ನವದೆಹಲಿ: ಕರ್ತವ್ಯ ನಿರ್ವಹಿಸುತ್ತಿರುವಾಗಲೇ ಭೀಕರ ರಸ್ತೆ ಅಪಘಾತದಲ್ಲಿ (Delhi Accident) ಪೊಲೀಸ್ ಹೆಡ್ ಕಾನ್‌ಸ್ಟೇಬಲ್‌ವೊಬ್ಬರು ಮೃತಪಟ್ಟಿರುವ ಘಟನೆ ಕಾಶ್ಮೀರಿ ಗೇಟ್ ಐಎಸ್‌ಬಿಟಿ ಪ್ರದೇಶದಲ್ಲಿ ನಡೆದಿದೆ.
ಮೃತ ಹೆಡ್ ಕಾನ್‌ಸ್ಟೇಬಲ್ ರಾಜಸ್ಥಾನ (Rajasthan) ಮೂಲದ ಅನಿಲ್ ಕುಮಾರ್ ಎಂದು ಗುರುತಿಸಲಾಗಿದೆ.
ಶನಿವಾರ ಅವರು ಶಾಂತಿ ವನದಿಂದ ಚಾಂದಗಿ ರಾಮ್ ಕಡೆಗೆ ಹೋಗುವ ರಸ್ತೆಯ ಬದಿಯಲ್ಲಿ ನಿಂತು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಸ್ಕೂಟರ್‌ವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಅನಿಲ್ ಕುಮಾರ್ ರಸ್ತೆಯ ಮೇಲೆ ಬಿದ್ದಿದ್ದಾರೆ. ತಕ್ಷಣವೇ ಅದೇ ರಸ್ತೆಯಲ್ಲಿ ಹಿಂದಿನಿಂದ ಬರುತ್ತಿದ್ದ ಮಿನಿ ಟ್ರಕ್ ರಸ್ತೆಯ ಮೇಲೆ ಬಿದ್ದಿದ್ದ ಅನಿಲ್ ಅವರ ಮೇಲೆ ಹರಿದಿದೆ.
ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಕೂಡಲೇ ಸಿವಿಲ್ ಲೈನ್ಸ್ನಲ್ಲಿರುವ ಸುಶ್ರುತ್ ಟ್ರಾಮಾ ಸೆಂಟರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಗದೆ ಅವರು ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಚಂಡೀಗಢದಲ್ಲಿ ಹಾಡಹಗಲೇ ಭೀಕರ ಹತ್ಯೆ – ಮೆಡಿಕಲ್ ಶಾಪ್‌ಗೆ ನುಗ್ಗಿ ಕ್ಯಾಷಿಯರ್‌ಗೆ ಗುಂಡಿಕ್ಕಿ ಕೊಲೆ
ಘಟನೆ ನಡೆದ ತಕ್ಷಣ ಸ್ಕೂಟರ್‌ನಲ್ಲಿದ್ದ ಮೂವರು ಸವಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಆದರೆ ಮಿನಿ ಟ್ರಕ್ ಚಾಲಕನನ್ನು ಪೊಲೀಸರು ಸ್ಥಳದಲ್ಲೇ ವಶಕ್ಕೆ ಪಡೆದಿದ್ದಾರೆ. ಸದ್ಯ ತಲೆಮರೆಸಿಕೊಂಡಿರುವ ಸ್ಕೂಟರ್ ಸವಾರರಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿದ್ದು, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ.
ಅನಿಲ್ ಕುಮಾರ್ ಮೂಲತಃ ರಾಜಸ್ಥಾನದ ಕೋಟ್‌ಪುತ್ಲಿ ಜಿಲ್ಲೆಯ ಬೆಹ್ರೋರ್ ಪ್ರದೇಶದ ಜಾತಗನ್ವಾರ ಗ್ರಾಮದವರಾದವರು. ದೆಹಲಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಅವರು ಛತ್ತರಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಪೊಲೀಸ್ ಅಧಿಕಾರಿಗಳು ಮೃತರ ಕುಟುಂಬಕ್ಕೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ – ನರಸಿಂಹ ಕೊಲೆ ಕೇಸ್ ಆರೋಪಿ ಕಾಲಿಗೆ ಗುಂಡೇಟು
