ಉಡುಪಿ: ಶ್ರೀ ಕ್ಷೇತ್ರ ಧರ್ಮಸ್ಥಳದ (Dharmasthala Case) ವಿರುದ್ಧ ಷಡ್ಯಂತ್ರ ನಡೆಸಲಾಗುತ್ತಿದೆ ಎಂಬ ಆರೋಪಗಳು ಆತಂಕಕಾರಿ ಬೆಳವಣಿಗೆಯಾಗಿದ್ದು, ಈ ಕುರಿತು ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಬಹಿರಂಗಪಡಿಸಬೇಕು ಎಂದು ಪರ್ಯಾಯ ಪೀಠಾಧಿಪತಿ ಶೀರೂರು ಮಠದ ಶ್ರೀ ವೇದವರ್ಧನತೀರ್ಥ ಶ್ರೀಪಾದರು (Shiroor Mutt seer Vedavardhana Theertha Swami) ಅಭಿಪ್ರಾಯಪಟ್ಟಿದ್ದಾರೆ.
ಶ್ರೀಕ್ಷೇತ್ರ ಧರ್ಮಸ್ಥಳದಂತಹ ಮಹತ್ವದ ಧಾರ್ಮಿಕ ಕ್ಷೇತ್ರದ ಬಗ್ಗೆ ಷಡ್ಯಂತ್ರ ನಡೆಸಲು ನೂರಾರು ಕೋಟಿ ರೂಪಾಯಿಗಳ ಅವ್ಯವಹಾರ ನಡೆದಿದೆ ಎನ್ನುವ ಆರೋಪಗಳು ಕೇಳಿಬರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಇಂತಹ ಆರೋಪಗಳ ಹಿಂದೆ ಇರುವ ಸತ್ಯಾಸತ್ಯತೆಯನ್ನು ಪರಿಶೀಲಿಸಿ, ಧಾರ್ಮಿಕ ಕ್ಷೇತ್ರದ ವಿರುದ್ಧ ಸಂಚು ರೂಪಿಸಿದವರು ಯಾರು ಎಂಬುದನ್ನು ಬಯಲಿಗೆಳೆಯಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಪ್ರಕರಣ: ಗಿರೀಶ್ ಮಟ್ಟಣ್ಣನವರ್ ವಿರುದ್ಧ ಎಸ್‌ಐಟಿಗೆ ಮಾಸ್ಕ್‌ಮ್ಯಾನ್ ದೂರು
ಧರ್ಮಸ್ಥಳವು ಲಕ್ಷಾಂತರ ಭಕ್ತರ ನಂಬಿಕೆ ಮತ್ತು ಭಕ್ತಿಯ ಕೇಂದ್ರವಾಗಿದ್ದು, ಇಂತಹ ಪವಿತ್ರ ಕ್ಷೇತ್ರಗಳ ಕುರಿತು ಅವಹೇಳನಕಾರಿ ಷಡ್ಯಂತ್ರಗಳು ಸಮಾಜದಲ್ಲಿ ಗೊಂದಲ ಮತ್ತು ಅಶಾಂತಿಗೆ ಕಾರಣವಾಗಬಹುದು. ಆದ್ದರಿಂದ ಸಂಬಂಧಿತ ಅಧಿಕಾರಿಗಳು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಧಾರ್ಮಿಕ ಕ್ಷೇತ್ರಗಳ ಗೌರವ ಮತ್ತು ಪಾವಿತ್ರ‍್ಯವನ್ನು ಕಾಪಾಡುವ ನಿಟ್ಟಿನಲ್ಲಿ ಸಮಸ್ತ ಹಿಂದೂ ಸಮಾಜ ಜಾಗೃತರಾಗಬೇಕಿದ್ದು, ಇಂತಹ ಬೆಳವಣಿಗೆಗಳ ವಿರುದ್ಧ ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಚೌಕಟ್ಟಿನೊಳಗೆ ಧ್ವನಿ ಎತ್ತಬೇಕು ಎಂದು ಶ್ರೀಗಳು ಕರೆ ನೀಡಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಬುರುಡೆ ಕೇಸ್‌ನಲ್ಲಿ ಪ್ರಕಾಶ್ ರಾಜ್ ಹೆಸರು ತಳುಕು – ಎಕ್ಸ್ ಪೋಸ್ಟ್‌ನಲ್ಲಿ ನಟ ಸ್ಪಷ್ಟನೆ
