಡಲಾಗಿದೆ.
ಇನ್ನೂ ನಕಲಿ ಕರೆನ್ಸಿಯನ್ನು ಚಲಾವಣೆಗೆ ಮತ್ತು ಬ್ಯಾಂಕಿನ ಯಾವುದೇ ಶಾಖೆಗಳಿಗೆ ವಿತರಿಸಿಲ್ಲ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ವಿವಿಧ ಶಾಖೆಗಳಿಂದ ಪಡೆದ ಕರೆನ್ಸಿ, ಜಮಾ ಮತ್ತು ಹಿಂಪಡೆಯುವಿಕೆಯ ದಾಖಲೆಗಳು, ಎಣಿಕೆ ಹಾಗೂ ಪ್ಯಾಕಿಂಗ್ ಪ್ರಕ್ರಿಯೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಒಳಗೊಂಡ ಸಂಪೂರ್ಣ ನಗದು ಬಂದ ಹಾದಿ ಬಗ್ಗೆ ತನಿಖೆ ವೇಳೆ ಪರಿಶೀಲನೆ ನಡೆಯಲಿದೆ. ಇದನ್ನೂ ಓದಿ: ಗ್ರಾಮೀಣಾಭಿವೃದ್ಧಿ ಇಲಾಖೆ AEE ಹುದ್ದೆಯಲ್ಲಿ ಅಕ್ರಮಕ್ಕೆ ಖಂಡನೆ – ಕೆಪಿಸಿಸಿ ಕಚೇರಿ ಎದುರು ಜೆಡಿಎಸ್ ಹೈಡ್ರಾಮಾ
