ಇದು ಎಐ ಯುಗ. ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದ ಕೃತಕ ಬುದ್ದಿಮತ್ತೆ ಎಲ್ಲಾ ವಲಯಗಳಿಗೂ ತನ್ನ ಬಾಹುಳ್ಯವನ್ನು ಚಾಚುತ್ತಿದೆ. ಎಐ ಇಲ್ಲದ ಕ್ಷೇತ್ರವಿಲ್ಲ ಎಂಬಷ್ಟರ ಮಟ್ಟಿದೆ ತನ್ನ ಅಗತ್ಯವನ್ನು ಸಾಬೀತುಪಡಿಸುತ್ತಿದೆ. ಉತ್ಪಾದಕತೆಯನ್ನು ಅತ್ಯುತ್ತಮಗೊಳಿಸಲು ಅಥವಾ ನಾವು ಇಷ್ಟಪಡದ ಕಿರಿಕಿರಿ ಕೆಲಸಗಳನ್ನು ಪೂರ್ಣಗೊಳಿಸಲು ಮಾತ್ರ ಕೃತಕ ಬುದ್ದಿಮತ್ತೆಯನ್ನು ಬಳಸುತ್ತಿಲ್ಲ. ಇದು ಮಹೋನ್ನತ ಕಾರ್ಯಗಳಿಗೂ ಬಳಕೆಯಾಗುತ್ತಿದೆ. ಎಐ ಈಗ ವೈದ್ಯಕೀಯ ರಂಗವನ್ನೂ ಪ್ರವೇಶಿಸಿದೆ. ಮನುಕುಲವನ್ನು ರಾಕ್ಷಸನಂತೆ ಕಾಡಿದ ಮಾರಕ ಕೋವಿಡ್‌ಗೆ ವ್ಯಾಕ್ಸಿನ್ (Covid Vaccine) ಕಂಡುಹಿಡಿಯಲು ತುಂಬಾ ಸಮಯ ಬೇಕಾಯಿತು. ಅಷ್ಟೊತ್ತಿಗೆ ಜಗತ್ತಿನಾದ್ಯಂತ ಕೊರೊನಾ ಮಾರಿಗೆ ಲಕ್ಷಾಂತರ ಮಂದಿ ಬಲಿಯಾದರು. ಭವಿಷ್ಯದಲ್ಲಿ ಇಂತಹ ಸಾಂಕ್ರಾಮಿಕಗಳು ಮಾರಕವಾಗದಂತೆ ಆರಂಭದಲ್ಲೇ ನಿಯಂತ್ರಿಸುವ ಉದ್ದೇಶದಿಂದ ವೈದ್ಯಕೀಯ ರಂಗ ಹಗಲಿರುಳು ಶ್ರಮಿಸುತ್ತಿದೆ. ಅದಕ್ಕೀಗ ಎಐ ಕೂಡ ಕೈಜೋಡಿಸಿದೆ. ಜಗತ್ತಿನಲ್ಲೇ ಮೊಟ್ಟಮೊದಲ ಬಾರಿಗೆ ಎಐ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಈ ವ್ಯಾಕ್ಸಿನ್ ಪ್ರಯೋಗ ಕೂಡ ಯಶಸ್ವಿಯಾಗಿದೆ. ಆ ಮೂಲಕ ವೈದ್ಯಕೀಯ ರಂಗದಲ್ಲಿ ಕ್ರಾಂತಿ ಮಾಡಿದೆ.
ಏನಿದು ಎಐ ವಿನ್ಯಾಸಗೊಳಿಸಿದ ಲಸಿಕೆ? ವೈದ್ಯಕೀಯ ಕ್ಷೇತ್ರಕ್ಕೆ ವ್ಯಾಕ್ಸಿನ್ ಭರವಸೆ ಮೂಡಿಸುತ್ತಾ? ಭವಿಷ್ಯದಲ್ಲಿ ಸಾಂಕ್ರಮಿಕ ರೋಗಗಳನ್ನು ಆರಂಭದಲ್ಲೇ ನಿಯಂತ್ರಿಸುವ ಸಾಮರ್ಥ್ಯ ಹೊಂದಿದೆಯಾ? ಎಐ ಲಸಿಕೆ (AI Designed Vaccine) ಪರಿಣಾಮಕಾರಿಗುತ್ತಾ ಎಂಬ ಪ್ರಶ್ನೆಗಳು ಮೂಡುವುದು ಸಹಜ. ಸಂಕ್ಷಿಪ್ತ ವಿವರ ಇಲ್ಲಿದೆ. ಇದನ್ನೂ ಓದಿ: PublicTV Explainer: ಕೊರೊನಾ ಆಯ್ತು.. ಎಬೋಲಾ ಬಂತು – ಡೇಂಜರಸ್ ವೈರಸ್ ಬಗ್ಗೆ ಇರಲಿ ಎಚ್ಚರ!
ಏನಿದು ಎಐ ಲಸಿಕೆ?
ವಿವಿಧ ಮಾದರಿಯ ವೈರಸ್‌ಗಳನ್ನು ನಿಯಂತ್ರಿಸಲು ಎಐ ತಂತ್ರಜ್ಞಾನ (Artificial Intelligence) ಬಳಸಿ ಲಸಿಕೆಯೊಂದನ್ನು ವಿನ್ಯಾಸಗೊಳಿಸಲಾಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವು ಈ ಲಸಿಕೆಯನ್ನು ಅಭಿವೃದ್ಧಿಪಡಿಸಿದೆ. ಇದು ಕೃತಕ ಬುದ್ದಿಮತ್ತೆ ವಿನ್ಯಾಸಗೊಳಿಸಿದ ವಿಶ್ವದ ಮೊದಲ ಕೊರೊನಾ ವೈರಸ್ ಲಸಿಕೆಯಾಗಿದೆ. ಈ ಲಸಿಕೆಯ ಸಕ್ರಿಯ ಘಟಕವನ್ನು ಸಂಪೂರ್ಣವಾಗಿ ಎಐ ಮೂಲಕವೇ ಅಭಿವೃದ್ಧಿಪಡಿಸಲಾಗಿದೆ.

39 ಆರೋಗ್ಯವಂತರ ಮೇಲೆ ಪ್ರಯೋಗ
ಎಐ ಮೂಲಕವೇ ವಿನ್ಯಾಸಗೊಳಿಸಿರುವ ಲಸಿಕೆಯನ್ನು (Vaccine) ಮಾನವರ ಮೇಲೆ ಯಶಸ್ವಿ ಪ್ರಯೋಗ ನಡೆಸಿರುವುದು ವೈದ್ಯಕೀಯ ಇತಿಹಾಸದಲ್ಲೇ ಇದೇ ಮೊದಲು. 18ರಿಂದ 59 ವರ್ಷ ವಯಸ್ಸಿನ 39 ಆರೋಗ್ಯವಂತ ಸ್ವಯಂಸೇವಕರ ಮೇಲೆ ಈ ಲಸಿಕೆ ಪ್ರಯೋಗ ನಡೆಯಿತು. ಪ್ರಾಯೋಗಿಕವಾಗಿ ಲಸಿಕೆ ಸುರಕ್ಷಿತವಾಗಿದೆ. ಯಾವುದೇ ಗಮನಾರ್ಹ ಅಡ್ಡಪರಿಣಾಮಗಳನ್ನು ಉಂಟುಮಾಡಿಲ್ಲ. ಲಸಿಕೆ ಪ್ರಯೋಗ ಯಶಸ್ವಿಯಾದರೂ ಸಾರ್ವಜನಿಕ ಬಳಕೆಗೆ ಲಭ್ಯವಾಗುವಂತೆ ಮಾಡಲು ಅದನ್ನು ಹೆಚ್ಚಿನ ಪರೀಕ್ಷೆಗೆ ಒಳಪಡಿಸಬೇಕಿದೆ ಎಂದು ತಜ್ಞರು ತಿಳಿಸಿದ್ದಾರೆ.
ಹಲವು ವೈರಸ್.. ಒಂದೇ ವ್ಯಾಕ್ಸಿನ್
ನಿರ್ದಿಷ್ಟ ವೈರಸ್ ತಳಿಯನ್ನು ಮಾತ್ರ ಟಾರ್ಗೆಟ್ ಮಾಡುವ ಸಾಂಪ್ರದಾಯಿಕ ಲಸಿಕೆಗಳಿಗಿಂತ ಎಐ ವ್ಯಾಕ್ಸಿನ್ ಭಿನ್ನವಾಗಿದೆ. ಜಗತ್ತಿನಾದ್ಯಂತ ಮಾರಣಾಂತಿಕವಾಗಿ ಹರಡಿದ SARS, MERS ಮತ್ತು ಕೋವಿಡ್-19 ಸೇರಿದಂತೆ ವಿವಿಧ ಬಗೆಯ ವೈರಸ್‌ಗಳಿಂದ ಜನರನ್ನು ರಕ್ಷಿಸುವ ಸಾಮರ್ಥ್ಯವನ್ನು ಇದು ಹೊಂದಿದೆ. ಒಂದೇ ವೈರಸ್ ಮೇಲೆ ಗಮನ ಕೇಂದ್ರೀಕರಿಸಿ ಇದನ್ನು ಅಭಿವೃದ್ಧಿಪಡಿಸಿಲ್ಲ. ಸಂಶೋಧಕರು ಎಐ ಮತ್ತು ಕಂಪ್ಯೂಟರ್ ಮಾಡೆಲಿಂಗ್ ಅನ್ನು ಬಳಸಿಕೊಂಡು, ಅನೇಕ ವೈರಸ್‌ಗಳ ವಿರುದ್ಧ ಏಕಕಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಪ್ರಚೋದಿಸುವ ಸಾಮರ್ಥ್ಯವಿರುವ ‘ಸೂಪರ್-ಆಂಟಿಜೆನ್’ ಅನ್ನು ರೂಪಿಸಿದ್ದಾರೆ. ಆಂಟಿಜೆನ್ ಲಸಿಕೆಯಲ್ಲಿನ ಸಕ್ರಿಯ ಘಟಕಾಂಶವಾಗಿದೆ. ಇದು ಸೋಂಕನ್ನು ಪತ್ತೆಹಚ್ಚಲು ಮತ್ತು ಅದಕ್ಕೆ ಪ್ರತಿಕ್ರಿಯಿಸಲು ಪ್ರತಿರಕ್ಷಣಾ ವ್ಯವಸ್ಥೆಗೆ ತರಬೇತಿ ನೀಡುತ್ತದೆ. ಇದನ್ನೂ ಓದಿ: Explainer | ಅಮೆರಿಕದ 25ಕ್ಕೂ ಅಧಿಕ ರಾಜ್ಯಗಳಲ್ಲಿ ಆತಂಕ ಸೃಷ್ಟಿಸಿದ ಕೋವಿಡ್ ರೂಪಾಂತರಿ – ಸಿಕಾಡಾ ಎಷ್ಟು ಡೇಂಜರ್? ಲಕ್ಷಣಗಳೇನು?
ಡಿಎನ್‌ಎ ಲಸಿಕೆ
ಸಾಂಕ್ರಾಮಿಕ ಸಮಯದಲ್ಲಿ ಬಳಸಲಾಗುವ mRNA ಲಸಿಕೆಗಳ ಬಗ್ಗೆ ಅನೇಕ ಜನರಿಗೆ ಪರಿಚಯವಿದೆ. ಆದರೆ, ಈ ಹೊಸ ಲಸಿಕೆ DNA ಯನ್ನು ಬಳಸುತ್ತದೆ. DNA ಲಸಿಕೆಗಳು ಸಾಮಾನ್ಯವಾಗಿ mRNA ಲಸಿಕೆಗಳಿಗಿಂತ ಹೆಚ್ಚು ಸ್ಥಿರವಾಗಿರುತ್ತವೆ. ಇದರಿಂದಾಗಿ ಅವುಗಳನ್ನು ಸಂಗ್ರಹಿಸಲು ಮತ್ತು ಸಾಗಿಸಲು ಸುಲಭವಾಗುತ್ತದೆ. mRNA ಲಸಿಕೆಗಳನ್ನು ಶೀತಲ ಪರಿಸರದಲ್ಲಿ ಸಂಗ್ರಹಿಸಿಡಬೇಕು. ಈ ಲಸಿಕೆಗಳು ಹಾಳಾಗದಂತೆ ತಡೆಯಲು ನಿರ್ದಿಷ್ಟ ತಾಪಮಾನದಲ್ಲಿ (ಸಾಮಾನ್ಯವಾಗಿ 2°C ನಿಂದ 8°C ವರೆಗೆ) ಇಡುವ ಶೀತಲ ಸರಪಳಿ (ಕೋಲ್ಡ್ ಚೈನ್) ವ್ಯವಸ್ಥೆ ಕಡ್ಡಾಯ. ಆದರೆ, ಡಿಎನ್‌ಎ ಲಸಿಕೆಗೆ ಅಂತಹ ವ್ಯವಸ್ಥೆಯ ಅಗತ್ಯವಿಲ್ಲ. ಆದ್ದರಿಂದ ಕಡಿಮೆ ಆದಾಯದ ದೇಶಗಳಿಗೂ ಇದು ಪ್ರಯೋಜನಕಾರಿಯಾಗಿದೆ. ಹೊಸ ಲಸಿಕೆಯನ್ನು ಸೂಜಿಗಳಿಲ್ಲದೆಯೂ ನೀಡಬಹುದು. ಹೆಚ್ಚಿನ ಒತ್ತಡದ ದ್ರವವು ಲಸಿಕೆಯನ್ನು ಚರ್ಮದ ಮೂಲಕ ತಲುಪಿಸುತ್ತದೆ. ಲಸಿಕೆ ಪಡೆಯುವವರಿಗೆ ಹೆಚ್ಚಿನ ನೋವು ಕೂಡ ಆಗುವುದಿಲ್ಲ.

ಎಬೋಲಾ ನಿಯಂತ್ರಣಕ್ಕೂ ಮದ್ದು?
ಈ ತಂತ್ರಜ್ಞಾನವನ್ನು ಎಬೋಲಾ ವೈರಸ್‌ಗಳು ಮತ್ತು ಇನ್ಫ್ಲುಯೆನ್ಸ ವೈರಸ್‌ಗಳು ಸೇರಿದಂತೆ ಇತರ ವೈರಸ್‌ಗಳ ವಿರುದ್ಧ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಬಳಸಬಹುದು. ವೈರಸ್‌ಗಳು ಹೊಸ ತಳಿಗಳಾಗಿ ರೂಪಾಂತರಗೊಂಡರೂ, ಅವುಗಳ ವಿರುದ್ಧ ನಮ್ಮ ಲಸಿಕೆಗಳು ರಕ್ಷಣೆ ನೀಡುತ್ತಲೇ ಇರುತ್ತವೆ ಎಂದು ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಪಶುವೈದ್ಯಕೀಯ ವಿಭಾಗದ ಲ್ಯಾಬ್ ಆಫ್ ವೈರಲ್ ಝೂನೋಟಿಕ್ಸ್‌ನ ಪ್ರೊಫೆಸರ್ ಜೊನಾಥನ್ ಹೀನಿ ಹೇಳಿದ್ದಾರೆ. ಸೀಮಿತ ರಕ್ಷಣೆಯನ್ನು ಹೊಂದಿರುವ ಸಾಂಪ್ರದಾಯಿಕ ಲಸಿಕೆಗಳ ಸಮಸ್ಯೆಯನ್ನು ನಾವು ನಿವಾರಿಸಿದ್ದೇವೆ. ಇದರರ್ಥ ಮಾನವರಲ್ಲಿ ಹರಡುವ ವೈರಸ್ ರೂಪಾಂತರಗಳನ್ನು ಬೆನ್ನಟ್ಟುವ ಸಾಮರ್ಥ್ಯವನ್ನು ಈ ಲಸಿಕೆ ಹೊಂದಿದೆ ಎಂದು ತಿಳಿಸಿದ್ದಾರೆ.
ಭವಿಷ್ಯದ ಮಾರಕ ವೈರಸ್‌ಗಳಿಗೆ ರಾಮಬಾಣ?
ಹೊಸ ಸಾಂಕ್ರಾಮಿಕ ರೋಗಗಳ ವಿರುದ್ಧದ ಹೋರಾಟದಲ್ಲಿ ಈ ತಂತ್ರಜ್ಞಾನವು ಅಂತಿಮವಾಗಿ ಸಹಾಯ ಮಾಡುತ್ತದೆ ಎಂದು ಸಂಶೋಧಕರು ನಂಬುತ್ತಾರೆ. ಇನ್ಫ್ಲುಯೆನ್ಸ, ಕೊರೊನಾವೈರಸ್‌ಗಳು ಮತ್ತು ಎಬೋಲಾದಂತಹ ವೈರಸ್‌ಗಳು ನಿರಂತರವಾಗಿ ವಿಕಸನಗೊಳ್ಳುತ್ತಿವೆ. ಲಸಿಕೆಗಳನ್ನು ಹೊರತರುವ ಹೊತ್ತಿಗೆ ಅವು ಸರಿಯಾಗಿ ಹೊಂದಿಕೆಯಾಗುವುದಿಲ್ಲ. ಸದಾಕಾಲಕ್ಕೂ ಪ್ರಸ್ತುತತೆ ಕಾಯ್ದುಕೊಳ್ಳಲು ಸಾಂಪ್ರದಾಯಿಕ ಲಸಿಕೆಗಳಿಗೆ ಸಾಧ್ಯವಾಗುವುದಿಲ್ಲ. ಈ ಹೊಸ ವರ್ಗದ ಸಾರ್ವತ್ರಿಕ ಲಸಿಕೆಗಳು ಭವಿಷ್ಯಕ್ಕೆ ನಿರೋಧಕವಾಗಿವೆ. ಇವು ಏಕಕಾಲದಲ್ಲಿ ಅನೇಕ ರೂಪಾಂತರಗಳ ವಿರುದ್ಧವೂ ಹೋರಾಡುತ್ತವೆ. ಭವಿಷ್ಯದ ವೈರಸ್‌ಗಳ ವಿರುದ್ಧ ರಕ್ಷಣೆ ಒದಗಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ತಜ್ಞರು ತಿಳಿಸಿದ್ದಾರೆ. ಇದನ್ನೂ ಓದಿ: ಕೋವಿಡ್‌ಗಿಂತಲೂ ಡೆಡ್ಲಿ ಎಬೋಲಾ ವೈರಸ್ ಆತಂಕ – ರಾಜ್ಯಗಳಲ್ಲಿ ಕಟ್ಟೆಚ್ಚರ ವಹಿಸಲು ಕೇಂದ್ರ ಸೂಚನೆ
ವೈರಸ್ ಹರಡುವಿಕೆ ಪ್ರಾರಂಭವಾಗುವ ಮೊದಲು ನಾವು ಈ ಹೊಸ ವರ್ಗದ ಲಸಿಕೆಗಳನ್ನು ಅಭಿವೃದ್ಧಿಪಡಿಸಲು ಮತ್ತು ವೈದ್ಯಕೀಯವಾಗಿ ಬಳಸಲು ಸಾಧ್ಯವಾದರೆ, ಲಕ್ಷಾಂತರ ಜೀವಗಳನ್ನು ಉಳಿಸಬಹುದು. ಲಾಕ್‌ಡೌನ್‌ಗಳನ್ನು ತಪ್ಪಿಸಬಹುದು ಮತ್ತು ಆರ್ಥಿಕತೆಯನ್ನು ಸಂರಕ್ಷಿಸಬಹುದು. ನಿಜಕ್ಕೂ ಈ ಪ್ರಯೋಗ ಮಹತ್ವದ ಮೈಲುಗಲ್ಲು ಎಂದು ಎಐ ಲಸಿಕೆ ಬಗ್ಗೆ NIHR ಮೂಲಸೌಕರ್ಯದ ವೈಜ್ಞಾನಿಕ ನಿರ್ದೇಶಕಿ ಪ್ರೊಫೆಸರ್ ಮರಿಯನ್ ನೈಟ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. AI-ವಿನ್ಯಾಸಗೊಳಿಸಿದ ‘ಸೂಪರ್-ಆಂಟಿಜೆನ್’ ಪ್ರಯೋಗವು, ವೈರಸ್‌ಗಳ ವಿರುದ್ಧ ಶಾಶ್ವತವಾದ ರಕ್ಷಣೆಯನ್ನು ನೀಡುವ ನಮ್ಮ ಸಾಮರ್ಥ್ಯದಲ್ಲಿ ಒಂದು ಪ್ರಮುಖ ಮುನ್ನಡೆಯನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.
ಸದಾಕಾಲಕ್ಕೂ ಬೇಕು ಉತ್ತಮ ಲಸಿಕೆ
ಭೀಕರತೆ ಮಟ್ಟಕ್ಕೆ ತಲುಪಿ ಜಾಗತಿಕ ಅಡಚಣೆಯನ್ನು ಕೋವಿಡ್-19 ಇನ್ಮುಂದೆ ಉಂಟು ಮಾಡಲು ಸಾಧ್ಯವಿಲ್ಲವಾದರೂ, ಕೊರೊನಾ ವೈರಸ್‌ಗಳು ಸಾರ್ವಜನಿಕ ಆರೋಗ್ಯ ಕಾಳಜಿಯಾಗಿಯೇ ಉಳಿದಿದೆ. ಪ್ರಾಣಿಗಳಿಂದ ಮನುಷ್ಯರಿಗೆ ವೈರಸ್‌ಗಳು ಹರಡುತ್ತಲೇ ಇರುತ್ತವೆ. ಯಾವ ವೈರಸ್ ಅಂತಿಮವಾಗಿ ಮನುಷ್ಯರನ್ನು ಪ್ರವೇಶಿಸುತ್ತವೆ ಎಂದು ವಿಜ್ಞಾನಿಗಳಿಗೆ ಊಹಿಸಲು ಸಾಧ್ಯವಿಲ್ಲ. ಅಂತಹ ವೈರಸ್‌ಗಳ ವಿರುದ್ಧ ಹೋರಾಟಕ್ಕೆ ಎಐ ವಿನ್ಯಾಸಗೊಳಿಸಿದ ಲಸಿಕೆಗಳು ಸಹಕಾರಿಯಾಗಬಹುದು ಎನ್ನುತ್ತಾರೆ ತಜ್ಞರು.
