ಬೆಂಗಳೂರು: ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯ(Cabinet Expansion) ಚಟುವಟಿಕೆಗಳು ತೀವ್ರಗೊಂಡ ಬೆನ್ನಲ್ಲೇ ದೆಹಲಿ ತಲುಪಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್(DK Shivakumar) ಹೈಕಮಾಂಡ್ ಅಂಗಳದಲ್ಲಿ ಭಾರಿ ರಾಜಕೀಯ ದಾಳ ಉರುಳಿಸಲು ಸಜ್ಜಾಗಿದ್ದಾರೆ. ಪಕ್ಷದ ಒಳಗಿನ ಭಿನ್ನಮತ ಶಮನ ಹಾಗೂ ಭವಿಷ್ಯದ ರಾಜಕೀಯ ಲೆಕ್ಕಾಚಾರಗಳನ್ನು ಗಮನದಲ್ಲಿಟ್ಟುಕೊಂಡು ಡಿಕೆಶಿ ಸಿದ್ಧಪಡಿಸಿರುವ ‘ಮಾಸ್ಟರ್ ಪ್ಲಾನ್’ ಈಗ ಕೈ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಿದೆ.
ಸಂಪುಟ ವಿಸ್ತರಣೆಯ ಜೊತೆಗೆ ರಾಜ್ಯದಲ್ಲಿ 3 ನೂತನ ಉಪ ಮುಖ್ಯಮಂತ್ರಿ (DCM) ಹುದ್ದೆಗಳನ್ನು ಸೃಷ್ಟಿಸುವ ಪ್ರಪೋಸಲ್ ಅನ್ನು ಹೈಕಮಾಂಡ್ ಮುಂದೆ ಡಿಕೆಶಿ ಇಟ್ಟಿದ್ದಾರೆ ಎನ್ನಲಾಗುತ್ತಿದೆ. ಲಿಂಗಾಯತ ಸಮುದಾಯಕ್ಕೆ ಒಂದು ಹಾಗೂ ಹಿಂದುಳಿದ ವರ್ಗಗಳ (OBC) ನಾಯಕರಿಗೆ ಮತ್ತೊಂದು ಡಿಸಿಎಂ ಸ್ಥಾನ ನೀಡುವ ಮೂಲಕ ಜಾತಿ ಆಧಾರಿತ ಸಮತೋಲನ ಕಾಯ್ದುಕೊಳ್ಳಲು ಮುಂದಾಗಿದ್ದಾರೆ.
ನಾಯಕತ್ವ ಪೈಪೋಟಿ ನಿಯಂತ್ರಿಸುವುದು ಮತ್ತು ಪ್ರಮುಖ ಸಮುದಾಯಗಳನ್ನು ಒಲಿಸಿಕೊಂಡು ಮುಂದಿನ ಚುನಾವಣೆ ದೃಷ್ಟಿಯಿಂದ ಪಕ್ಷದ ನೆಲೆ ಗಟ್ಟಿ ಮಾಡಿಕೊಳ್ಳುವುದರ ಜೊತೆಗೆ ತಮ್ಮ ನಂತರದ ಉತ್ತರಾಧಿಕಾರತ್ವದ ರೇಸ್‌ನಲ್ಲಿರುವ ನಾಯಕರನ್ನು ಡಿಸಿಎಂ ಹುದ್ದೆಗಳ ಮೂಲಕ ಸರಿದೂಗಿಸಿ, ನಾಯಕತ್ವದ ಸಂಘರ್ಷಕ್ಕೆ ಕೊನೆ ಹಾಡಲು ಮುಂದಾಗಿದ್ದಾರೆ. ಇದನ್ನೂ ಓದಿ: ಸಂಪುಟ ವಿಸ್ತರಣೆ ತಡ ಆಗಬಹುದು: ಡಿ.ಕೆ.ಶಿವಕುಮಾರ್
ಒಮ್ಮೆ ಸಿದ್ದರಾಮಯ್ಯ (Siddaramaiah) ಅವರ ತೀವ್ರ ಬೆಂಬಲಿಗರಾಗಿದ್ದು, ತಮ್ಮ ವಿರುದ್ಧ ಬ್ಯಾಟಿಂಗ್ ಮಾಡುತ್ತಿದ್ದ ನಾಯಕರನ್ನೇ ಈಗ ತಮ್ಮತ್ತ ಸೆಳೆದುಕೊಳ್ಳುವ ತಂತ್ರಕ್ಕೆ ಡಿಕೆಶಿ ಕೈಹಾಕಿದ್ದಾರೆ. ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಸಚಿವ ಕೆ.ಎನ್. ರಾಜಣ್ಣ ಹಾಗೂ ಜಮೀರ್ ಅಹ್ಮದ್ ಖಾನ್ ಅವರ ವಿಷಯದಲ್ಲಿ ಡಿಕೆಶಿ ಸಕಾರಾತ್ಮಕ ಧೋರಣೆ ತಳೆದಿದ್ದು, ಹೈಕಮಾಂಡ್ ಮಟ್ಟದಲ್ಲಿ ಅವರ ಪರ ಬ್ಯಾಟಿಂಗ್ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ರಾಜಕೀಯಕ್ಕಾಗಿ ಬಳಸಿಕೊಳ್ಳಬೇಡಿ: ರಾಹುಲ್ ವಿರುದ್ಧ ಧರ್ಮೇಂದ್ರ ಪ್ರಧಾನ್ ವಾಗ್ದಾಳಿ
ಮಂತ್ರಿಗಿರಿ ಯಾರಿಗೆ?
ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಪೈಕಿ ಇಬ್ಬರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆಯಿದೆ. 2 ರಿಂದ 3 ಬಾರಿ ಗೆದ್ದಿರುವ ಅನುಭವಿ ಶಾಸಕರಿಗೂ ಸಂಪುಟದಲ್ಲಿ ಪ್ರಾತಿನಿಧ್ಯ ಸಿಗಲಿದೆ. ಪ್ರಾದೇಶಿಕ ಹಾಗೂ ಸಾಮಾಜಿಕ ಸಮೀಕರಣ ಸರಿದೂಗಿಸಲು ಇಬ್ಬರು ಶಾಸಕಿಯರಿಗೆ ಮಂತ್ರಿಗಿರಿ ಸಿಗುವ ಸಾಧ್ಯತೆಯಿದೆ.
ಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಹೊಸ ಮಾಸ್ಟರ್‌ಪ್ಲಾನ್ ಕೇವಲ ಸಂಪುಟ ವಿಸ್ತರಣೆಗೆ ಸೀಮಿತವಾಗಿಲ್ಲ; ಇದು ತಮ್ಮ ಅಧಿಕಾರದ ಅವಧಿಯನ್ನು ಸುಗಮಗೊಳಿಸಿಕೊಳ್ಳುವ ಮತ್ತು ಭವಿಷ್ಯದ 7 ವರ್ಷಗಳ ಸುದೀರ್ಘ ರಾಜಕೀಯ ಭವಿಷ್ಯವನ್ನು ಗಟ್ಟಿಮಾಡಿಕೊಳ್ಳುವ ತಂತ್ರ ಎಂಬ ವಿಶ್ಲೇಷಣೆ ಕೇಳಿ ಬಂದಿದೆ. ಹೈಕಮಾಂಡ್ ಈ ಪ್ರಪೋಸಲ್‌ಗೆ ಗ್ರೀನ್ ಸಿಗ್ನಲ್ ನೀಡುತ್ತದೆಯೇ ಎಂಬುದನ್ನು ಕಾದುನೋಡಬೇಕಿದೆ.
