ಸಂಜೆ ವೇಳೆಗೆ ಬಿಸಿ ಬಿಸಿ, ಗರಿ ಗರಿಯಾದ ತಿಂಡಿ ಸವಿಯಬೇಕು ಅನಿಸಿದರೆ ಪ್ರತಿದಿನ ಬಜ್ಜಿ, ಬೋಂಡಾ ಮಾಡುವ ಬದಲು ಈ ಬಾರಿ ಪನೀರ್ ಪಾಪ್‌ಕಾರ್ನ್ ಟ್ರೈ ಮಾಡಿ. ಹೊರಗೆ ಕ್ರಿಸ್ಪಿಯಾಗಿ, ಒಳಗೆ ಮೃದುವಾಗಿರುವ ಈ ತಿಂಡಿ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರಿಗೂ ಇಷ್ಟವಾಗುತ್ತದೆ. ಮನೆಯಲ್ಲೇ ಸಿಗುವ ಕೆಲವೇ ಪದಾರ್ಥಗಳಿಂದ ಈ ಸ್ನ್ಯಾಕ್ಸ್ ತಯಾರಿಸಬಹುದು. ಹಾಗಿದ್ರೆ ಇದನ್ನು ಹೇಗೆ ಮಾಡುವುದು ಎಂಬುದನ್ನು ತಿಳಿದುಕೊಳ್ಳಿ.

ಬೇಕಾಗುವ ಪದಾರ್ಥಗಳು:
ಪನೀರ್ – 250 ಗ್ರಾಂ
ಮೈದಾ – ಕಾಲು ಕಪ್
ಕಾರ್ನ್ ಫ್ಲೋರ್ – ಕಾಲು ಕಪ್
ಬ್ರೆಡ್ ಕ್ರಂಬ್ಸ್ – 1 ಕಪ್
ಅಚ್ಚ ಖಾರದ ಪುಡಿ – 1 ಚಮಚ
ಕರಿಮೆಣಸು ಪುಡಿ – ಕಾಲು ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ನೀರು – ಅಗತ್ಯಕ್ಕೆ ತಕ್ಕಷ್ಟು
ಎಣ್ಣೆ – ಕರಿಯಲು ಬೇಕಾದಷ್ಟು

ಮಾಡುವ ವಿಧಾನ:
– ಮೊದಲಿಗೆ ಪನೀರ್ ಅನ್ನು ಸಣ್ಣ ಚೌಕಾಕಾರದ ತುಂಡುಗಳಾಗಿ ಕತ್ತರಿಸಿ.
– ಈಗ ಒಂದು ಪಾತ್ರೆಯಲ್ಲಿ ಮೈದಾ, ಕಾರ್ನ್ ಫ್ಲೋರ್, ಅಚ್ಚ ಖಾರದ ಪುಡಿ, ಕರಿಮೆಣಸು ಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಉಪ್ಪು ಮತ್ತು ಸ್ವಲ್ಪ ನೀರು ಸೇರಿಸಿ ದಪ್ಪ ಹಿಟ್ಟು ತಯಾರಿಸಿ.
– ನಂತರ ಪನೀರ್ ತುಂಡುಗಳನ್ನು ಈ ಹಿಟ್ಟಿನಲ್ಲಿ ಅದ್ದಿ ನಂತರ ಬ್ರೆಡ್ ಕ್ರಂಬ್ಸ್‌ನಲ್ಲಿ ಉರುಳಿಸಿ.
– ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ, ಮಧ್ಯಮ ಉರಿಯಲ್ಲಿ ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಕರಿಯಿರಿ.
– ಕೊನೆಯಲ್ಲಿ ಎಣ್ಣೆಯಿಂದ ತೆಗೆದು ಬಿಸಿ ಬಿಸಿಯಾಗಿ ಟೊಮೆಟೊ ಕೆಚಪ್ ಅಥವಾ ಮಯೋನೀಸ್ ಜೊತೆ ಸರ್ವ್ ಮಾಡಿ.
