– ಚೆನ್ನಮ್ಮ ಹುಟ್ಟೂರಿನಲ್ಲಿ ನೀರವ ಮೌನ
ಬೆಂಗಳೂರು/ಹಾಸನ: ಚೆನ್ನಮ್ಮ.. ಮಾಜಿ ಪ್ರಧಾನಿ ದೇವೇಗೌಡರ (HD DeveGowda) ಪತ್ನಿ.. ಕುಮಾರಸ್ವಾಮಿ, ರೇವಣ್ಣ ಅವರ ಹೆತ್ತಮ್ಮ.. ಅನೇಕರ ಪಾಲಿನ ಅನ್ನಪೂರ್ಣೆ.. ಸರಳ, ನಮ್ರತೆಯ ಯಜಮಾನಿ. ದೇವೇಗೌಡರ ಹಿಂದಿನ ಶಕ್ತಿ… ಹೀಗೆ ಚೆನ್ನಮ್ಮ ಅವರ ಬಗ್ಗೆ ಹೇಳುತ್ತಾ ಹೋದರೆ ಪದಗಳೇ ಸಾಲಲ್ಲ. ಆದರೆ ಇವತ್ತು ಚೆನ್ನಮ್ಮ ನಮ್ಮೊಂದಿಲ್ಲ.
ಹಾಸನ ಜಿಲ್ಲೆ ಮನೆ ಮಗಳು ಚೆನ್ನಮ್ಮ (Chennamma). ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಮುತ್ತಿಗೆ ಹಿರಿಹಳ್ಳಿ ಗ್ರಾಮದಲ್ಲಿ ಜನಿಸಿದವರು. ಚೆನ್ನಮ್ಮನವರ ಸಾವಿಗೆ ಇಡೀ ಗ್ರಾಮಸ್ಥರು ಕಂಬನಿ ಮಿಡಿಯುತ್ತಿದ್ದಾರೆ. ಇಡೀ ಮುತ್ತಿಗೆ ಹಿರಿಹಳ್ಳಿ ಗ್ರಾಮದಲ್ಲಿ ನೀರನ ಮೌನ ಆವರಿಸಿದೆ.

ಚೆನ್ನಮ್ಮರನ್ನು ನೆನೆದು ಸಂಬಂಧಿಕರು ಕಣ್ಣೀರಿಟ್ಟಿದ್ದಾರೆ. ಚೆನ್ನಮ್ಮರನ್ನು ಕಳೆದುಕೊಂಡು ಅನಾಥರಾಗಿದ್ದೇವೆ. ಅನಾಥೆಯಾದ ನನ್ನನ್ನ ಮಗಳಂತೆ ಬೆಳೆಸಿದ್ದಾರೆ. ಸ್ವತಃ ಅಡುಗೆ ಮಾಡಿ ಬಡಿಸುತ್ತಿದ್ದರು, ಹಳ್ಳಿಯಿಂದ ಯಾರೇ ಬಂದರೂ ಬಸ್ ಚಾರ್ಜ್ ಕೊಟಟು ಕಳಿಸುತ್ತಿದ್ದರು. ಇವತ್ತು ಅವರಿಲ್ಲ ಅನ್ನೋದು ನಮಗೆ ನಂಬೋಕೆ ಆಗ್ತಿಲ್ಲ ಎಂದು ಭಾವುಕರಾಗಿದ್ದಾರೆ.
ವಾಸ್ತುಪ್ರಕಾರ ಅಂತ್ಯಕ್ರಿಯೆಗೆ ಸ್ಥಳ ನಿಗದಿ
ಅಪಾರ ದೈವಭಕ್ತೆಯಾಗಿದ್ದ ಚೆನ್ನಮ್ಮರ ಅಂತ್ಯಕ್ರಿಯೆಗೆ ವಾಸ್ತು ಪ್ರಕಾರವೇ ಸ್ಥಳ ನಿಗದಿ ಮಾಡಲಾಗಿದೆ. ಬೆಂಗಳೂರಿನ ಖ್ಯಾತ ವಾಸ್ತು ತಜ್ಞ ಹರಿಪ್ರಸಾದ್ ಅವರಿಂದ ಸ್ಥಳ ನಿಗದಿ ಮಾಡಲಾಗಿದ್ದು, ದೇವೇಗೌಡರ ಕುಟುಂಬ ಸದಸ್ಯರ ಕೋರಿಕೆ ಮೇಲೆ ಹರದನಹಳ್ಳಿಗೆ ಬಂದಿದ್ದಾರೆ. ಅಂತ್ಯಕ್ರಿಯೆ ಸ್ಥಳದ ಬಗ್ಗೆ ಮಾತನಾಡಿದ ಅವರು, ಈಶಾನ್ಯದಲ್ಲಿ ಭಾರ ಇರಬಾರದು, ಉತ್ತರದಲ್ಲಿ ಮತ್ತು ಪೂರ್ವದಲ್ಲಿ ತಗ್ಗಿರಬೇಕು, ಪಶ್ಚಿಮ ಮತ್ತು ದಕ್ಷಿಣದಲ್ಲಿ ಎತ್ತರ ಇರಬೇಕು, ಅಲ್ಲದೇ ಆ ಎರಡು ದಿಕ್ಕಿನಲ್ಲಿ ಭಾರ ಇರಬೇಕು. ಅದರಂತೆ ನಾವು ಅಂತಿಮ ಸಂಸ್ಕಾರದ ಜಾಗ ಸಿದ್ಧಪಡಿಸಿದ್ದೇವೆ ಎಂದು ತಿಳಿಸಿದ್ದಾರೆ.

ಗಣ್ಯರಿಗಾಗಿ 5 ಹೆಲಿಪ್ಯಾಡ್, 2 ಸಾವಿರ ಪೊಲೀಸ್ ಭದ್ರತೆ
ಹೊಳೆನರಸೀಪುರದ ರೇವಣ್ಣ ನಿವಾಸಕ್ಕೆ ಚೆನ್ನಮ್ಮ ಪಾರ್ಥಿವ ಶರೀರ ಆಗಮಿಸಲಿದೆ. ನಾಳಿನ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹೀಗಾಗಿ ಭದ್ರತೆಯನ್ನು ಹೆಚ್ಚಿಸಲಾಗಿದೆ. 5 ಎಸ್ಪಿಗಳ ನೇತೃತ್ವದಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರನ್ನ ನಿಯೋಜಿಸಲಾಗಿದೆ. ರೇವಣ್ಣ ನಿವಾಸಕ್ಕೆ ಆಗಮಿಸಿದ ಡಿಸಿ ಲತಾ ಕುಮಾರಿ ಅವರು ಸಾರ್ವಜನಿಕ ದರ್ಶನದ ವ್ಯವಸ್ಥೆಯನ್ನ ಖುದ್ದು ಪರಿಶೀಲನೆ ನಡೆಸಿದ್ರು.

ಅಲ್ಲದೇ ಚೆನ್ನಮ್ಮರ ಪಾರ್ಥಿವ ಶರೀರವನ್ನ ಹುಟ್ಟೂರು ಮುತ್ತಿಗೆ ಹಿರಿಹಳ್ಳಿಗೂ ಕೊಂಡೊಯ್ಯಲಾಗುತ್ತದೆ. ಗಣ್ಯರ ಆಗಮನ ಹಿನ್ನೆಲೆ 5 ಹೆಲಿಪ್ಯಾಡ್ ನಿರ್ಮಿಸಲಾಗಿದೆ. ಹರದನಹಳ್ಳಿಯಲ್ಲಿ ಎರಡು, ಹೊಳೆನರಸೀಪುರದಲ್ಲಿ ಮೂರು ಹೆಲಿಪ್ಯಾಡ್ ನಿರ್ಮಿಸಿದ್ದು, ಜನರು ಹೆಚ್ಚು ಸೇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಹೇಳಿದರು.
