ಕಠ್ಮಂಡು: ವಿಶ್ವದ ಅತಿ ಎತ್ತರದ ಶಿಖರವಾದ ಮೌಂಟ್ ಎವರೆಸ್ಟ್ (Mount Everest) ಏರಿದ ಇಬ್ಬರು ಭಾರತೀಯ (Indians) ಪರ್ವತಾರೋಹಿಗಳು ಇಳಿಯುವ ವೇಳೆ ಮೃತಪಟ್ಟಿದ್ದಾರೆ.
ಅರುಣ್ ಕುಮಾರ್ ತಿವಾರಿ ಮತ್ತು ಸಂದೀಪ್ ಅರೆ ಸಾವನ್ನಪ್ಪಿದ ಪರ್ವತಾರೋಹಿಗಳು ಎಂದು ಗುರುತಿಸಲಾಗಿದೆ. ಸಂದೀಪ್ ಅರೆ ಬುಧವಾರ ಹಾಗೂ ಅರುಣ್ ಕುಮಾರ್ ತಿವಾರಿ ಗುರುವಾರ ಸಂಜೆ ಎವರೆಸ್ಟ್ ಶಿಖರ ತಲುಪಿದ್ದರು. ಆದರೆ ಶಿಖರದಿಂದ ಕೆಳಗಿಳಿಯುವ ವೇಳೆ ಇಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ. ಮಾರ್ಗದರ್ಶಕರು ಅವರನ್ನು ರಕ್ಷಿಸಲು ಪ್ರಯತ್ನಪಟ್ಟರೂ ಸಾಧ್ಯವಾಗಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ, ಒಬ್ಬ ಪರ್ವತಾರೋಹಿ ಕ್ಯಾಂಪ್-2ರಲ್ಲಿ ಮೃತಪಟ್ಟಿದ್ದರೆ, ಮತ್ತೊಬ್ಬರು ಹಿಲರಿ ಸ್ಟೆಪ್ ಬಳಿ ಸಾವನ್ನಪ್ಪಿದ್ದಾರೆ. ಹಿಲರಿ ಸ್ಟೆಪ್ ಎವರೆಸ್ಟ್ ಶಿಖರದ ಸಮೀಪದಲ್ಲಿರುವ ಅತ್ಯಂತ ಅಪಾಯಕಾರಿ ಪ್ರದೇಶವಾಗಿದ್ದು, ಅಲ್ಲಿ ಆಮ್ಲಜನಕದ ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ಈ ಪ್ರದೇಶವನ್ನು “ಡೆತ್ ಝೋನ್” ಎಂದೂ ಕರೆಯಲಾಗುತ್ತದೆ. ಒಂದು ಮೃತದೇಹ ಇನ್ನೂ ಎತ್ತರ ಪ್ರದೇಶದಲ್ಲಿದ್ದು, ಮತ್ತೊಂದು ಮೃತದೇಹವನ್ನು ಕ್ಯಾಂಪ್-2ರಿಂದ ಕೆಳಕ್ಕೆ ತರಲು ಕಾರ್ಯಾಚರಣೆ ನಡೆಯುತ್ತಿದೆ.
ಬುಧವಾರ ಒಟ್ಟು 274 ಪರ್ವತಾರೋಹಿಗಳು ಎವರೆಸ್ಟ್ ಶಿಖರ ಏರಿದ್ದು, ಒಂದೇ ದಿನದಲ್ಲಿ ದಾಖಲಾಗಿರುವ ಅತಿ ಹೆಚ್ಚು ಏರಿಕೆಯ ಹೊಸ ದಾಖಲೆ ನಿರ್ಮಾಣವಾಗಿತ್ತು. ಈ ತಂಡದಲ್ಲಿ ಸಂದೀಪ್ ಅರೆ ಸೇರಿದಂತೆ ಭಾರತದ ತುಳಸಿ ರೆಡ್ಡಿ ಪಾಲ್ಪುನೂರಿ ಹಾಗೂ ಅಜಯ್ ಪಾಲ್ ಸಿಂಗ್ ಧಲಿವಾಲ್ ಕೂಡ ಇದ್ದರು. ಇದರ ಬಳಿಕ ಗುರುವಾರ ಭಾರತದ ಲಕ್ಷ್ಮೀಕಾಂತ ಮಂಡಲ್ ಕೂಡ ಎವರೆಸ್ಟ್ ಶಿಖರ ತಲುಪಿದ್ದರು.
ಎವರೆಸ್ಟ್ ಏರಿಕೆ ವೇಳೆ ಹವಾಮಾನ ವೈಪರೀತ್ಯ, ಕಡಿಮೆ ಆಮ್ಲಜನಕ ಮತ್ತು ತೀವ್ರ ಹಿಮಪಾತದಂತಹ ಅಪಾಯಗಳು ಪರ್ವತಾರೋಹಿಗಳಿಗೆ ದೊಡ್ಡ ಸವಾಲಾಗಿವೆ. ಕಳೆದ ವರ್ಷವೂ ಚೀನಾ ಭಾಗದಲ್ಲಿ ಭಾರೀ ಹಿಮಪಾತದ ಕಾರಣ ಸುಮಾರು 900 ಮಂದಿ ಸಿಲುಕಿಕೊಂಡಿದ್ದ ಘಟನೆ ನಡೆದಿತ್ತು. ಬಳಿಕ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿತ್ತು.

