ಟೆಹ್ರಾನ್: ಇರಾನ್, ಅಮೆರಿಕ ನಡುವಿನ ಎರಡನೇ ಸುತ್ತಿನ ಮಾತುಕತೆ ವಿಚಾರ ಇನ್ನೂ ಗೊಂದಲದಲ್ಲಿಯೇ ಇದೆ. ನಾವು ಪಾಕಿಸ್ತಾನಕ್ಕೆ ಹೋಗುತ್ತಿದ್ದೇವೆ ಎಂದು ಅಮೆರಿಕ ಹೇಳಿದರೆ, ಇತ್ತ ಇರಾನ್ ನಾವು ಹೋಗಲ್ಲ ಎಂದು ಹೇಳುತ್ತಿದೆ. ಇದರ ನಡುವೆಯೇ ಇಸ್ಲಾಮಾಬಾದ್‌ನಲ್ಲಿ ಮಾತ್ರ ಮಾತುಕತೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ (America-Israel-Iran War) ಯುದ್ಧ ಈಗ ಜಾಗತಿಕವಾಗಿ ನೂರಾರು ಸಂಕಷ್ಟಗಳನ್ನು ಸೃಷ್ಟಿಸಿದೆ. ಇದಕ್ಕೆ ಇತಿಶ್ರೀ ಹಾಡಲೆಂದೇ ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅಮೆರಿಕದ ಷರತ್ತುಗಳನ್ನು ಒಪ್ಪದ ಇರಾನ್ ಮಾತುಕತೆಯ ಮೇಜಿನಿಂದ ಎದ್ದು ನಡೆದಿತ್ತು. ಈಗ ಮತ್ತೊಂದು ಸುತ್ತಿನ ಮಾತುಕತೆಗೆ ಮತ್ತೆ ಅದೇ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸೃಷ್ಟಿಯಾಗಿದೆ. ಆದರೆ ಇದು ನಡೆಯೋದು ಬಹುತೇಕ ಡೌಟ್ ಅಂತಲೇ ಹೇಳಲಾಗುತ್ತಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವ ಪ್ರಕಾರ ಶಾಂತಿ ಮಾತುಕತೆಗೆ ಈಗಾಗಲೇ ಜೆಡಿ ವ್ಯಾನ್ಸ್ ನೇತೃತ್ವದ ತಂಡ ಪಾಕಿಸ್ತಾನಕ್ಕೆ ಹೊರಟಿದೆ. ಆದ್ರೆ ಯುಎಸ್‌ನ ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಜೆಡಿ ವ್ಯಾನ್ಸ್ ಇನ್ನೂ ಅಮೆರಿಕದಲ್ಲಿಯೇ ಇದ್ದಾರೆ. ಇತ್ತ ಇರಾನ್ ಅಮೆರಿಕದ ಜೊತೆ ಶಾಂತಿ ಮಾತುಕತೆಗೆ ನಾವು ಬರೋದಿಲ್ಲ ಎಂದು ಹೇಳಿದೆ. ಅಮೆರಿಕ ತನ್ನ ಬೇಡಿಕೆಯಿಂದ ಹಿಂದೆ ಸರಿಯುವವರೆಗೂ ಮಾತುಕತೆಯಲ್ಲಿ ಭಾಗಿಯಾಗಲ್ಲ ಎಂದು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಹೇಳಿದ್ದಾರೆ. ಮತ್ತೊಂದು ಕಡೆ ವಿದೇಶಾಂಗ ಇಲಾಖೆ ವಕ್ತಾರ ಇಸ್ಮಾಯಿಲ್ ಬರಾಖಿ ನಾವು ಇನ್ನೂ ಮಾತುಕತೆಯಲ್ಲಿ ಭಾಗಿಯಾಗುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಇರಾನ್ ಶಾಂತಿ ಮಾತುಕತೆ ವಿಚಾರದಲ್ಲಿ ಅನೇಕ ಗೊಂದಲಗಳನ್ನು ಮೂಡಿಸುತ್ತಿದೆ. ಕಳೆದ ಬಾರಿ ಇದೇ ರೀತಿ ನಾವು ಬರಲ್ಲ ಎಂದಿದ್ದ ಇರಾನ್ ಕೊನೆಗೂ ಅಬ್ಬಾಸ್ ಅರಗ್ಚಿ ನೇತೃತ್ವದ ನಿಯೋಗವನ್ನು ಕಳುಹಿಸಿಕೊಟ್ಟಿತ್ತು.
ಈ ನಡುವೆ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಇರಾನ್ ರಾಯಭಾರಿ ರೆಜಾ ಅಮಿರಿ ಮೊಘದ್ದಮ್‌ಗೆ ಇಸ್ಲಾಮಾಬಾದ್‌ನಲ್ಲಿ ಮುಂಬರುವ ಶಾಂತಿ ಮಾತುಕತೆಗಳ ವ್ಯವಸ್ಥೆಗಳ ಕುರಿತು ವಿವರಿಸಿದ್ದಾರೆ. ಸಚಿವಾಲಯದ ಹೇಳಿಕೆಯ ಪ್ರಕಾರ, ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಾಜತಾಂತ್ರಿಕತೆಯ ಮೂಲಕ ಶಾಶ್ವತ ಪರಿಹಾರದ ಅಗತ್ಯವನ್ನು ಎರಡೂ ಕಡೆಯವರು ಒತ್ತಿ ಹೇಳಿದರು.
ಶಾಂತಿ ಮಾತುಕತೆ ಒಂದು ಕಡೆ ಅನಿಶ್ಚಿತತೆಯಿಂದ ಕೂಡಿದ್ರೆ ಮತ್ತೊಂದು ಕಡೆ ಏಪ್ರಿಲ್ 22ರಂದು ಇರಾನ್ ಮತ್ತು ಯುಎಸ್ ನಡುವೆ ಘೋಷಣೆಯಾಗಿರೋ ಕದನ ವಿರಾಮ ಮುಗಿಯಲಿದೆ. ಒಂದು ವೇಳೆ ಇರಾನ್ ಶಾಂತಿ ಮಾತುಕತೆಯಲ್ಲಿ ಒಪ್ಪಂದಕ್ಕೆ ಬಗ್ಗದಿದ್ದಲ್ಲಿ ದೊಡ್ಡ ಮಟ್ಟದ ಬಾಂಬ್‌ಗಳ ಸುರಿಮಳೆ ಇರಾನ್ ಮೇಲೆ ಆಗಲಿದೆ. ಇರಾನ್ ಪ್ರಮುಖ ವಿದ್ಯುತ್ ಸ್ಥಾವರಗಳು, ಸೇತುವೆಗಳು ನೆಲಸಮವಾಗಲಿವೆ ಎಂದು ಟ್ರಂಪ್ ಗುಡುಗಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಇರಾನ್ ಅಣು ಶಕ್ತಿಯನ್ನು ಹೊಂದುವAತಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ.
ಅಮೆರಿಕದ ವಿಪಕ್ಷಗಳು ಇಸ್ರೇಲ್ ಅಮೆರಿಕವನ್ನು ಅನಗತ್ಯವಾಗಿ ಯುದ್ಧಕ್ಕೆ ಎಳೆದು ತಂದಿದೆ ಎಂಬ ಆರೋಪಗಳಿಗೆ ಉತ್ತರಿಸಿರುವ ಡೊನಾಲ್ಡ್ ಟ್ರಂಪ್, ಇಸ್ರೇಲ್ ನನ್ನ ಜೊತೆ ಇರಾನ್ ವಿರುದ್ಧದ ಯುದ್ಧದ ಬಗ್ಗೆ ಎಂದಿಗೂ ಮಾತನಾಡಿಲ್ಲ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿ ಉದ್ದೇಶವೇ ಹಾಗಿದೆ. ಇರಾನ್ ಅನ್ನು ಎಂದಿಗೂ ನ್ಯೂಕ್ಲಿಯರ್ ಶಕ್ತಿ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್ ಟ್ರುತ್‌ನಲ್ಲಿ ಬರೆದುಕೊಂಡಿದ್ದಾರೆ.
ಇರಾನ್‌ನಲ್ಲಿ ಯಾರ ಆಡಳಿತ ನಡೆಯುತ್ತಿದೆ ಅನ್ನೋದು ಇನ್ನೂ ಸ್ಪಷ್ಟವಾಗಿಲ್ಲ. ಪರಮೋಚ್ಛ ನಾಯಕ ಖಮೇನಿ ಆಡಳಿತವೋ, ಐಆರ್‌ಜಿಸಿ ಆಡಳಿತವೋ ಅನ್ನೋ ಗೊಂದಲ ಇನ್ನೂ ಮೂಡಿದೆ. ಆದ್ರೆ ಈಗ ಇರಾನ್‌ನನ್ನು ಐಆರ್‌ಜಿಸಿ ನಿಯಂತ್ರಣಕ್ಕೆ ತೆಗೆದುಕೊಂಡಿದೆ. ಓಮನ್ ಕೊಲ್ಲಿಯಲ್ಲ ಇರಾನ್‌ನ ಸರಕು ಹಡಗು ಟೌಸ್ಕಾವನ್ನು ಅಮೆರಿಕ ವಶಕ್ಕೆ ಪಡೆದ ಬೆನ್ನಲ್ಲಿಯೇ ಹೊರ್ಮುಜ್‌ನಲ್ಲಿ ಐಆರ್‌ಜಿಸಿ ಹದ್ದಿಗಣ್ಣಿಟ್ಟು ಕಾವಲು ಕಾಯುತ್ತಿದೆ. ಅಮೆರಿಕ ನೌಕಾಪಡೆಯ ಮೇಲೆ ಇರಾನ್ ಪ್ರತಿದಾಳಿಯನ್ನೂ ನಡೆಸಿದೆ. ಯಾವುದೇ ಕಾರಣಕ್ಕೂ ಅಮೆರಿಕಕ್ಕೆ ಯುರೇನಿಯಂ ಒಪ್ಪಿಸಲ್ಲ ಅಂತ ಐಆರ್‌ಜಿಸಿ ಕಮಾಂಡರ್ ಅಹ್ಮದ್ ವಹಿದಿ ಗುಡಗಿದ್ದಾರೆ.
ಸದ್ಯ ಹೊರ್ಮುಜ್ ಜಲಸಂಧಿ ಅಮೆರಿಕ ಮತ್ತು ಇರಾನ್ ನಡುವಿನ ಕದನದ ಪ್ರಮುಖ ಕೇಂದ್ರಬಿAದುವಾಗಿದೆ. ಇಬ್ಬರೂ ಹೊರ್ಮುಜ್ ಅನ್ನು ಮುಕ್ತಗೊಳಿಸಲು ಸಜ್ಜಾಗಿಲ್ಲ. ಇದರ ಬೆನ್ನಲ್ಲಿಯೇ ಚೀನಾ ಯುಎಇ ಜೊತೆ ಹೊರ್ಮುಜ್ ವಿಚಾರವಾಗಿ ಮಾತನಾಡಿದೆ. ಯುಎಇ ಡಾಲರ್ ಬದಲು ಚೀನಾದ ಯೆನ್ ಕರನ್ಸಿಯೊಂದಿಗೆ ವ್ಯಾಪಾರ ವ್ಯವಹಾರ ಶುರು ಮಾಡುವುದಾಗಿ ಗುಡುಗಿದೆ. ಮತ್ತೆ ಹೊರ್ಮುಜ್ ಬಂದಾದ ಬೆನ್ನಲ್ಲಿಯೇ ಕಚ್ಚಾತೈಲ ಬೆಲೆಯಲ್ಲಿ ಏರಿಕೆಯಾಗಿದ್ದು, ಬ್ಯಾರಲ್ ಕಚ್ಚಾತೈಲ 95 ಡಾಲರ್ ತಲುಪಿದೆ.
ಮಧ್ಯಪ್ರಾಚ್ಯದ ಸಂಘರ್ಷ ಸದ್ಯದಲ್ಲಿ ಕೊನೆಗೊಳ್ಳುವ ಯಾವ ಸೂಚನೆಗಳು ಕಾಣುತ್ತಿಲ್ಲ. ಹೆಸರಿಗೆ ಕದನ ವಿರಾಮ ಘೋಷಣೆಯಾಗಿದ್ರು, ತೆರೆಮರೆಯಲ್ಲಿ ಪರೋಕ್ಷ ಯುದ್ಧಗಳು ಜಾರಿಯಲ್ಲಿವೆ.

