ನ್ಯೂಯಾರ್ಕ್: ಕೋಟ್ಯಂತರ ಅಭಿಮಾನಿಗಳ ಕನಸಾಗಿದ್ದ ಫಿಫಾ ವಿಶ್ವಕಪ್ ಟ್ರೋಫಿಯನ್ನು (FIFA World Cup Trophy) ಎತ್ತಿಹಿಡಿದು ಸ್ಪೇನ್ ಆಟಗಾರರು ಸಂಭ್ರಮಿಸಿದ್ದಾರೆ ನಿಜ. ಆದರೆ, ಕ್ರೀಡಾಂಗಣದಲ್ಲಿ ಅವರು ಮುತ್ತಿಕ್ಕಿ, ಎದೆಗೆ ಅಪ್ಪಿಕೊಂಡ ಆ 18 ಕ್ಯಾರೆಟ್ ಅಪರಂಜಿ ಚಿನ್ನದ ‘ಅಸಲಿ ವಿಶ್ವಕಪ್ ಟ್ರೋಫಿ’ಯನ್ನು ತಮ್ಮ ದೇಶಕ್ಕೆ ಒಯ್ಯಲು ಅವರಿಗೆ ಅಧಿಕಾರವಿಲ್ಲ.
ಹೌದು ವಿಶ್ವದ ಅತ್ಯಂತ ಅಮೂಲ್ಯವಾದ ಈ ಟ್ರೋಫಿಯ ಹಿಂದೆ ಕಟ್ಟುನಿಟ್ಟಾದ ಭದ್ರತಾ ನಿಯಮಗಳು ಇರುವುದರಿಂದ ವಿಶ್ವ ಚಾಂಪಿಯನ್ ಪಟ್ಟಕ್ಕೇರಿದರೂ ಆ ಅಸಲಿ ಬಂಗಾರದ ಟ್ರೋಫಿಯನ್ನು ಚಾಂಪಿಯನ್ನರಿಗೆ ಶಾಶ್ವತವಾಗಿ ನೀಡುವುದಿಲ್ಲ.
ಫೈನಲ್ ಪಂದ್ಯ ಮುಗಿದ ತಕ್ಷಣ ಮೈದಾನದಲ್ಲಿ ನಡೆಯುವ ವಿಜಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ (Trophy Presentation) ಮಾತ್ರ ವಿಜೇತ ತಂಡಕ್ಕೆ 18 ಕ್ಯಾರೆಟ್ ಅಪರಂಜಿ ಚಿನ್ನದಿಂದ ಮಾಡಿದ ಅಸಲಿ ಟ್ರೋಫಿಯನ್ನು ನೀಡಲಾಗುತ್ತದೆ. ಈ ಸಂಭ್ರಮಾಚರಣೆ ಮುಗಿಯುತ್ತಿದ್ದಂತೆಯೇ ಫಿಫಾ ಅಧಿಕಾರಿಗಳು ಅದನ್ನು ಸುರಕ್ಷಿತವಾಗಿ ವಾಪಸ್ ಪಡೆಯುತ್ತಾರೆ.
خمس حقائق عن الكأس الذهبية لـ @FIFAWorldCup 🏆 pic.twitter.com/HFRRl2gllw
— FIFA – عربي (@fifacom_ar) July 18, 2026
ಚಾಂಪಿಯನ್ ತಂಡಕ್ಕೆ ತಮ್ಮ ದೇಶಕ್ಕೆ ಕೊಂಡೊಯ್ಯಲು ಮತ್ತು ತಮ್ಮ ಫುಟ್‌ಬಾಲ್ ಮ್ಯೂಸಿಯಂನಲ್ಲಿ ಇಟ್ಟುಕೊಳ್ಳಲು ಫಿಫಾ ವಿನ್ನರ್ಸ್ ಟ್ರೋಫಿಯನ್ನು (FIFA World Cup Winners’ Trophy) ನೀಡುತ್ತದೆ. ಇದು ಚಿನ್ನದ ಲೇಪಿತ (Gold-plated) ಕಂಚಿನ ಟ್ರೋಫಿಯಾಗಿದ್ದು, ಅದರ ಮೇಲೆ ವಿಜೇತ ವರ್ಷ ಹಾಗೂ ದೇಶದ ಹೆಸರು ಕೆತ್ತಲಾಗಿರುತ್ತದೆ.
ಅಸಲಿ ಟ್ರೋಫಿ ಎಲ್ಲಿರುತ್ತದೆ?
ಸ್ವಿಟ್ಜರ್‌ಲ್ಯಾಂಡ್‌ನ ಝೂರಿಚ್‌ನಲ್ಲಿರುವ ‘ಫಿಫಾ ವರ್ಲ್ಡ್ ಫುಟ್‌ಬಾಲ್ ಮ್ಯೂಸಿಯಂ’ನಲ್ಲಿ ಈ ಅಸಲಿ ಟ್ರೋಫಿಯನ್ನು ವರ್ಷವಿಡೀ ಕಟ್ಟುನಿಟ್ಟಿನ ಭದ್ರತೆಯಲ್ಲಿ ಇಡಲಾಗಿರುತ್ತದೆ. ಕೇವಲ ವಿಶ್ವಕಪ್ ಟ್ರೋಫಿ ಪ್ರವಾಸ (Trophy Tour) ಮತ್ತು ಫೈನಲ್ ಪಂದ್ಯದ ವೇಳೆ ಮಾತ್ರ ಇದನ್ನು ಹೊರತರಲಾಗುತ್ತದೆ. ಇದನ್ನೂ ಓದಿ: FIFA World Cup: ಚಾಂಪಿಯನ್ ಸ್ಪೇನ್‌ಗೆ ಸಿಕ್ಕಿದ್ದೆಷ್ಟು? ಬಹುಮಾನಕ್ಕೆ ಕೋಟಿ ಕೋಟಿ ಸುರಿದ ಫಿಫಾ
ಯಾಕೆ ಈ ನಿಯಮ?
1970ರಲ್ಲಿ ಬ್ರೆಜಿಲ್ ತಂಡ ಮೂರನೇ ಬಾರಿಗೆ ವಿಶ್ವಕಪ್ ಗೆದ್ದಾಗ ಆಗಿನ ನಿಯಮದಂತೆ ಜೂಲ್ಸ್ ರಿಮೆಟ್ ಟ್ರೋಫಿಯನ್ನು ಶಾಶ್ವತವಾಗಿ ಬ್ರೆಜಿಲ್‌ಗೆ ನೀಡಲಾಗಿತ್ತು. ಆದರೆ 1983ರಲ್ಲಿ ರಿಯೊ ಡಿ ಜನೈರೊದಲ್ಲಿರುವ ಬ್ರೆಜಿಲ್ ಫುಟ್‌ಬಾಲ್ ಕಚೇರಿಯಿಂದ ಆ ಅಸಲಿ ಟ್ರೋಫಿ ಕಳವಾಯಿತು. ಕಳ್ಳರು ಅದನ್ನು ಕರಗಿಸಿ ಚಿನ್ನ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತದೆ
ಈ ಘಟನೆಯ ನಂತರ ಪಾಠ ಕಲಿತ ಫಿಫಾ 1974ರಲ್ಲಿ ಹೊಸದಾಗಿ ವಿನ್ಯಾಸಗೊಳಿಸಿದ ಹಾಲಿವಿಶ್ವಕಪ್ ಟ್ರೋಫಿಯನ್ನು ಯಾವುದೇ ದೇಶಕ್ಕೆ ಶಾಶ್ವತವಾಗಿ ನೀಡುವುದಿಲ್ಲ ಎಂಬ ಕಠಿಣ ನಿಯಮ ಜಾರಿಗೆ ತಂದಿತು.

ಟ್ರೋಫಿಯ ವಿಶೇಷತೆ ಏನು?
ಈ ಟ್ರೋಫಿ 36.5 ಸೆಂ.ಮೀ ಎತ್ತರ ಹಾಗೂ 6.17 ಕಿಲೋಗ್ರಾಂ ತೂಕವಿದೆ. ಇದರಲ್ಲಿ 4.9 ಕೆಜೆ 18-ಕ್ಯಾರೆಟ್ ಶುದ್ಧ ಚಿನ್ನವನ್ನು ಬಳಸಲಾಗಿದೆ. ಟ್ರೋಫಿಯ ತಳಭಾಗದಲ್ಲಿ ಎರಡು ವರ್ತುಲಾಕಾರದ ಹಸಿರು ಬಣ್ಣದ ಪಟ್ಟಿಗಳಿವೆ. ಇವುಗಳನ್ನು ಅಪರೂಪದ ಮಲಾಕೈಟ್ (Malachite) ಎಂಬ ಪ್ರಾಕೃತಿಕ ಖನಿಜದ ಕಲ್ಲುಗಳಿಂದ ನಿರ್ಮಿಸಲಾಗಿದೆ. ಟ್ರೋಫಿಯ 25% ಭಾಗವನ್ನು ತಾಮ್ರ ಸೇರಿದಂತೆ ಇತರೆ ಲೋಹಗಳನ್ನು ಬಳಸಿ ವಿನ್ಯಾಸ ಮಾಡಲಾಗಿದೆ.
36.5 ಸೆಂ.ಮೀ ಎತ್ತರದ ಈ ಟ್ರೋಫಿ ಸಂಪೂರ್ಣವಾಗಿ ಒಳಗೂ ಗಟ್ಟಿ ಚಿನ್ನದಿಂದ ತುಂಬಿದ್ದರೆ, ಇದರ ತೂಕ ಬರೋಬ್ಬರಿ 70 ರಿಂದ 80 ಕಿಲೋಗ್ರಾಂ ಇರಬೇಕಿತ್ತು. ಅಷ್ಟು ತೂಕವಿದ್ದರೆ ಆಟಗಾರರಿಗೆ ಕೈಗಳಲ್ಲಿ ಮೇಲಕ್ಕೆತ್ತಿ ಸಂಭ್ರಮಿಸಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಇದರ ಒಳಗಡೆ ಟೊಳ್ಳಾಗಿದೆ.
ಹಾಲಿ ಬಳಕೆಯಲ್ಲಿರುವ ಈ ಟ್ರೋಫಿಯನ್ನು 1974ರಲ್ಲಿ ಇಟಲಿಯ ಪ್ರಸಿದ್ಧ ಶಿಲ್ಪಿ ಸಿಲ್ವಿಯೋ ಗಜ್ಜಾನಿಗ (Silvio Gazzaniga) ವಿನ್ಯಾಸಗೊಳಿಸಿದ್ದಾರೆ. ಭೂಮಿಯನ್ನು ಇಬ್ಬರು ಕ್ರೀಡಾಪಟುಗಳು ತಮ್ಮ ಕೈಗಳಲ್ಲಿ ಮೇಲಕ್ಕೆತ್ತಿ ಹಿಡಿದಿರುವಂತೆ ಇದನ್ನು ಕೆತ್ತಲಾಗಿದೆ. ಇದನ್ನೂ ಓದಿ: ಫೈನಲ್ ಬಳಿಕ ಮೈದಾನದಲ್ಲೇ ಕಿತ್ತಾಟ – ಸ್ಪೇನ್ ಆಟಗಾರನ ಕುತ್ತಿಗೆ ಹಿಡಿದ ಪರೆಡೆಸ್‌ಗೆ ರೆಡ್ ಕಾರ್ಡ್
ಇದರ ಪ್ರಸ್ತುತ ಕಚ್ಚಾ ಚಿನ್ನದ ಮೌಲ್ಯವೇ ಲಕ್ಷಾಂತರ ಡಾಲರ್ ಆಗಿದ್ದು, ಕ್ರೀಡಾ ಇತಿಹಾಸದ ಮೌಲ್ಯವನ್ನು ಸೇರಿಸಿದರೆ ಇದು ಸುಮಾರು 170 ಕೋಟಿ ರೂ.ಗೂ ಅಧಿಕ (20 ಮಿಲಿಯನ್ ಡಾಲರ್) ಮೌಲ್ಯದ್ದಾಗಿದೆ.
