– ವಿಡಿಯೋ ಹಳೆಯದು ಅಂತ ಚರ್ಚೆ
ನವದೆಹಲಿ: ಇರಾನ್‌ನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಅವರ ಆರೋಗ್ಯದ ಬಗ್ಗೆ ಹಲವು ದಿನಗಳಿಂದ ನಾನಾ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಈ ನಡುವೆ ಇರಾನ್‌ನ ಸರ್ಕಾರಿ ನಿಯಂತ್ರಿತ ಮೆಹರ್ ಸುದ್ದಿ ಸಂಸ್ಥೆ ಮೊಜ್ತಬಾ ಖಮೇನಿ ಅವರ ದಿನಾಂಕವಿಲ್ಲದ 12 ಸೆಕೆಂಡ್‌ಗಳ ವಿಡಿಯೋವನ್ನು ಬಿಡುಗಡೆ ಮಾಡಿದೆ.
ವಿಡಿಯೋದಲ್ಲಿ ಮೊಜ್ತಬಾ ಖಮೇನಿ ಆರೋಗ್ಯವಾಗಿರುವಂತೆ ಕಾಣಿಸುತ್ತಿದ್ದು, ಸುತ್ತಮುತ್ತಲಿದ್ದವರೊಂದಿಗೆ ಮಾತನಾಡುತ್ತಿರುವ ದೃಶ್ಯ ಕಂಡುಬಂದಿದೆ. ಆದರೆ, ಈ ವಿಡಿಯೋವನ್ನು ಯಾವಾಗ ಮತ್ತು ಎಲ್ಲಿ ಚಿತ್ರೀಕರಿಸಲಾಗಿದೆ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.
ಮೊಜ್ತಬಾ ಖಮೇನಿ ಅವರು ಮಾರ್ಚ್ 8ರಂದು ಇರಾನ್‌ನ ಮೂರನೇ ಸರ್ವೋಚ್ಚ ನಾಯಕರಾಗಿ ನೇಮಕಗೊಂಡಿದ್ದಾರೆ. ಆದರೆ, ಅಧಿಕಾರ ವಹಿಸಿಕೊಂಡ ಬಳಿಕ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಸರ್ಕಾರಿ ಮಾಧ್ಯಮಗಳ ಮೂಲಕ ಹಲವು ಲಿಖಿತ ಹೇಳಿಕೆಗಳು ಬಂದಿದ್ದರೂ, ಅವರ ಯಾವುದೇ ಫೋಟೋ ಅಥವಾ ಧ್ವನಿ ದಾಖಲೆ ಈವರೆಗೆ ಬಹಿರಂಗವಾಗಿರಲಿಲ್ಲ.
56 ವರ್ಷದ ಮೊಜ್ತಬಾ ಅವರು ತಮ್ಮ ತಂದೆ ಹಾಗೂ ಹಿಂದಿನ ಸರ್ವೋಚ್ಚ ನಾಯಕ ಅಲಿ ಖಮೇನಿ ಅವರ ಅಂತ್ಯಕ್ರಿಯೆಯಲ್ಲೂ ಕಾಣಿಸಿಕೊಂಡಿರಲಿಲ್ಲ. ಇದರಿಂದ ಅವರ ಆರೋಗ್ಯದ ಬಗ್ಗೆ ಹಲವು ಊಹಾಪೋಹಗಳು ಮತ್ತಷ್ಟು ಹೆಚ್ಚಾಗಿದ್ದವು. ಇದನ್ನೂ ಓದಿ: ಕೆನಡಾದಲ್ಲಿ ಭಾರತೀಯ ಮೂಲದ ಮಹಿಳೆ ಕೊಲೆ; 7 ತಿಂಗಳ ಬಳಿಕ ಪ್ರಿಯಕರ ಅರೆಸ್ಟ್
ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಕೂಡ ಮೊಜ್ತಬಾ ಅವರೊಂದಿಗೆ ನೇರವಾಗಿ ಸಂವಹನ ನಡೆಸುವುದು ಸದ್ಯ ಕಷ್ಟಕರವಾಗಿದೆ ಎಂದು ಹೇಳಿದ್ದರು. ಆದರೆ, ಅವರೊಂದಿಗೆ ಕೆಲವು ಸಭೆಗಳು ನಡೆದಿದ್ದು, ಅವರು ಉತ್ತಮವಾಗಿ ಚರ್ಚೆ ನಡೆಸಿದ್ದಾರೆ ಎಂದು ಪೆಜೆಶ್ಕಿಯಾನ್ ತಿಳಿಸಿದ್ದಾರೆ.
🚨 Published for the first time
A video of religious science teaching by Ayatollah Mojtaba Khamenei pic.twitter.com/uFtIvZ0POy
— IRIB (Islamic Republic of Iran Broadcasting) (@iribnews_irib) March 19, 2026
ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮೊಜ್ತಬಾ ಅವರ ಆರೋಗ್ಯದ ಬಗ್ಗೆ ಗಂಭೀರ ಹೇಳಿಕೆ ನೀಡಿದ್ದರು. ಇಸ್ರೇಲ್‌ನ ಕೆಲವು ಮಾಧ್ಯಮಗಳಲ್ಲೂ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದೆ ಎಂಬ ವರದಿಗಳು ಪ್ರಕಟವಾಗಿದ್ದವು.
ಹೀಗಾಗಿ, ಇದೀಗ ಇರಾನ್ ಬಿಡುಗಡೆ ಮಾಡಿರುವ ಈ ವಿಡಿಯೋ ಮಹತ್ವ ಪಡೆದುಕೊಂಡಿದೆ. ವಿಡಿಯೋ ಹಳೆಯದೋ ಅಥವಾ ಇತ್ತೀಚಿನದ್ದೋ ಎಂಬುದು ಖಚಿತವಾಗದಿರುವುದರಿಂದ, ಅವರ ಪ್ರಸ್ತುತ ಆರೋಗ್ಯ ಸ್ಥಿತಿ ಬಗ್ಗೆ ಸ್ಪಷ್ಟ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ.ಇದನ್ನೂ ಓದಿ: ಪಬ್ಲಿಕ್ ಟಿವಿ ವಿದ್ಯಾಮಂದಿರ: ಇಂದು ಕೊನೆಯ ದಿನ – ಉದ್ಯೋಗ, ಶಿಕ್ಷಣ ಮೇಳಕ್ಕೆ ಹರಿದುಬಂದ ವಿದ್ಯಾರ್ಥಿ ಸಾಗರ



