– ಏನಿದು ಇಂಧನ? ಭಾರತಕ್ಕೆ ಏಕೆ ಮುಖ್ಯ?
ಮಧ್ಯಪ್ರಾಚ್ಯ ಯುದ್ಧದಿಂದ ಭಾರತಕ್ಕೆ ಬರೆ ಮೇಲೆ ಬರೆ ಬೀಳುತ್ತಿದೆ. ಆರಂಭದಲ್ಲಿ ಎಲ್‌ಪಿಜಿ ಬಿಕ್ಕಟ್ಟಿನಿಂದ ದೇಶ ತತ್ತರಿಸಿತ್ತು. ಈಗ ತೈಲ ಬಿಕ್ಕಟ್ಟು ಎದುರಾಗಿದೆ. ಪೆಟ್ರೋಲ್, ಡೀಸೆಲ್ (Petrol-Diesel) ಬೆಲೆ ಏರಿಕೆಯಿಂದ ಜನರು ಹೈರಾಣಾಗಿದ್ದಾರೆ. ಎರಡೇ ವಾರದಲ್ಲಿ ನಾಲ್ಕು ಬಾರಿ ದರ ಏರಿಕೆ ಆಯ್ತು. ಯುದ್ಧ ಹೀಗೆಯೇ ಮುಂದುವರಿದರೆ ಭಾರತದ ಪರಿಸ್ಥಿತಿ ಊಹಿಸುವುದು ಕಷ್ಟಕರ. ದೇಶ ಶೇ.85 ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಈ ಪ್ರಮಾಣದ ಅವಲಂಬನೆಯು ಬಿಕ್ಕಟ್ಟನ್ನು ಮತ್ತಷ್ಟು ತೀವ್ರಗೊಳಿಸಬಹುದು. ಇದರಿಂದ ಎಚ್ಚೆತ್ತಿರುವ ಭಾರತ ಪರ್ಯಾಯ ವ್ಯವಸ್ಥೆಗಳ ಕಡೆ ಗಮನ ಕೇಂದ್ರೀಕರಿಸಿದೆ. ಪೆಟ್ರೋಲ್, ಡೀಸೆಲ್ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹೊತ್ತಲ್ಲೇ ‘ಇ100’ (ಶೇ.100 ಎಥೆನಾಲ್) ಇಂಧನ ಬಗ್ಗೆ ಚರ್ಚೆ ಜೋರಾಗಿದೆ. ಸಾಂಪ್ರದಾಯಿಕ ಪಳೆಯುಳಿಕೆ ಇಂಧನ ಮೇಲಿನ ಭಾರತದ ಅವಲಂಬನೆಯನ್ನು ಕಡಿಮೆ ಮಾಡಲು ಭಾರತ ನಯಾ ಪ್ಲ್ಯಾನ್ ರೂಪಿಸಿದೆ. ಹೆಚ್ಚುತ್ತಿರುವ ಇಂಧನ ಬೆಲೆ ಮತ್ತು ವಾಯುಮಾಲಿನ್ಯ ತಡೆಗಟ್ಟಲು ಇದು ಸಹಕಾರಿ ಎನ್ನಲಾಗಿದೆ.
ಏನಿದು ‘ಇ100’ (E100) ಇಂಧನ? ಬೆಲೆ ಏರಿಕೆ ಹೊತ್ತಲ್ಲಿ ಮುನ್ನೆಲೆಗೆ ಬಂದಿರೋದ್ಯಾಕೆ? ಇದರಿಂದ ಭಾರತಕ್ಕೆ ಲಾಭ ಇದೆಯಾ? ಈ ಇಂಧನ ಬಳಕೆಗೆ ದೇಶ ಎಷ್ಟು ಕಾರ್ಯೋನ್ಮುಖವಾಗಿದೆ? ವಾಹನ ಸವಾರರಿಗೆ ಇದು ಗುಡ್ ನ್ಯೂಸ್ ಆಗುತ್ತಾ ಎಂಬಿತ್ಯಾದಿ ಪ್ರಶ್ನೆಗಳಿಗೆ ವಿವರ ಇಲ್ಲಿದೆ.
ಪೆಟ್ರೋಲ್, ಡೀಸೆಲ್ ದರ ಗಗನಕ್ಕೆ
ಇರಾನ್ ಹಾಗೂ ಅಮೆರಿಕ-ಇಸ್ರೇಲ್ ಯುದ್ಧವು ಭಾರತದ ಇಂಧನ ಮಾರುಕಟ್ಟೆ ಮೇಲೆ ಹೊಡೆತ ಕೊಟ್ಟಿದೆ. ವಾಹನ ಸವಾರರಿಗೆ ದರ ಏರಿಕೆ ಬರೆ ಬಿದ್ದಿದೆ. ಮೇ 15 ರಂದು ಮೊದಲ ಬಾರಿಗೆ ಏಕಾಏಕಿ ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು 3 ರೂ. ಹೆಚ್ಚಳ ಮಾಡಿತ್ತು. ಬಳಿಕ ಮೇ 23 ರಂದು ಪೆಟ್ರೋಲ್ ದರವನ್ನು 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಪೆಟ್ರೋಲ್ ಮೇಲಿನ ಬೆಲೆ 2.61 ರೂ. ಮತ್ತು ಡೀಸೆಲ್ ಮೇಲಿನ ಬೆಲೆ 2.71 ರೂ. ಏರಿಸಿದ್ದು, ವಾಹನ ಸವಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದನ್ನೂ ಓದಿ: ಜನರಿಗೆ ಮತ್ತೆ ಶಾಕ್ ಶಾಕ್ – ಪೆಟ್ರೋಲ್, ಡೀಸೆಲ್ ಬಳಿಕ ಸಿಎನ್‌ಜಿ ದರ 2 ರೂ. ಏರಿಕೆ

ಏನಿದು ಎಥೆನಾಲ್?
ಎಥೆನಾಲ್ (Ethanol Fuel) ಒಂದು ರೀತಿಯ ಆಲ್ಕೋಹಾಲ್‌ಗಳು. ಕಬ್ಬು, ಗೋಧಿ, ಮೆಕ್ಕೆಜೋಳ, ಜೋಳ ಮತ್ತು ಅಕ್ಕಿ ಅಥವಾ ಇನ್ನಿತರ ಕೆಲವು ಧಾನ್ಯ ಸಸ್ಯಗಳಿಂದ ಹೊರತೆಗೆಯಲ್ಪಡುವ ಪದಾರ್ಥ. ಹುದುಗಿಸುವಿಕೆ ಪ್ರಕ್ರಿಯೆಗಳ ಮೂಲಕ ಎಥೆನಾಲ್ ಉತ್ಪತ್ತಿ ಮಾಡಲಾಗುತ್ತದೆ. ಇದನ್ನ ಬಿಯರ್, ವೈನ್, ಸ್ಪಿರಿಟ್‌ಗಳಲ್ಲಿ ಕೂಡ ಬಳಕೆ ಮಾಡಲಾಗುತ್ತದೆ. ಪೆಟ್ರೋಲ್ ಜೊತೆ ಮಿಶ್ರಣ ಮಾಡಿಯೂ ವಾಹನಗಳಲ್ಲಿ ಬಳಸಲಾಗುತ್ತದೆ. ದ್ರಾವಕ ಮತ್ತು ನಂಜುನಿರೋಧಕಗಳಲ್ಲಿಯೂ ಎಥೆನಾಲ್ ಬಳಕೆ ಇದೆ.
ಇ100 ಇಂಧನ ಎಂದರೇನು?
ಇ100 ಎಂದರೆ ಹೆಚ್ಚಿನ ಎಥೆನಾಲ್ ಮಿಶ್ರಿತ ಇಂಧನ. ಸಾಮಾನ್ಯವಾಗಿ ಪೆಟ್ರೋಲ್‌ನಂತಹ ಇಂಧನದ ಜೊತೆಗೆ ಇದರ ಮಿಶ್ರಣ 95% ವರೆಗೆ ಇರುತ್ತದೆ. ಭಾರತದಲ್ಲಿ ಇಂಡಿಯನ್ ಆಯಿಲ್ ಅಧಿಕೃತವಾಗಿ ಪರಿಚಯಿಸಿದ ಎಥೆನಾಲ್ 100 ಇಂಧನವು ಸುಮಾರು 93 ರಿಂದ 93.5% ಎಥೆನಾಲ್ ಅನ್ನು ಹೊಂದಿರುತ್ತದೆ. ಇದನ್ನು ಸರಿಸುಮಾರು 5% ಪೆಟ್ರೋಲ್ ಮತ್ತು ಸಹ-ದ್ರಾವಕದೊಂದಿಗೆ ಬೆರೆಸಲಾಗುತ್ತದೆ. ಈ ಇಂಧನವನ್ನು ಹೆಚ್ಚಿನ ಎಥೆನಾಲ್ ಸಾಂದ್ರತೆಗಳೊAದಿಗೆ ಹೊಂದಿಕೆಯಾಗುವ ವಾಹನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ. ಉದಾಹರಣೆಗೆ ಫ್ಲೆಕ್ಸ್-ಇಂಧನ ವಾಹನಗಳು (ಈಈಗಿ ಗಳು) ವಿವಿಧ ಎಥೆನಾಲ್ ಮಿಶ್ರಣಗಳಲ್ಲಿ ಚಲಿಸಬಹುದು.
ಭಾರತಕ್ಕೆ ಇ100 ಇಂಧನ ಏಕೆ ಮುಖ್ಯ?
ಕಚ್ಚಾ ತೈಲದ ಮೇಲಿನ ದೇಶದ ಅವಲಂಬನೆ ಹೆಚ್ಚಾಗಿದೆ. ಒಟ್ಟು ಬಳಕೆಯ ಶೇ.87ರಷ್ಟು ತೈಲ ಆಮದಾಗುತ್ತಿದೆ. ಇದನ್ನು ಕಡಿಮೆ ಮಾಡಲು ಭಾರತ ಪ್ರಯತ್ನಿಸುತ್ತಿದೆ. ಕಚ್ಚಾ ತೈಲಕ್ಕೆ ಪರ್ಯಾಯವಾಗಿ ಇ100 ಇಂಧನ ಬಳಕೆಗೆ ಪ್ರಾಮುಖ್ಯತೆ ನೀಡಲಾಗಿದೆ. ಹೆಚ್ಚಿನ ಎಥೆನಾಲ್ ಇಂಧನಗಳ ಬಳಕೆಯಿಂದ ತೈಲ ಆಮದುಗಳ ಮೇಲಿನ ಅತಿಯಾದ ಅವಲಂಬನೆ ಕಡಿಮೆ ಮಾಡಬಹುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಇದರಿಂದ ಆರ್ಥಿಕ ಪ್ರಯೋಜನಗಳು ಸಾಧ್ಯವಾಗುತ್ತವೆ. ವಿಶೇಷವಾಗಿ ಇಂಧನ ಆಮದುಗಳಿಂದ ದೇಶಕ್ಕೆ ವಾರ್ಷಿಕವಾಗಿ ಸುಮಾರು 22 ಲಕ್ಷ ಕೋಟಿ ರೂ.ಗಳಷ್ಟು ವೆಚ್ಚವಾಗುತ್ತಿದೆ. ಭೌಗೋಳಿಕ ರಾಜಕೀಯ ಉದ್ವಿಗ್ನತೆಗಳು ಸೇರಿದಂತೆ ಜಾಗತಿಕ ಅನಿಶ್ಚಿತತೆಗಳು ಇಂಧನ ಆಮದಿನಲ್ಲಿ ಭಾರತಕ್ಕೆ ದೊಡ್ಡ ಪೆಟ್ಟು ಕೊಟ್ಟಿವೆ.

ಭಾರತದ ಎಥೆನಾಲ್ ಪ್ರಗತಿ
ಕಳೆದ ಕೆಲವು ವರ್ಷಗಳಿಂದ ಭಾರತವು ಎಥೆನಾಲ್ ಮಿಶ್ರಣದಲ್ಲಿ ಸ್ಥಿರವಾದ ಪ್ರಗತಿಯನ್ನು ಸಾಧಿಸಿದೆ. ಇ20 ಪೆಟ್ರೋಲ್ ಬಳಕೆ ರಾಷ್ಟ್ರವ್ಯಾಪಿ ಈಗಾಗಲೇ ಜಾರಿಯಲ್ಲಿದೆ. ಮುಂದಿನ ಹಂತವು ಇ20 ನೊಂದಿಗೆ ಮಿಶ್ರಣವನ್ನು ಶೇಕಡಾ 30 ರಷ್ಟು ಹೆಚ್ಚಿಸುವುದು ಮತ್ತು ಇ85 ಮತ್ತು ಇ100 ಮಿಶ್ರಣಗಳಲ್ಲಿ ಚಲಿಸುವ ಸಾಮರ್ಥ್ಯವಿರುವ ಫ್ಲೆಕ್ಸ್-ಇಂಧನ ವಾಹನಗಳನ್ನು ಉತ್ತೇಜಿಸುವುದನ್ನು ಪ್ರಮುಖ ಗುರಿಯಾಗಿದೆ. ಇದನ್ನೂ ಓದಿ: ಬೇರೆ ರಾಷ್ಟ್ರಗಳಿಗೆ ಹೋಲಿಸಿದ್ರೆ ಭಾರತದಲ್ಲೇ ಅತ್ಯಂತ ಕಡಿಮೆ ದರ ಏರಿಕೆ – ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಮರ್ಥನೆ
ಎಥೆನಾಲ್ ಇ20
ಇದು ಶೇ.20 ರಷ್ಟು ಎಥೆನಾಲ್ ಮತ್ತು ಶೇ.80 ರಷ್ಟು ಪೆಟ್ರೋಲ್ ಅನ್ನು ಮಿಶ್ರಣ ಮಾಡಿರುವ ಇಂಧನ. ಭಾರತದಲ್ಲಿ ಪರಿಸರ ಮಾಲಿನ್ಯ ತಡೆಗಟ್ಟಲು ಮತ್ತು ಕೃಷಿಕರಿಗೆ ಬೆಂಬಲ ನೀಡಲು ಕೇಂದ್ರ ಸರ್ಕಾರ ಎಥೆನಾಲ್ ಇ20 ಇಂಧನವನ್ನು ಉತ್ತೇಜಿಸುತ್ತದೆ. ಇದು ಪರಿಸರ ಸ್ನೇಹಿ ಕೂಡ ಆಗಿದೆ. ಇಂಗಾಲದ ಹೊರಸೂಸುವಿಕೆಯನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಕಬ್ಬು, ಜೋಳದಂತಹ ನವೀಕರಿಸಬಹುದಾದ ವಸ್ತುಗಳಿಂದ ಎಥೆನಾಲ್ ಅನ್ನು ತಯಾರಿಸಲಾಗುತ್ತದೆ. ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗಬಹುದು (ಸುಮಾರು 6ರಿಂದ 7%). ಆದರೂ, ಉತ್ತಮ ವೇಗವರ್ಧನೆಯನ್ನು ಒದಗಿಸುತ್ತದೆ. ಹೊಸ ವಾಹನಗಳನ್ನು ಇ20 ಇಂಧನಕ್ಕೆ ತಕ್ಕಂತೆ ವಿನ್ಯಾಸಗೊಳಿಸಲಾಗಿದೆ. ಆದರೆ, ಹಳೆಯ ವಾಹನಗಳಲ್ಲಿ ಇದನ್ನು ಬಳಸುವಾಗ ಇಂಧನ ದಕ್ಷತೆ ಮತ್ತು ಇಂಜಿನ್ ಕಾರ್ಯಕ್ಷಮತೆ ಮೇಲೆ ಸಣ್ಣ ಪ್ರಮಾಣದ ಎಫೆಕ್ಟ್ ಆಗಬಹುದು.

ಅತಿಹೆಚ್ಚು ಬಳಕೆ ಎಲ್ಲಿ?
ಭಾರತದಲ್ಲಿ ಮೊದಲ ಬಾರಿಗೆ 2024 ರಲ್ಲಿ ಇಂಡಿಯನ್ ಆಯಿಲ್ ಇ100 ಇಂಧನವನ್ನು ಪರಿಚಯಿಸಿತು. ಮಹಾರಾಷ್ಟ್ರ, ಕರ್ನಾಟಕ, ಉತ್ತರ ಪ್ರದೇಶ, ತಮಿಳುನಾಡು ಮತ್ತು ದೆಹಲಿಯಂತಹ ರಾಜ್ಯಗಳಲ್ಲಿನ 183 ಚಿಲ್ಲರೆ ಮಾರಾಟ ಮಳಿಗೆಗಳಿಗೆ ಇದರ ಲಭ್ಯತೆಯನ್ನು ವಿಸ್ತರಿಸಲಾಯಿತು. ಜಾಗತಿಕವಾಗಿ, ಇ100 ಇಂಧನವನ್ನು ವ್ಯಾಪಕವಾಗಿ ಬಳಸುವ ಏಕೈಕ ದೇಶ ಬ್ರೆಜಿಲ್. ಸ್ವೀಡನ್ ಸೇರಿದಂತೆ ಇತರ ರಾಷ್ಟ್ರಗಳು ಇ85 ಅನ್ನು ಅಳವಡಿಸಿಕೊಂಡಿವೆ. ಆದರೆ ಹೆಚ್ಚಿನ ಯುರೋಪಿಯನ್ ರಾಷ್ಟ್ರಗಳು ಇ5 ರಿಂದ ಇ10 ನಂತಹ ಕಡಿಮೆ ಎಥೆನಾಲ್ ಮಿಶ್ರಣಗಳನ್ನು ಬಳಸುತ್ತಿವೆ.
ಇ100 ಇಂಧನದಲ್ಲಿ ಚಲಿಸೋ ವಾಹನ ಶೀಘ್ರ ಬಿಡುಗಡೆ?
ಪೆಟ್ರೋಲ್ ಮತ್ತು ಡೀಸೆಲ್‌ಗೆ ಪರ್ಯಾಯವಾಗಿ 100% ಎಥೆನಾಲ್‌ನಲ್ಲಿ ಚಲಿಸುವ ಮಾರುತಿ ಸುಜುಕಿ ವ್ಯಾಗನ್ಆರ್ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಹೇಳಲಾಗಿದೆ. ಜೂ.5ರ ವಿಶ್ವ ಪರಿಸರ ದಿನದಂದು ಈ ವಾಹನ ಬಿಡುಗಡೆ ಮಾಡಲಾಗುವುದು ಎಂದು ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಸಾಂಪ್ರದಾಯಿಕ ಪೆಟ್ರೋಲ್‌ಗಿಂತ ಎಥೆನಾಲ್ ಅಗ್ಗ ಎನ್ನಲಾಗಿದೆ. ಇಂಧನ ಬೆಲೆಗಳು ಗಗನಕ್ಕೇರುತ್ತಿರುವ ಹೊತ್ತಲ್ಲಿ ಚಾಲನಾ ವೆಚ್ಚ ಕಡಿಮೆ ಮಾಡಲು ವಾಹನ ಸವಾರರಿಗೆ ಇಂಥ ವಾಹನಗಳು ಸಹಕಾರಿಯಾಗಬಹುದು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಏರಿಕೆ – ಬೆಂಗಳೂರು ಸೇರಿ ವಿವಿಧ ನಗರಗಳಲ್ಲಿ ಹೇಗಿದೆ ಇಂದಿನ ದರ?
ವಾಹನ ತಯಾರಕರಿಗೆ ಇರುವ ಸವಾಲುಗಳೇನು?
ಇ100 ಇಂಧನಕ್ಕೆ ಪರಿವರ್ತನೆಗೊಳ್ಳಲು ವಾಹನ ತಯಾರಕರಿಂದ ಗಮನಾರ್ಹ ತಾಂತ್ರಿಕ ರೂಪಾಂತರಗಳು ಬೇಕಾಗುತ್ತವೆ. ಹೆಚ್ಚಿನ ಎಥೆನಾಲ್ ಅಂಶವನ್ನು ನಿರ್ವಹಿಸಲು ಎಂಜಿನ್‌ಗಳನ್ನು ವಿನ್ಯಾಸಗೊಳಿಸಬೇಕಾಗುತ್ತದೆ. ಏಕೆಂದರೆ ಎಥೆನಾಲ್ ಪೆಟ್ರೋಲ್‌ಗಿಂತ ಹೆಚ್ಚು ನಾಶಕಾರಿಯಾಗಿದೆ. ಇದು ವಸ್ತುಗಳ ಬಾಳಿಕೆ ಮತ್ತು ಎಂಜಿನ್ ಟ್ಯೂನಿಂಗ್ ಅನ್ನು ನಿರ್ಣಾಯಕ ಗಮನದ ಕ್ಷೇತ್ರಗಳನ್ನಾಗಿ ಮಾಡುತ್ತದೆ. ಆದಾಗ್ಯೂ, ಈ ಬದಲಾವಣೆಯು ಸಾಕಷ್ಟು ಅವಕಾಶಗಳನ್ನು ಸಹ ಒದಗಿಸುತ್ತದೆ. ಹೆಚ್ಚಿನ ಎಥೆನಾಲ್ ಮಿಶ್ರಣಗಳಲ್ಲಿ ಚಲಿಸುವ ವಾಹನಗಳು ಸುಧಾರಿತ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ನೀಡಬಹುದು. ದೇಶೀಯವಾಗಿ ಉತ್ಪಾದಿಸುವ ಎಥೆನಾಲ್ ಕಾಲಾನಂತರದಲ್ಲಿ ಗ್ರಾಹಕರಿಗೆ ಇಂಧನ ವೆಚ್ಚವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
