– ಮಾಡೆಲಿಂಗ್, ಸಿನಿಮಾ ಕ್ಷೇತ್ರದಲ್ಲೂ ಹೆಸರು ಮಾಡಿದ್ದ ತ್ವಿಶಾ
ಭೋಪಾಲ್: ನಿವೃತ್ತ ನ್ಯಾಯಾಧೀಶರ ಸೊಸೆ ತ್ವಿಶಾ ಶರ್ಮಾ (Twisha Sharma) ಆತ್ಮಹತ್ಯೆ ಪ್ರಕರಣ ದೇಶದಾತ್ಯಂತ ಚರ್ಚೆಯಾಗುತ್ತಿದೆ. ಮಾಡೆಲ್ ಮತ್ತು ನಟಿಯೂ ಆಗಿದ್ದ ತ್ವಿಶಾ ಅವರ ಅನುಮಾನಾಸ್ಪದ ಸಾವಿನ ಕುರಿತು ಕನ್ನಡದ ನಟ ದೀಕ್ಷಿತ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.
`ಮುಗ್ಗುರು ಮೊನಗಲ್ಲು ಸಿನಿಮಾದಲ್ಲಿ ತ್ವಿಶಾ ಜೊತೆ ನಟಿಸಿದ್ದ ದೀಕ್ಷಿತ್ ಶೆಟ್ಟಿ (Dheekshith Shetty), ಆಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡುವ ಮತ್ತು ಜೀವನ ಪ್ರೀತಿಯಿದ್ದ ಹುಡುಗಿ. ಅವಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ಅಂದ್ರೆ ನಂಬೋಕೆ ಆಗ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪತಿ ರೂಮ್‌ಗೆ ಬರುತ್ತಿದ್ದಂತೆ ಕಾಲ್ ಕಟ್ – ನವವಿವಾಹಿತೆ ಅನುಮಾನಾಸ್ಪದ ಸಾವು
4 ವರ್ಷಗಳ ಹಿಂದೆ ಕೊನೆಯ ಬಾರಿ ಅವರ ಜೊತೆ ಮಾತಾಡಿದ್ದೆ. ತ್ವಿಶಾ ಮದುವೆಯಾಗಿದ್ದಾಳೆ ಎಂಬುವುದು ಸಹ ನನಗೆ ಗೊತ್ತಿರಲಿಲ್ಲ. ಅವಳು ಅಭಿನಯಕ್ಕಿಂತ ಓದಿನ ಮೇಲೆ ಹೆಚ್ಚು ಗಮನ ಕೊಡಬೇಕು, ಯಾವಾಗಲೂ ಕುಟುಂಬದ ಜೊತೆ ಇರಬೇಕು ಎಂದು ಹೇಳುತ್ತಿದ್ದಳು ಎಂದು ದೀಕ್ಷಿತ್ ನೆನಪಿಸಿಕೊಂಡರು.
ತ್ವಿಶಾ ಶರ್ಮಾ ಕಾರ್ಪೊರೇಟ್ ಕ್ಷೇತ್ರಕ್ಕೆ ಹೋಗುವ ಮೊದಲು ಸಿನಿಮಾ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದರು. `ಮುಗ್ಗುರು ಮೊನಗಲ್ಲು’ ಮತ್ತು `ಝರಾ ಸಂಭಾಲ್ ಕೇ’ ಸಿನಿಮಾಗಳಲ್ಲಿ ನಟಿಸಿದ್ದ ಅವರು, ಮಾಡೆಲಿಂಗ್ ಕ್ಷೇತ್ರದಲ್ಲೂ ಗುರುತಿಸಿಕೊಂಡಿದ್ದರು. “ಮಿಸ್ ಪುಣೆ” ಪ್ರಶಸ್ತಿಯನ್ನೂ ಸಹ ಪಡೆದಿದ್ದರು. ಇತ್ತೀಚೆಗೆ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ನಟನೆಯ `ದಿ ಗರ್ಲ್ ಫ್ರೆಂಡ್’ ಸಿನಿಮಾದಲ್ಲೂ ಕಾಣಿಸಿಕೊಂಡಿದ್ದರು.
ಮೇ 12ರಂದು ಭೋಪಾಲ್‌ನ ಕಟಾರಾ ಹಿಲ್ಸ್ ಪ್ರದೇಶದಲ್ಲಿರುವ ಪತಿ ಸಮರ್ಥ್ ಸಿಂಗ್ ಮನೆಯಲ್ಲಿ ತ್ವಿಶಾ ಶವವಾಗಿ ಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪತಿ ಸಮರ್ಥ್ ಸಿಂಗ್ ಮತ್ತು ಅವರ ತಾಯಿ, ನಿವೃತ್ತ ನ್ಯಾಯಾಧೀಶೆ ಗಿರಿಬಾಲಾ ಸಿಂಗ್ ವಿರುದ್ಧ ವರದಕ್ಷಿಣೆ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
ಇನ್ನೊಂದೆಡೆ, ಸಮರ್ಥ್ ಸಿಂಗ್ ಪರವಾಗಿ ಸಲ್ಲಿಸಲಾದ ಜಾಮೀನು ಅರ್ಜಿಯಲ್ಲಿ ತ್ವಿಶಾ ಮಾದಕ ವ್ಯಸನಿಯಾಗಿದ್ದು, ಮನೋವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಉಲ್ಲೇಖಿಸಲಾಗಿದೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಇದನ್ನೂ ಓದಿ: ಸ್ಕಾರ್ಪಿಯೋ, 1 ಕೋಟಿ ಮೌಲ್ಯದ ಚಿನ್ನ ಕೊಟ್ಟರು ತೀರದ ವರದಕ್ಷಿಣೆ ದಾಹ – ಪತಿಯ ಕಿರುಕುಳಕ್ಕೆ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಮಹಿಳೆ

