ಬ್ಯೂನಸ್ ಐರಿಸ್: ಫುಟ್‌ಬಾಲ್ ಜಗತ್ತಿನ ಸಾರ್ವಕಾಲಿಕ ಶ್ರೇಷ್ಠ ಆಟಗಾರ (G.O.A.T), ಅರ್ಜೆಂಟೀನಾದ ದಿಗ್ಗಜ ಲಿಯೋನೆಲ್ ಮೆಸ್ಸಿ(Lionel Messi) ಅಂತಾರಾಷ್ಟ್ರೀಯ ಫುಟ್‌ಬಾಲ್(Football) ವೃತ್ತಿಜೀವನಕ್ಕೆ ಅಧಿಕೃತವಾಗಿ ವಿದಾಯ ಘೋಷಿಸಿದ್ದಾರೆ.
2026ರ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ಅರ್ಜೆಂಟೀನಾ(Argentina) ತಂಡವು ಸ್ಪೇನ್ ವಿರುದ್ಧ ಸೋತ ಕೆಲವು ತಿಂಗಳುಗಳ ಬಳಿಕ, ಮೆಸ್ಸಿ ರಾಷ್ಟ್ರೀಯ ತಂಡಕ್ಕೆ ಗುಡ್‌ಬೈ ಹೇಳುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕೈಬರಹದ ಭಾವನಾತ್ಮಕ ಪತ್ರವನ್ನು ಹಂಚಿಕೊಳ್ಳುವ ಮೂಲಕ 39 ವರ್ಷದ ಮೆಸ್ಸಿ ತಮ್ಮ ಎರಡು ದಶಕಗಳ ಅದ್ಭುತ ಅಂತಾರಾಷ್ಟ್ರೀಯ ಪಯಣಕ್ಕೆ ತೆರೆ ಎಳೆದಿದ್ದಾರೆ.
2005ರಲ್ಲಿ ಅಂತಾರಾಷ್ಟ್ರೀಯ ರಂಗಕ್ಕೆ ಪದಾರ್ಪಣೆ ಮಾಡಿದ್ದ ಮೆಸ್ಸಿ, ಒಟ್ಟು ಆರು ವಿಶ್ವಕಪ್ ಟೂರ್ನಿಗಳಲ್ಲಿ ಅರ್ಜೆಂಟೀನಾವನ್ನು ಪ್ರತಿನಿಧಿಸಿದ್ದಾರೆ. 2022ರಲ್ಲಿ ಕತಾರ್‌ನಲ್ಲಿ ನಡೆದ ಫಿಫಾ ವಿಶ್ವಕಪ್ ಮುಡಿಗೇರಿಸಿಕೊಂಡು ದೇಶದ ದಶಕಗಳ ಕನಸನ್ನು ನನಸು ಮಾಡಿದ್ದ ಅವರು, 2026ರ ವಿಶ್ವಕಪ್‌ನಲ್ಲೂ ತಂಡವನ್ನು ಮುನ್ನಡೆಸಿ ಫೈನಲ್‌ವರೆಗೆ ಕೊಂಡೊಯ್ದಿದ್ದರು. ಇದನ್ನೂ ಓದಿ: 15ನೇ ವಯಸ್ಸಿಗೆ ಸೂರ್ಯವಂಶಿ ಮತ್ತೊಂದು ರೆಕಾರ್ಡ್; 57 ವರ್ಷಗಳ ದಾಖಲೆ ಉಡೀಸ್
View this post on Instagram
“ಫೈನಲ್ ಪಂದ್ಯದ ನಂತರ ಸಾಕಷ್ಟು ಯೋಚಿಸಿದ ಮೇಲೆ, ನಾನು ರಾಷ್ಟ್ರೀಯ ತಂಡದಿಂದ ನಿವೃತ್ತಿಯಾಗುತ್ತಿದ್ದೇನೆ ಎಂದು ತಿಳಿಸಲು ಬಯಸುತ್ತೇನೆ. ಈ ನಿರ್ಧಾರ ಮನಸ್ಸಿಗೆ ತೀವ್ರ ನೋವುಂಟುಮಾಡುತ್ತಿದೆ, ಆದರೆ ವಿದಾಯ ಹೇಳಲು ಇದುವೇ ಸೂಕ್ತ ಸಮಯ ಎಂದು ಭಾವಿಸುತ್ತೇನೆ. ಈ ಜೆರ್ಸಿಗಾಗಿ ನಾನು ನನ್ನ ಸರ್ವಸ್ವವನ್ನೂ ಧಾರೆಯೆರೆದಿದ್ದೇನೆ. ಕೇವಲ ಟ್ರೋಫಿ ಗೆದ್ದ ಇತ್ತೀಚಿನ ವರ್ಷಗಳಲ್ಲಿ ಮಾತ್ರವಲ್ಲ, ಅದಕ್ಕೂ ಮೊದಲಿನಿಂದಲೂ ದೇಶದ ಗೌರವ ಮತ್ತು ಅಭಿಮಾನಿಗಳ ಮುಖದಲ್ಲಿ ನಗು ತರಲು ಹೋರಾಡಿದ್ದೇನೆ. ನನ್ನ ಬಳಿ ಇದ್ದ ಎಲ್ಲ ಸಾಮರ್ಥ್ಯವನ್ನೂ ತಂಡಕ್ಕೆ ನೀಡಿದ್ದೇನೆ, ಈಗ ನೀಡಲು ಇನ್ನೇನೂ ಉಳಿದಿಲ್ಲ. ಅಲ್ಲದೆ, ಅರ್ಹರಾದ ಹಲವು ಅತ್ಯುತ್ತಮ ಯುವ ಪ್ರತಿಭೆಗಳು ತಂಡಕ್ಕೆ ಬರಲು ಸಿದ್ಧರಾಗಿದ್ದಾರೆ” ಎಂದು ಬರೆದಿದ್ದಾರೆ.
ತಮ್ಮ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನಿಸಿರುವ ಮೆಸ್ಸಿ, “ಕಳೆದ 20 ವರ್ಷಗಳಿಂದ ನೀವು ತೋರಿದ ಪ್ರೀತಿಗೆ ಧನ್ಯವಾದಗಳು. ಇನ್ನು ಮುಂದೆ ನಾನು ಕೂಡ ನಿಮ್ಮಂತೆಯೇ ಹೊರಗಿನಿಂದ ಅರ್ಜೆಂಟೀನಾ ತಂಡವನ್ನು ಬೆಂಬಲಿಸುತ್ತೇನೆ; ಒಳ್ಳೆಯ ದಿನಗಳಲ್ಲಿ ಮಾತ್ರವಲ್ಲ, ಕಷ್ಟದ ದಿನಗಳಲ್ಲೂ ತಂಡದ ಜೊತೆ ನಿಲ್ಲುತ್ತೇನೆ. ನನ್ನ ಕುಟುಂಬ, ತರಬೇತುದಾರರು, ಸಹ ಆಟಗಾರರು ಮತ್ತು ಅಧಿಕಾರಿಗಳಿಗೆ ಧನ್ಯವಾದಗಳು. ನನ್ನನ್ನು ಅರ್ಜೆಂಟೀನಿಯನ್ ಆಗಿ ಹುಟ್ಟಿಸಿದ ದೇವರಿಗೆ ಕೋಟಿ ನಮನಗಳು” ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಅಂತಾರಾಷ್ಟ್ರೀಯ ಫುಟ್‌ಬಾಲ್‌ನಿಂದ ನಿವೃತ್ತರಾಗಿದ್ದರೂ, ಮೆಸ್ಸಿ ತಮ್ಮ ಕ್ಲಬ್ ಮಟ್ಟದ ವೃತ್ತಿಜೀವನವನ್ನು ಮುಂದುವರಿಸಲಿದ್ದಾರೆ. ಅಮೆರಿಕದ ಇಂಟರ್ ಮಿಯಾಮಿ (Inter Miami) ಕ್ಲಬ್ ಜೊತೆ 2028ರವರೆಗೆ ಒಪ್ಪಂದ ಹೊಂದಿರುವ ಅವರು, ಕ್ಲಬ್ ಪರವಾಗಿ ತಮ್ಮ ಆಟವನ್ನು ಮುಂದುವರಿಸಲಿದ್ದಾರೆ.
