– ನಮ್ಮ ಎಚ್ಚರಿಕೆನ AIಗೆ ನಕಲು ಮಾಡೋಕಾಗಲ್ಲ!
ಮೊನ್ನೆ ದೊಡ್ಡಪ್ಪ ಮೊಬೈಲ್ನಲ್ಲಿ (Mobile) ಮಾತಾಡುತ್ತ ಇದ್ದಕ್ಕಿದ್ದಂತೆ ಕುಸಿದು ಬಿದ್ದರು.. ಏನಾಯ್ತು ಎಂದು ಕೇಳುತ್ತಿದ್ದಂತೆ ಮೊಬೈಲ್ ಕೈಗಿಟ್ಟರು! ಕಿವಿಗೆ ಮೊಬೈಲ್ ಇಟ್ಟು ಹಲೋ ಎಂದಿದ್ದಷ್ಟೇ ಆ ಕಡೆಯಿಂದ ಪ್ರಶಾಂತ್ ಅಣ್ಣ, ಅಂದ್ರೆ ದೊಡ್ಡಪ್ಪನ ಮಗ, ಹಲೋ ಎಂದ, ಏನಾಯ್ತೋ ಎಂದೇ, ಆ ಕಡೆಯಿಂದ ಗಾಬರಿಯ ಧ್ವನಿಯಲ್ಲಿ ಆಕ್ಸಿಡೆಂಟ್! ಅರ್ಜೆಂಟ್ ಆಗಿ 1 ಲಕ್ಷ ಬೇಕು ಎಂದ!
ಒಂದು ಸಲ ಗಾಬರಿ ಆಯ್ತು! ಇನ್ನೇನು ಒಂದು ಲಕ್ಷ ಎಲ್ಲಾದ್ರೂ ಅಡ್ಜಸ್ಟ್ ಮಾಡಿ ಹಾಕ್ಬೇಕು ಅನ್ನೋ ಅಷ್ಟರಲ್ಲಿ, ಪ್ರಶಾಂತ್ನ ಕಾರು ಹಾರ್ನ್ ಆದ ಶಬ್ಧ ಕೇಳ್ತು! ರಸ್ತೆಗೆ ಓಡಿ ಬಂದು ನೋಡಿದ್ರೆ ಹೌದು ಪ್ರಶಾಂತ್ ಕಾರು ನಿಲ್ಲಿಸಿ ಕೆಳಗಿಳಿದ. ಅಲ್ಲೇ ಇದ್ದ ದೊಡ್ಡಪ್ಪ ಅವನ ಮೇಲೆ ರೇಗಾಡಿದ್ರೂ, ಏನೋ ನಿನ್ನ ಮಂಗಾಟ ಅಂತ.
ನನಗೂ ಅವನನ್ನ ನೋಡಿ ಏನೂ ಗೊತ್ತಿಲ್ಲದವನಂತೆ ನಾಟಕ ಮಾಡ್ತಾ ಇದಾನಲ್ಲ ಅಂತ ಸಿಟ್ಟು ಬಂತು. ಇನ್ನೇನು ಬಯ್ಯಬೇಕು ಅನ್ನೋ ಅಷ್ಟರಲ್ಲೇ ಆಕಡೆಯಿಂದ ಮತ್ತೆ ಕಾಲ್ ಬಂತು! ಪ್ರಶಾಂತ್ನದ್ದೇ ಧ್ವನಿ, ದುಡ್ಡು ಅಡ್ಜಸ್ಟ್ ಆಯ್ತಾ? ಎಂಬ ಪ್ರಶ್ನೆಗೆ ನಾವೆಲ್ಲ ತಬ್ಬಿಬ್ಬಾದ್ವಿ! ಕೊನೆಗೆ ಪ್ರಶಾಂತ್ ತಾನೇ ಮೊಬೈಲ್ ತಗೊಂಡು ಮಾತಾಡೋಕೆ ಶುರುಮಾಡಿದ. ಅತ್ತ ಕಡೆಯಿಂದ ಕಾಲ್ ಕಟ್ ಆಯ್ತು!
ಇಷ್ಟಕ್ಕೂ ಈ ಕರೆ ಮಾಡಿದ್ಯಾರು?
ಈ ಪ್ರಶ್ನೆ ನಮ್ಮಲ್ಲೂ ಮೂಡಿತ್ತು? ಪ್ರಶಾಂತ್ನದ್ದೇ ವಾಯ್ಸ್, ಈ ಧ್ವನಿ ಕಾಪಿ ಮಾಡಿದ್ಯಾರು? ಈ ಬಗ್ಗೆ ಪೊಲೀಸರಿಗೆ (Police) ಮಾಹಿತಿ ಕೊಡೋಕೆ ತೆರಳಿದಾಗ ಗೊತ್ತಾಗಿದ್ದು ರೋಚಕ ವಿಷಯ! ಈ ವಿಷಯದ ಬಗ್ಗೆ ಇನ್ಸ್ಪೆಕ್ಟರ್ ಪ್ರದೀಪ್ ಒಂದೊಂದೇ ವಿಚಾರ ಹೇಳಿದ್ರು. ಅಂದ ಹಾಗೇ ಇನ್ಸ್ಪೆಕ್ಟರ್ ಹೇಳಿದ್ದೇನು? ಈ ವಂಚನೆಯ ಕರೆಯ ಬಗ್ಗೆ ಮಾಹಿತಿ ಏನು ಎಂದು ಮುಂದೆ ತಿಳಿಯೋಣ.

ಸೈಬರ್ ವಂಚನೆಯ ಹೊಸ ಅಸ್ತ್ರ
ತಂತ್ರಜ್ಞಾನ ಬೆಳೆದಂತೆ ಸೈಬರ್ ವಂಚನೆಯ ವಿಧಾನಗಳೂ ಬದಲಾಗುತ್ತಿವೆ. ಹಿಂದೆ ಬ್ಯಾಂಕ್ ಅಧಿಕಾರಿಗಳ ಹೆಸರಿನಲ್ಲಿ ಕರೆ ಮಾಡುವುದು, ನಕಲಿ ಲಿಂಕ್ ಕಳುಹಿಸುವುದು, ಒಟಿಪಿ (OTP) ಪಡೆದು ಹಣ ಕದಿಯುವುದು ಸಾಮಾನ್ಯವಾಗಿತ್ತು. ಈಗ ಕೃತಕ ಬುದ್ಧಿಮತ್ತೆ (AI) ಬಳಸಿ ವ್ಯಕ್ತಿಯ ಧ್ವನಿಯನ್ನೇ ನಕಲು ಮಾಡಿ ವಂಚಿಸುವ ಹೊಸ ವಿಧಾನ ಆತಂಕ ಮೂಡಿಸಿದೆ. ಪರಿಚಿತ ವ್ಯಕ್ತಿಯ ಧ್ವನಿಯಲ್ಲೇ ಕರೆ ಅಥವಾ ಧ್ವನಿ ಮೆಸೇಜ್ ಬಂದರೆ ಅದನ್ನು ನಂಬುವ ಸಾಧ್ಯತೆ ಹೆಚ್ಚಿರುವುದೇ ವಂಚಕರಿಗೆ ದೊಡ್ಡ ಅಸ್ತ್ರವಾಗಿದೆ.
ಧ್ವನಿ ವಂಚಕರಿಗೆ ಗೊತ್ತಾಗೋದು ಹೇಗೆ?
AI Voice Cloning ಎಂದರೆ ಒಬ್ಬ ವ್ಯಕ್ತಿಯ ಧ್ವನಿಯ ಕೆಲವು ಮಾದರಿಗಳನ್ನು ಬಳಸಿ ಅದೇ ರೀತಿಯ ಧ್ವನಿಯನ್ನು ಕೃತಕವಾಗಿ ಸೃಷ್ಟಿಸುವ ತಂತ್ರಜ್ಞಾನ. ಸಾಮಾಜಿಕ ಜಾಲತಾಣಗಳಲ್ಲಿ ಲಭ್ಯವಿರುವ ವಿಡಿಯೊಗಳು, ಧ್ವನಿ ಸಂದೇಶಗಳು ಅಥವಾ ಇತರ ಸಾರ್ವಜನಿಕ ಮೂಲಗಳಿಂದ ವಂಚಕರು ಧ್ವನಿ ಮಾದರಿಯನ್ನು ಪಡೆದು, ಆ ವ್ಯಕ್ತಿಯ ಧ್ವನಿಯನ್ನು ಸೃಷ್ಟಿಸುತ್ತಾರೆ.

ಇಂತಹ ವಂಚನೆಯಲ್ಲಿ ಸಾಮಾನ್ಯವಾಗಿ ಭಾವನಾತ್ಮಕ ಒತ್ತಡ ಬಳಸಲಾಗುತ್ತದೆ. ‘ನಾನು ಅಪಾಯದಲ್ಲಿದ್ದೇನೆ’, ‘ತಕ್ಷಣ ಹಣ ಬೇಕು’, ‘ಆಸ್ಪತ್ರೆಯಲ್ಲಿದ್ದೇನೆ’ ಅಥವಾ ‘ಈಗಲೇ ಹಣ ವರ್ಗಾಯಿಸಬೇಕು’ ಎಂಬಂತಹ ತುರ್ತು ಸಂದೇಶಗಳನ್ನು ಕಳುಹಿಸಲಾಗುತ್ತದೆ. ಪರಿಚಿತ ವ್ಯಕ್ತಿಯ ಧ್ವನಿಯೇ ಕೇಳಿಸುವುದರಿಂದ ಆತಂಕಕ್ಕೊಳಗಾದವರು ಹೆಚ್ಚಿನ ಪರಿಶೀಲನೆ ಮಾಡದೆ ಹಣ ಕಳುಹಿಸುವ ಸಾಧ್ಯತೆ ಇರುತ್ತದೆ.
ಈ ವರ್ಷ ಹೆಚ್ಚಿದ ಪ್ರಕರಣ
2026ರಲ್ಲಿ ಇಂತಹ ಪ್ರಕರಣಗಳು ಭಾರತದಲ್ಲೂ ವರದಿಯಾಗಿವೆ. ಮಧ್ಯಪ್ರದೇಶದ ಇಂದೋರ್ನಲ್ಲಿ ವಂಚಕರು ವ್ಯಕ್ತಿಯ ಸಂಬಂಧಿಯ ಧ್ವನಿಯನ್ನು ನಕಲು ಮಾಡಿ ಶಾಲಾ ಶಿಕ್ಷಕಿಯೊಬ್ಬರನ್ನು ನಂಬಿಸಿ ಸುಮಾರು 1 ಲಕ್ಷ ರೂ. ವರ್ಗಾಯಿಸಿಕೊಂಡ ಪ್ರಕರಣ ವರದಿಯಾಗಿದೆ. ತುರ್ತು ವೈದ್ಯಕೀಯ ಕಾರಣವೊಂದನ್ನು ಮುಂದಿಟ್ಟುಕೊಂಡು ಇಲ್ಲಿ ಹಣ ಕೇಳಲಾಗಿತ್ತು.
ಇನ್ನೊಂದು ಪ್ರಕರಣದಲ್ಲಿ, ಮುಂಬೈ ಮೂಲದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರ ಧ್ವನಿಯನ್ನು AI ಮೂಲಕ ನಕಲು ಮಾಡಿ ಸಂಸ್ಥೆಯ ಅಧಿಕಾರಿಯೊಬ್ಬರಿಗೆ ಹಣ ವರ್ಗಾವಣೆ ಮಾಡುವಂತೆ ಸೂಚಿಸಲಾಗಿತ್ತು. ಈ ಪ್ರಕರಣದ ತನಿಖೆಯಲ್ಲಿ 10 ಕೋಟಿ ರೂ.ಗೂ ಹೆಚ್ಚು ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗಿತ್ತು ಎಂದು ವರದಿಯಾಗಿದೆ.
ವಂಚನೆಯಿಂದ ಬಚಾವ್ ಆಗೋದು ಹೇಗೆ?
ಇಂತಹ ಕರೆ ಅಥವಾ ಧ್ವನಿ ಸಂದೇಶ ಬಂದಾಗ ಮೊದಲು ತಾಳ್ಮೆಯಿಂದ ಇರುವುದು ಮುಖ್ಯ. ಕರೆ ಮಾಡಿದ ವ್ಯಕ್ತಿಯೊಂದಿಗೆ ಬೇರೆ ವಿಷಯವೊಂದನ್ನು ಕೇಳಿ ಗುರುತನ್ನು ಪರಿಶೀಲಿಸಬಹುದು. ಸಾಧ್ಯವಾದರೆ ಆ ವ್ಯಕ್ತಿಯ ಸಾಮಾನ್ಯ ಮೊಬೈಲ್ ಸಂಖ್ಯೆಗೆ ನೇರವಾಗಿ ಕರೆ ಮಾಡಿ ವಿಚಾರಿಸಬೇಕು.
ಹಣ ವರ್ಗಾವಣೆ ಮಾಡುವಂತೆ ಯಾರಾದರೂ ತುರ್ತು ಒತ್ತಡ ಹೇರಿದರೆ ಇನ್ನಷ್ಟು ಎಚ್ಚರಿಕೆ ಅಗತ್ಯ. ಬ್ಯಾಂಕ್ ಖಾತೆ, ಯುಪಿಐ, ಒಟಿಪಿ, ಪಾಸ್ವರ್ಡ್ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಹಂಚಿಕೊಳ್ಳಬಾರದು. ಅನುಮಾನಾಸ್ಪದ ಧ್ವನಿ ಸಂದೇಶ ಅಥವಾ ಕರೆ ಬಂದರೆ ಅದರ ಸ್ಕ್ರೀನ್ಶಾಟ್, ಮೊಬೈಲ್ ಸಂಖ್ಯೆ ಮತ್ತು ಸಂದೇಶದ ವಿವರಗಳನ್ನು ಉಳಿಸಿಕೊಳ್ಳುವುದು ದೂರು ದಾಖಲಿಸುವಾಗ ಉಪಯುಕ್ತವಾಗಲಿದೆ.

ಇತ್ತೀಚಿನ ಸಂಶೋಧನೆಯೊಂದರಲ್ಲಿ ವಂಚಕರು ಬಳಸುವ ಧ್ವನಿ ಮಾದರಿಗಳಲ್ಲಿ AI ಧ್ವನಿ ಮತ್ತು ಮಾನವ ಧ್ವನಿಯನ್ನು ಪ್ರತ್ಯೇಕಿಸುವುದು ಜನರಿಗೆ ಕಷ್ಟವಾಗಿರುವುದು ಕಂಡುಬಂದಿದೆ. ಆದ್ದರಿಂದ ಧ್ವನಿಯ ಗುಣಮಟ್ಟ ಅಥವಾ ಮಾತನಾಡುವ ರೀತಿಯನ್ನು ಮಾತ್ರ ಆಧರಿಸಿ ನಿರ್ಧಾರ ತೆಗೆದುಕೊಳ್ಳುವುದು ಸುರಕ್ಷಿತವಲ್ಲ.
AI ಧ್ವನಿ ನಕಲು ವಂಚನೆಯಲ್ಲಿ ಸಿಲುಕಿದರೆ ತಡಮಾಡದೆ 1930 ರಾಷ್ಟ್ರೀಯ ಸೈಬರ್ ಅಪರಾಧ ಸಹಾಯವಾಣಿಗೆ ಕರೆ ಮಾಡಬೇಕು. ಜೊತೆಗೆ ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ನಲ್ಲಿ ದೂರು ದಾಖಲಿಸಬಹುದು. ಹಣಕಾಸಿನ ವಂಚನೆಯ ಸಂದರ್ಭದಲ್ಲಿ ತಕ್ಷಣದ ವರದಿ ಹಣ ಉಳಿಸಲು ಸಹಾಯ ಮಾಡಬಹುದು. AIಯಿಂದ ಧ್ವನಿಯನ್ನು ನಕಲು ಮಾಡಬಹುದು; ಆದರೆ ನಮ್ಮ ಎಚ್ಚರಿಕೆಯನ್ನು ನಕಲು ಮಾಡುವುದು ವಂಚಕರಿಗೆ ಅಷ್ಟು ಸುಲಭವಲ್ಲ.
AI ತಂತ್ರಜ್ಞಾನವು ಸ್ವತಃ ಅಪಾಯಕಾರಿ ಅಲ್ಲ
AI ತಂತ್ರಜ್ಞಾನ ಅಪಾಯಕಾರಿಯಲ್ಲ. ದುರುಪಯೋಗಪಡಿಸಿಕೊಳ್ಳುವ ವಿಧಾನವೇ ಸಮಸ್ಯೆ. ಭಾರತ ಸರ್ಕಾರವೂ AI ಮೂಲಕ ಸೃಷ್ಟಿಯಾಗುವ ನಕಲಿ ಧ್ವನಿ, ವಿಡಿಯೊ ಸೇರಿದಂತೆ ಡೀಪ್ಫೇಕ್ಗಳಿಂದ ಉಂಟಾಗುವ ಅಪಾಯಗಳ ಬಗ್ಗೆ ಕ್ರಮಗಳನ್ನು ಕೈಗೊಂಡಿದೆ. ನಾಗರಿಕರು ಎಚ್ಚರಿಕೆಯಿಂದಿರುವುದು, ಅನುಮಾನಾಸ್ಪದ ವಹಿವಾಟುಗಳನ್ನು ತಕ್ಷಣ ವರದಿ ಮಾಡುವುದು ಮತ್ತು ವೈಯಕ್ತಿಕ ಮಾಹಿತಿಯ ಸುರಕ್ಷತೆಯನ್ನು ಕಾಪಾಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಇಷ್ಟೆಲ್ಲ ಮಾಹಿತಿ ಕೊಟ್ಟ ಇನ್ಸ್ಪೆಕ್ಟರ್. ಇನ್ಮೆಲೇ ನೀವ್ಯಾರು ವಂಚನೆಗೆ ಗುರಿಯಾಗುವುದಿಲ್ಲ ಎಂಬುದು ನನ್ನ ನಂಬಿಕೆ ಎಂದು ಮಾತು ಮುಗಿಸಿದ್ರು.

