ತಮ್ಮ ಮಹತ್ವಾಕಾಂಕ್ಷೆಯ ಅಬ್ರಹಾಂ ಒಪ್ಪಂದಕ್ಕೆ ಮುಸ್ಲಿಂ ದೇಶಗಳು ಸಹಿ ಮಾಡಬೇಕು ಎಂದು ಒತ್ತಾಯ ಮಾಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ, ಒಂದೊಂದೇ ಮುಸ್ಲಿಂ ರಾಷ್ಟ್ರಗಳು ಪೆಟ್ಟು ನೀಡುತ್ತಿವೆ. ಈಗಾಗಲೇ ಅಬ್ರಹಾಂ ಒಪ್ಪಂದಕ್ಕೆ ಸಹಿ ಮಾಡುವುದಿಲ್ಲ ಎಂದು ಪಾಕಿಸ್ತಾನ ಸ್ಪಷ್ಟಪಡಿಸಿದ್ದು, ಇತ್ತೀಚೆಗೆ ಇರಾನ್ ಕೂಡ ಟ್ರಂಪ್ ಅವರಿಗೆ ನಿರಾಕರಣೆಯ ಸಂದೇಶ ಕಳುಹಿಸಿದೆ.
ಇಸ್ರೇಲ್ ಜೊತೆಗಿನ ಸಂಬಂಧಗಳನ್ನು ಸಾಮಾನ್ಯಗೊಳಿಸುವ ವಿಚಾರವಾಗಿ, ಪಾಕಿಸ್ತಾನ ರಾಜತಾಂತ್ರಿಕ ಕವಲುದಾರಿಯಲ್ಲಿ ನಿಂತಿದೆ. ಈ ಮಧ್ಯೆ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕುವಂತೆ ಡೊನಾಲ್ಡ್ ಟ್ರಂಪ್ ಒತ್ತಡ, ಆ ರಾಷ್ಟ್ರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಈ ಒಪ್ಪಂದ 2020 ರಲ್ಲೇ ಜಾರಿಗೆ ಬಂದಿತ್ತಾದರೂ, ಪಾಕಿಸ್ತಾನ ಸಹಿ ಹಾಕಲು ತಿರಸ್ಕರಿಸಿದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.
ಹೌದು. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳು ಅಬ್ರಹಾಂ ಒಪ್ಪಂದಗಳಿಗೆ ಸೇರುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒತ್ತಡ ಹೇರಿದ್ದಾರೆ. ʻಇರಾನ್ ಜೊಜೊತೆಗಿನ ಶಾಂತಿ ಮಾತುಕತೆಯಲ್ಲಿ ಭಾಗಿಯಾಗಿರುವ ಎಲ್ಲಾ ರಾಷ್ಟ್ರಗಳು, ಇಸ್ರೇಲ್ ಮತ್ತು ಅರಬ್ ರಾಷ್ಟ್ರಗಳ ನಡುವೆ ರಾಜತಾಂತ್ರಿಕ, ಆರ್ಥಿಕ ಮತ್ತು ಭದ್ರತಾ ಸಂಬಂಧಗಳನ್ನು ಸ್ಥಾಪಿಸುವ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಬೇಕುʼ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಆದರೆ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸೀಫ್ ಅವರು, “ಪಾಕಿಸ್ತಾನ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲ” ಎಂದು ಘೋಷಿಸಿದ್ದಾರೆ. ಅಮೆರಿಕಕ್ಕೆ ಸೆಡ್ಡು ಹೊಡೆಯುವ ಪಾಕಿಸ್ತಾನದ ನಿರ್ಧಾರ, ಮುಂಬರುವ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು ಎನ್ನಲಾಗಿದೆ.

ಈಗಾಗಲೇ ಮಧ್ಯಪ್ರಾಚ್ಯದ ಯುಎಇ ಮತ್ತು ಬಹ್ರೇನ್ ಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕಿವೆ. ಸೌದಿ ಅರೇಬಿಯಾ, ಕತಾರ್, ಪಾಕಿಸ್ತಾನ, ಟರ್ಕಿ, ಈಜಿಪ್ಟ್ ಮತ್ತು ಜೋರ್ಡಾನ್ ರಾಷ್ಟ್ರಗಳೂ ಈ ಒಪ್ಪಂದದ ಭಾಗವಾಗಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಯಸಿದ್ದಾರೆ. ಈ ಮಧ್ಯೆ ಇರಾನ್ ಕೂಡ ಅಬ್ರಹಾಂ ಒಪ್ಪಂದವನ್ನು ತಿರಸ್ಕಾರ ಮಾಡಿದೆ. ʻಅಬ್ರಹಾಂ ಒಪ್ಪಂದಕ್ಕೆ ಸಹಿ ಹಾಕುವಂತೆ ಮುಸ್ಲಿಂ ರಾಷ್ಟ್ರಗಳ ಮೇಲೆ ಡೊನಾಲ್ಡ್ ಟ್ರಂಪ್ ಒತ್ತಾಯ ಮಾಡುತ್ತಿದ್ದಾರೆ. ಟ್ರಂಪ್ ಅವರ ಅಬ್ರಹಾಂ ಒಪ್ಪಂದ, ಇರಾನ್‌ನ ಪ್ರಾದೇಶಿಕ ನೀತಿಗೆ ತದ್ವಿರುದ್ಧವಾಗಿದೆ. ಇಸ್ರೇಲ್ ಜೊತೆಗೆ ಸಂಬಂಧ ಸಾಮಾನ್ಯಗೊಳಿಸುವುದನ್ನು ಇರಾನ್ ಎಂದಿಗೂ ಯೋಚಿಸಲು ಸಾಧ್ಯವಿಲ್ಲ. ಇಸ್ರೇಲ್ ನಮಗೆ ಹಿಂದೆಯೂ ಶತ್ರುರಾಷ್ಟ್ರ ಈಗಲೂ ಶತ್ರುರಾಷ್ಟ್ರ ಮತ್ತು ಮುಂದೆಯೂ ಶತ್ರುರಾಷ್ಟ್ರವಾಗಿಯೇ ಉಳಿಯಲಿದೆʼ ಎಂದು ಮೊಹಮ್ಮದ್ ಪಥಾಲಿ ಸ್ಪಷ್ಟವಾಗಿ ಹೇಳಿದ್ದಾರೆ.
ಅಷ್ಟಕ್ಕೂ ಈ ಒಪ್ಪಂದಕ್ಕೆ ಮುಸ್ಲಿಂ ರಾಷ್ಟ್ರಗಳು ವಿರೋಧ ವ್ಯಕ್ತಪಡಿಸಲು ಕಾರಣ ಏನು? ಅಮೆರಿಕ – ಇರಾನ್ ನಡುವೆ ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನವೇ ಒಪ್ಪಂದ ನಿರಾಕರಿಸಲು ಕಾರಣ ಏನುಂಬುದನ್ನು ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ…

ಏನಿದು ಅಬ್ರಹಾಂ ಒಪ್ಪಂದ?
ಅಬ್ರಹಾಂ ಒಪ್ಪಂದ ಅಥವಾ ಅಬ್ರಹಾಂ ಆಕಾರ್ಡ್ ಮಧ್ಯಏಷ್ಯಾದಲ್ಲಿ ಅರಬ್ ರಾಷ್ಟ್ರಗಳು ಹಾಗೂ ಇಸ್ರೇಲ್ ನಡುವಿನ ಐತಿಹಾಸಿಕ ಸಂಘರ್ಷ ಶಮನಗೊಳಿಸಿ ಪ್ರಾದೇಶಿಕವಾಗಿ ಶಾಂತಿ ಹಾಗೂ ಸ್ಥಿರತೆ ಸ್ಥಾಪಿಸುವುದು ಸೇರಿದಂತೆ ಈ ಪ್ರದೇಶದಲ್ಲಿನ ಧಾರ್ಮಿಕ ಸ್ವಾತಂತ್ರ್ಯ ಸೇರಿದಂತೆ ಮಾನವ ಘನತೆ ಮತ್ತು ಸ್ವಾತಂತ್ರ್ಯಕ್ಕೆ ಗೌರವ ಕಾಪಾಡುವುದು ಸಹಕಾರ ಮತ್ತು ಪರಸ್ಪರ ಗೌರವದ ಮೂಲಕ ಸಾಧಿಸಲು ಸಾಧ್ಯ ಎಂಬ ನಂಬಿಕೆಯೊಂದಿಗೆ ಉಭಯರ ನಡುವೆ ಅಮೆರಿಕಾದ ನೇತೃತ್ವದಲ್ಲಿ ಈ ಒಪ್ಪಂದ ಪ್ರಸ್ತಾಪಿಸಿಲಾಗಿದೆ.
ಈ ಪ್ರದೇಶದಲ್ಲಿನ 3 ಅಬ್ರಹಾಮಿಕ್ ಧರ್ಮಗಳಾದ ಇಸ್ಲಾಂ, ಯಹೂದಿಗಳು ಹಾಗೂ ಕ್ರೈಸ್ತರಿಗೆ ಮೂಲತಂದೆಯಾಗಿರುವ ಅಬ್ರಹಾಂ ಅವರ ಹೆಸರಿನಲ್ಲಿ ಈ ಒಪ್ಪಂದ ರಚಿಸಲಾಗಿದ್ದು, ಅಬ್ರಹಾಮಿಕ್ ಧರ್ಮಗಳು ಯುದ್ದವನ್ನು ಬಿಟ್ಟು ಎಲ್ಲಾ ಮಾನವೀಯತೆಯ ನಡುವೆ ಶಾಂತಿಯ ಸಂಸ್ಕೃತಿಯನ್ನು ಮುನ್ನಡೆಸಲು ಅಂತರಧರ್ಮ ಮತ್ತು ಅಂತರ ಸಾಂಸ್ಕೃತಿಕ ಸಂವಾದವನ್ನು ಉತ್ತೇಜಿಸಲು ಪ್ರಯತ್ನಗಳಿಗಾಗಿ ಟ್ರಂಪ್ ಪ್ರಸ್ತಾಪವಾಗಿದೆ. 2020ರಲ್ಲಿ ಅಮೆರಿಕ ಅಧ್ಯಕ್ಷರಾಗಿದ್ದ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಮೊದಲ ಬಾರಿಗೆ ಸಹಿ ಹಾಕಲಾಗಿತ್ತು.

ಪಾಕ್ ತಿರಸ್ಕರಿಸಿದ್ದೇಕೆ?
ಪ್ಯಾಲೆಸ್ತೀನ್ ರಾಷ್ಟ್ರ ನಿರ್ಮಾಣದ ಪರವಾಗಿರುವ ಪಾಕಿಸ್ತಾನ, ಇಸ್ರೇಲ್‌ನ್ನ ಇದುವರೆಗೂ ಒಂದು ರಾಷ್ಟ್ರವಾಗಿ ಪರಿಗಣಿಸಿಲ್ಲ. ಅಬ್ರಹಾಂ ಒಪ್ಪಂದ ಇಸ್ರೇಲ್ ಜೊತೆಗಿನ ರಾಜತಾಂತ್ರಿಕ ಸಂಬಂಧಕ್ಕೆ ಒತ್ತಾಯಿಸುವುದರಿಂದ, ಇದು ಪಾಕಿಸ್ತಾನದ ಮೂಲಭೂತ ಸಿದ್ಧಾಂತಗಳಿಗೆ ವಿರುದ್ಧವಾಗಿದೆ ಎಂಬುದು ರಕ್ಷಣಾ ಸಚಿವ ಖವಾಜ ಆಸೀಫ್ ವಾದವಾಗಿದೆ.
ಪಾಕಿಸ್ತಾನ ತನ್ನ 78 ವರ್ಷಗಳ ಇತಿಹಾಸದಲ್ಲಿ ಇಸ್ರೇಲ್‌ನ್ನು ಒಂದು ರಾಷ್ಟ್ರವಾಗಿ ಎಂದಿಗೂ ಗುರುತಿಸಿಲ್ಲ. 1967 ರ ಪೂರ್ವ ಗಡಿಗಳ ಆಧಾರದ ಮೇಲೆ ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರವನ್ನು ಸ್ಥಾಪಿಸುವವರೆಗೆ ಇಸ್ರೇಲ್ ಅನ್ನು ಗುರುತಿಸುವುದಿಲ್ಲ ಎಂಬುದು ಅದರ ಅಧಿಕೃತ ನಿಲುವಾಗಿದೆ. ಅಷ್ಟೇ ಅಲ್ಲ ಪ್ಯಾಲೆಸ್ತೀನ್ ರಾಷ್ಟ್ರ ನಿರ್ಮಾಣ ಆಗುವವರೆಗೂ ಇಸ್ರೇಲ್ ಜೊತೆಗೆ ರಾಜತಾಂತ್ರಿಕ ಸಂಬಂಧ ಹೊಂದುವುದು, ನಮ್ಮ ದೀರ್ಘಕಾಲದ ನಿಲುವಿಗೆ ವಿರುದ್ಧವಾಗಿದೆ. ಹೀಗಾಗಿ ಅಬ್ರಹಾಂ ಒಪ್ಪಂದದ ಭಾಗವಾಗುವುದು ನಮ್ಮಿಂದ ಸಾಧ್ಯವಿಲ್ಲ ಎಂದು ಖವಾಜಾ ಆಸೀಫ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ – ಇರಾನ್ ಶಾಂತಿ ಪ್ರಕ್ರಿಯೆಯ ಭಾಗವಾಗಲು ಬಯಸಿದ್ರೆ, ಅದು ಅಬ್ರಹಾಂ ಒಪ್ಪಂದಗಳಿಗೆ ಸೇರಬೇಕು ಮತ್ತು ಇಸ್ರೇಲ್ ಅನ್ನು ಪ್ರತ್ಯೇಕ ದೇಶವೆಂದು ಗುರುತಿಸಬೇಕು ಅನ್ನೋದು ಟ್ರಂಪ್ ಅವರ ಮೊಂಡು ವಾದವಾದ್ರೆ, ಒಂದು ದಿನವೂ ನಂಬಲು ಸಾಧ್ಯವಿಲ್ಲದರೊಟ್ಟಿಗೆ ಹೇಗೆ ನಾವು ಕುಳಿತುಕೊಳ್ಳೋದು ಅನ್ನೋದು ಪಾಕ್‌ನ ತಿರುಗುತ್ತರವಾಗಿದೆ.

ಸೌದಿಯಿಂದಲೂ ಆಫರ್ ರಿಜೆಕ್ಟ್
ಇತ್ತ, ಸೌದಿ ಅರೇಬಿಯಾ ಸಹ ಟ್ರಂಪ್ ನಡೆಗೆ ವಿರೋಧ ವ್ಯಕ್ತಪಡಿಸಿದೆ. ʻಈ ವಿಚಾರದಲ್ಲಿ ನಮ್ಮ ನಿಲುವು ಯಾವಾಗಲೂ ಒಂದೇ ಆಗಿದ್ದು, ಪ್ಯಾಲೆಸ್ತೀನಿಯನ್ ರಾಜ್ಯತ್ವದ ಕಡೆಗೆ ಕಾಂಕ್ರೀಟ್ ಮತ್ತು ಬದಲಾಯಿಸಲಾಗದ ಪ್ರಗತಿಯ ನಂತರವೇ ಇಸ್ರೇಲ್ ಜೊತೆ ರಾಜತಾಂತ್ರಿಕ ಸಂಬಂಧಗಳು ಉಂಟಾಗಬಹುದು. ಹಾಗಾಗಿ ಪ್ಯಾಲೆಸ್ತೀನ್ ರಾಷ್ಟ್ರ ರಚನೆಗೆ ಸ್ಪಷ್ಟ ಮತ್ತು ಬದಲಾಯಿಸಲಾಗದ ಮಾರ್ಗವಿಲ್ಲದಿದ್ದರೆ ಇಸ್ರೇಲ್ ಜೊತೆಗಿನ ಸಂಬಂಧವನ್ನು ಸಾಮಾನ್ಯಗೊಳಿಸುವುದಿಲ್ಲ ಎಂದು ಸೌದಿ ಅರೇಬಿಯಾದ ಕ್ರೌನ್ ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ತಿಳಿಸಿರುವುದಾಗಿ ಸೌದಿ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ಸಂದಿಗ್ಧತೆ:
ಅಬ್ರಹಾಂ ಒಪ್ಪಂದ ಸೇರುವಂತೆ ಡೊನಾಲ್ಡ್ ಟ್ರಂಪ್ ಮಾಡಿರುವ ಒತ್ತಾಯ, ಪಾಕಿಸ್ತಾನವನ್ನು ಸಂದಿಗ್ಧತೆಯಲ್ಲಿ ಸಿಲುಕಿಸಿದೆ. ಪಾಕಿಸ್ತಾನವು ಐತಿಹಾಸಿಕವಾಗಿ ಇಸ್ರೇಲ್‌ನ್ನ ಗುರುತಿಸಲು ನಿರಾಕರಿಸಿದೆ. ಸ್ವತಂತ್ರ ಪ್ಯಾಲೆಸ್ತೀನ್ ರಾಷ್ಟ್ರದ ಸ್ಥಾಪನೆಯ ನಂತರವೇ, ಇಸ್ರೇಲ್ ಜೊತೆ ಸಂಬಂಧ ಬೆಳೆಸಲು ಅದು ನಿರ್ಧರಿಸಿದೆ. ಅಬ್ರಹಾಂ ಒಪ್ಪಂದಗಳಿಗೆ ಸೇರುವ ಪಾಕಿಸ್ತಾನ ಸರ್ಕಾರದ ಯಾವುದೇ ಕ್ರಮವು, ರಾಜಕೀಯವಾಗಿ ಮತ್ತು ಸಾರ್ವಜನಿಕ ವಲಯದಲ್ಲಿ ಗಮನಾರ್ಹವಾದ ದೇಶೀಯ ಪ್ರತಿರೋಧ ಎದುರಿಸಬೇಕಾಗುತ್ತದೆ. ಅದೇ ಸಮಯದಲ್ಲಿ, ಪಾಕಿಸ್ತಾನದ ನಾಗರಿಕ ಮತ್ತು ಮಿಲಿಟರಿ ನಾಯಕತ್ವ, ಅಮೆರಿಕದೊಂದಿಗೆ ಸಂಬಂಧ ಸುಧಾರಣೆ ಬಯಸಿದೆ. ಹೀಗಾಗಿ ಅಬ್ರಹಾಂ ಒಪ್ಪಂದ ಸೇರುವ ಡೊನಾಲ್ಡ್ ಟ್ರಂಪ್ ಅವರ ಆಫರ್, ಪಾಕಿಸ್ತಾನಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಯಾವೆಲ್ಲ ರಾಷ್ಟ್ರಗಳು ಸಹಿ ಹಾಕಿವೆ?
ಇನ್ನು, ಈ ಒಪ್ಪಂದಕ್ಕೆ 202ರಲ್ಲಿ ಯಾವೆಲ್ಲಾ ದೇಶಗಳು ಸಹಿ ಹಾಕಿದ್ದವು ಎಂದು ನೋಡುವುದಾದರೆ, ಸೆ.15ರಂದು 2020ರಂದು ಸಹಿಹಾಕಲಾದ ಈ ಅಬ್ರಹಾಂ ಒಪ್ಪಂದಕ್ಕೆ ಆರಂಭಿಕವಾಗಿ ಇಸ್ರೇಲ್ ನೊಂದಿಗಿನ ತಮ್ಮ ಸಂಬಂಧ ಸಾಮನ್ಯಗೊಳಿಸಲು ಯುನೈಟೆಡ್ ಅರಬ್ ಎಮಿರೇಟ್ಸ್ (UAE), ಬಹ್ರೇನ್ ಸಹಿಹಾಕಿತ್ತು. ಇದಾದ ಬಳಿಕ ಮೊರಾಕೊ, ಸುಡಾನ್, ಖಜಾಕಿಸ್ತಾನ್ ಸಹಿ ಹಾಕಿವೆ. ಪಾಕಿಸ್ತಾನ ಈ ಒಪ್ಪಂದವನ್ನು ತಿರಸ್ಕರಿಸಿದ ಬಳಿಕ ಮತ್ತೆ ಮುನ್ನೆಲೆಗೆ ಬಂದಿದೆ.
