ಬೆಂಗಳೂರು: ಕಬ್ಬಿಗೆ(Sugarcane) ನ್ಯಾಯಯುತ ಬೆಲೆ ನಿಗದಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯದ ಕಬ್ಬು ಬೆಳೆಗಾರರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ತೀವ್ರ ಸಮರ ಸಾರಿದ್ದಾರೆ.
ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ದರ ನಿಗದಿ, ಸಕ್ಕರೆಯ ಕನಿಷ್ಠ ಮಾರಾಟ ಬೆಲೆ (MSP) ಹೆಚ್ಚಳ, ರಾಜ್ಯದಲ್ಲಿ ಉತ್ಪಾದನೆಯಾಗುವ ಸಂಪೂರ್ಣ ಎಥೆನಾಲ್ ಖರೀದಿ ಹಾಗೂ ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ತಕ್ಷಣವೇ ಜಾರಿಗೊಳಿಸಲು ಪಟ್ಟುಹಿಡಿದು ರಾಜ್ಯದ ಪ್ರಮುಖ ಹೆದ್ದಾರಿಗಳನ್ನು(Highway) ಬಂದ್ ಮಾಡಿ ಅಹೋರಾತ್ರಿ ಧರಣಿ ನಡೆಸಿ(Protest) ಅನ್ನದಾತರು(Farmers) ರಣಕಹಳೆ ಮೊಳಗಿಸಿದ್ದಾರೆ.
ಬೆಳಗಾವಿ
ಪುಣೆ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರ ಹತ್ತರಗಿ, ಕುಗನೊಳ್ಳಿ ಮತ್ತು ಹಿರೇಬಾಗೇವಾಡಿ ಟೋಲ್ ಗೇಟ್ಗಳ(Toll Gate) ಬಳಿ ಸಾವಿರಾರು ರೈತರು ಹೆದ್ದಾರಿಯಲ್ಲೇ ಮಲಗಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರಸ್ತೆ ಬದಿಯಲ್ಲೇ ಅಡುಗೆ ತಯಾರಿಸಿ ಊಟ ಮಾಡಿರುವ ರೈತರು, ಹೆದ್ದಾರಿಯನ್ನು ಸಂಪೂರ್ಣ ಸ್ತಬ್ಧಗೊಳಿಸಿದ್ದಾರೆ.
ಹಿರೇಬಾಗೇವಾಡಿ ಬಳಿ ನೂರಾರು ಟ್ರಕ್ಗಳು ಮತ್ತು ಖಾಸಗಿ ವಾಹನಗಳು ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತಿವೆ. ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಬಳಿ ಸಂಚರಿಸಲು ಯತ್ನಿಸಿದ ಗುಜರಾತ್ ಟ್ರಾವೆಲ್ಸ್ ಬಸ್ ಸೇರಿದಂತೆ ಹಲವು ವಾಹನಗಳನ್ನು ರೈತರು ತಡೆದು ವಾಪಸ್ ಕಳುಹಿಸಿದರು. ಇದೇ ವೇಳೆ ಹುಕ್ಕೇರಿ ಟೋಲ್ ನಾಕಾ ಬಳಿ ಕಬ್ಬಿಗೆ ಬೆಲೆ ಹೆಚ್ಚಳಕ್ಕೆ ಆಗ್ರಹಿಸಿ ಆಕ್ರೋಶಗೊಂಡ ಯುವ ರೈತನೊಬ್ಬ ಟೋಲ್ ಮೇಲಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದು, ಪೊಲೀಸರು ಆತನನ್ನು ರಕ್ಷಿಸಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಮನ್ಮುಲ್ ನಂದಿನಿ ಹಾಲಿನ ಪುಡಿ ಕಲಬೆರಕೆ ಪ್ರಕರಣ – ಮತ್ತೆ ಮೂವರ ಬಂಧನ, 11ಕ್ಕೇರಿದ ಆರೋಪಿಗಳ ಸಂಖ್ಯೆ
ಹಾವೇರಿ
ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ 48ನ್ನು ತಡೆದು ಅನ್ನದಾತರು ಬೃಹತ್ ಪ್ರತಿಭಟನೆ ನಡೆಸಿದರು. ರಸ್ತೆಯಲ್ಲೇ ಅಡುಗೆ ಮಾಡಿ ಊಟ ಮುಗಿಸಿದ ನಂತರ, ಟ್ರ್ಯಾಕ್ಟರ್ಗಳ ಮೇಲೆ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳದಲ್ಲೇ ಬಾರುಕೋಲು ಚಳವಳಿ ಹಾಗೂ ಭಜನೆ ನಡೆಸುವ ಮೂಲಕ ವಿನೂತನ ರೀತಿಯಲ್ಲಿ ಸರ್ಕಾರಕ್ಕೆ ಎಚ್ಚರಿಕೆ ರವಾನಿಸಿದರು.
ಧಾರವಾಡ
ಧಾರವಾಡ ಹೊರವಲಯದ ಬೈಪಾಸ್ ರಸ್ತೆಯಲ್ಲಿ ರೈತರು ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಿ ಧರಣಿ ಕುಳಿತರು. ಸತತ 11 ಗಂಟೆಗಳಿಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿದ್ದರಿಂದ ಪ್ರಯಾಣಿಕರು, ರೋಗಿಗಳು ಹಾಗೂ ಸರಕು ಸಾಗಣೆ ವಾಹನಗಳ ಚಾಲಕರು ರಸ್ತೆಯಲ್ಲೇ ಸಿಲುಕಿ ತೀವ್ರ ಪರದಾಟ ಅನುಭವಿಸಿದರು.
ಕಲಬುರಗಿ
ಕಲಬುರಗಿ ನಗರದ ರಾಮ ಮಂದಿರ ವೃತ್ತದಲ್ಲಿ ಅಹೋರಾತ್ರಿ ಜಾಗರಣೆ ನಡೆಸಿದ ರೈತರು, ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿಯನ್ನು ತಡೆದು ಆಕ್ರೋಶ ಹೊರಹಾಕಿದರು. ರಸ್ತೆಯಲ್ಲೇ ಮಲಗಿ, ಭಜನೆ ಮಾಡುತ್ತಾ ಬೆಲೆ ಹೆಚ್ಚಳಕ್ಕೆ ಪಟ್ಟುಹಿಡಿದರು.
ರೈತರ ಪ್ರಮುಖ ಬೇಡಿಕೆಗಳು:
1. ಪ್ರತಿ ಟನ್ ಕಬ್ಬಿಗೆ ಕನಿಷ್ಠ 5,500 ರೂ. ದರ ನಿಗದಿಪಡಿಸಬೇಕು.
2. ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು (MSP) ಏರಿಕೆ ಮಾಡಬೇಕು.
3. ರಾಜ್ಯದಲ್ಲಿ ಉತ್ಪಾದನೆಯಾಗುವ ಎಥೆನಾಲ್ ಅನ್ನು ಕೇಂದ್ರ ಸರ್ಕಾರವೇ ಸಂಪೂರ್ಣವಾಗಿ ಖರೀದಿಸಬೇಕು.
4. ಸ್ವಾಮಿನಾಥನ್ ಆಯೋಗದ ವರದಿ ಮತ್ತು ಶಿಫಾರಸುಗಳನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕು.
ಸರ್ಕಾರಗಳು ತಕ್ಷಣವೇ ಮಧ್ಯಪ್ರವೇಶಿಸಿ ಸೂಕ್ತ ದರ ಘೋಷಿಸದಿದ್ದರೆ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಿ ರಾಜ್ಯವ್ಯಾಪಿ ಬಂದ್ಗೆ ಕರೆ ನೀಡುವುದಾಗಿ ರೈತ ಸಂಘಟನೆಗಳು ಕಟುವಾಗಿ ಎಚ್ಚರಿಸಿವೆ.

