ದುಬೈ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆ ಹಿನ್ನೆಲೆ ದುಬೈನಲ್ಲಿ (Dubai) ಸಿಲುಕಿರುವ ಭಾರತೀಯರ (Indians) ನೆರವಿಗೆ ಉದ್ಯಮಿಯೊಬ್ಬರು ನಿಂತಿದ್ದಾರೆ.
ಮಾನವೀಯತೆಯ ದೃಷ್ಟಿಯಿಂದ ಅಲ್ ಮಿಜಾನ್ ಗ್ರೂಪ್‌ನ ಅಧ್ಯಕ್ಷ ಯೋಗೇಶ್ ದೋಷಿ, ದುಬೈನಲ್ಲಿ ಸಿಲುಕಿಕೊಂಡಿದ್ದ ಭಾರತೀಯರಿಗೆ ತಮ್ಮ 64 ಅಪಾರ್ಟ್‌ಮೆಂಟ್‌ಗಳ ಸಂಪೂರ್ಣ ವಸತಿ ಕಟ್ಟಡವನ್ನು ತೆರೆದಿದ್ದಾರೆ. ಇದನ್ನೂ ಓದಿ: ಇರಾನ್ ಹಡಗುಗಳನ್ನು ವಶಪಡಿಸಿಕೊಳ್ಳೋದಕ್ಕಿಂತ ಮುಳುಗಿಸೋದೆ ನಮ್ಮ ಸೇನೆಗೆ ಮಜಾ: ಟ್ರಂಪ್
ಭಾರತೀಯರಿಗೆ ಊಟ, ವಸತಿ ಸೌಕರ್ಯ ಸೇರಿದಂತೆ ಮೂಲಭೂತ ಸೌಲಭ್ಯಗಳೊಂದಿಗೆ ಉಚಿತವಾಗಿ ಒದಗಿಸಿದ್ದಾರೆ. ಯುಎಇಯ ಇಂಡಿಯನ್ ಪೀಪಲ್ಸ್ ಫೋರಮ್ ಮತ್ತು ದುಬೈನಲ್ಲಿರುವ ಕಾನ್ಸುಲೇಟ್ ಜನರಲ್ ಆಫ್ ಇಂಡಿಯಾದ ಸಮನ್ವಯದೊಂದಿಗೆ ಈ ಸೌಲಭ್ಯ ಒದಗಿಸಲಾಗಿದೆ. ಮಕ್ಕಳಿರುವ ಕುಟುಂಬಗಳು ಸೇರಿದಂತೆ 125 ಕ್ಕೂ ಹೆಚ್ಚು ಭಾರತೀಯರಿಗೆ ಕಷ್ಟದ ಸಮಯದಲ್ಲಿ ತಾತ್ಕಾಲಿಕ ಆಶ್ರಯ ಪಡೆಯಲು ಸಹಾಯ ಮಾಡಲಾಗಿದೆ ಎಂದು ಯೋಗೇಶ್ ತಿಳಿಸಿದ್ದಾರೆ.
ದುಬೈನಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಅಜ್ಮಾನ್‌ನಲ್ಲಿರುವ ಆಶ್ರಯ ಮನೆಯಲ್ಲಿ ಹಲವಾರು ಭಾರತೀಯ ಪ್ರಯಾಣಿಕರು ಆಶ್ರಯ ಪಡೆದಿದ್ದಾರೆ. ಯುಎಇ ಮೂಲದ ಉದ್ಯಮಿ ಧೀರಜ್ ಜೈನ್ ಅವರು ಈ ಆಶ್ರಯ ತಾಣವನ್ನು ತೆರೆದಿದ್ದಾರೆ. ಅವರು ತಮ್ಮ ದೊಡ್ಡ ತೋಟದ ಮನೆಯನ್ನು, ತಕ್ಷಣ ಮನೆಗೆ ಮರಳಲು ಸಾಧ್ಯವಾಗದ ಜನರಿಗೆ ತಾತ್ಕಾಲಿಕ ವಸತಿ ಸೌಕರ್ಯವಾಗಿ ಪರಿವರ್ತಿಸಿದ್ದಾರೆ. ಇದನ್ನೂ ಓದಿ: ಯುದ್ಧ ನಿಲ್ಲಿಸೋ ನಿರ್ಧಾರ ಅಮೆರಿಕದ್ದಲ್ಲ, ನಮ್ಮದು – ದಾಳಿ ಮುಂದುವರಿದ್ರೆ 1 ಲೀಟರ್ ತೈಲವೂ ಸಿಗಲ್ಲ: ಇರಾನ್
ಹಣ ಅಥವಾ ಉಳಿದುಕೊಳ್ಳಲು ಸ್ಥಳವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ ಅನೇಕ ಪ್ರಯಾಣಿಕರಿಗೆ ಆಶ್ರಯದಲ್ಲಿ ಉಚಿತ ವಸತಿ ಮತ್ತು ಊಟವನ್ನು ಒದಗಿಸಲಾಗಿದೆ. ಹೋಟೆಲ್‌ಗಳು ಮತ್ತು ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಜನರನ್ನು ತೋಟದ ಮನೆಗೆ ಕರೆತರಲು ಅವರು ಆರು ರೋಲ್ಸ್ ರಾಯ್ಸ್ ವಾಹನಗಳು ಸೇರಿದಂತೆ 11 ಕಾರುಗಳನ್ನು ನಿಯೋಜಿಸಿದ್ದಾರೆ.
ಫೆ.28 ರಂದು ಅಮೆರಿಕ ಮತ್ತು ಇಸ್ರೇಲ್ ಎರಡೂ ಮಿತ್ರರಾಷ್ಟ್ರಗಳು ಇರಾನ್ ಮೇಲೆ ಜಂಟಿ ದಾಳಿ ನಡೆಸಿ, ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕೊಂದ ನಂತರ ಮಧ್ಯಪ್ರಾಚ್ಯದಲ್ಲಿ ಯುದ್ಧ ತೀವ್ರಗೊಂಡಿದೆ. ಅಂದಿನಿಂದ ಇರಾನ್, ಇಸ್ರೇಲ್ ಮತ್ತು ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡುತ್ತಿದೆ. ಎರಡೂ ಮಿತ್ರರಾಷ್ಟ್ರಗಳು ಇರಾನಿನ ಗುರಿಗಳ ಮೇಲೆ ದಾಳಿ ಮಾಡುತ್ತಿವೆ.

