ಭೋಪಾಲ್: ನವ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಭೋಪಾಲ್‌ನಲ್ಲಿ (Bhopal) ನಡೆದಿದೆ. ಮಹಿಳೆ ತನ್ನ ತಾಯಿಯ ಜೊತೆ ಫೋನ್‌ನಲ್ಲಿ ಮಾತಾಡುತ್ತಿದ್ದಳು. ಈ ವೇಳೆ ಪತಿ ರೂಮ್‌ಗೆ ಬಂದಿದ್ದು, ಕರೆ ತಕ್ಷಣ ಕಟ್ ಆಗಿದೆ. ಇದಾದ ಬಳಿಕ ಆಕೆ ಸಾವನ್ನಪ್ಪಿರುವುದು ಅನುಮಾನಕ್ಕೆ ಕಾರಣವಾಗಿದೆ.
ಮೃತಳನ್ನು ಉತ್ತರ ಪ್ರದೇಶದ (Uttar Pradesh) ನೋಯ್ಡಾ ನಿವಾಸಿ ತ್ವಿಶಾ ಶರ್ಮಾ (33) ಎಂದು ಗುರುತಿಸಲಾಗಿದೆ. ಆಕೆ ಭೋಪಾಲ್ ಮೂಲದ ವಕೀಲ ಸಮರ್ಥ್ ಸಿಂಗ್‌ನನ್ನು ವಿವಾಹವಾಗಿದ್ದರು. ಮದುವೆಯಾಗಿ ಕೇವಲ 5 ತಿಂಗಳಿಗೆ ಆಕೆ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ. ಮಗಳ ಹಠಾತ್ ಸಾವಿಗೆ ಅತ್ತೆ, ಮಾವ ಹಾಗೂ ಪತಿಯ ಮಾನಸಿಕ ಕಿರುಕುಳವೇ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಇದನ್ನೂ ಓದಿ: ತಂದೆ, ಆತನ ಸ್ನೇಹಿತನಿಂದಲೇ ಅಪ್ರಾಪ್ತ ಮಗಳ ಮೇಲೆ ಎರಡು ವರ್ಷ ನಿರಂತರ ಅತ್ಯಾಚಾರ
ಮೇ 12ರ ರಾತ್ರಿ 10:05 ಕ್ಕೆ ತ್ವಿಶಾ ತಮ್ಮ ತಾಯಿಗೆ ಕರೆ ಮಾಡಿ ಪತಿಯ ಮನೆಯಲ್ಲಿ ಎದುರಿಸುತ್ತಿದ್ದ ಕಿರುಕುಳದ ಬಗ್ಗೆ ಹೇಳಿದ್ದರು. ಸಂಭಾಷಣೆಯ ವೇಳೆ ಪತಿ ಕೋಣೆಗೆ ಪ್ರವೇಶಿಸಿದ್ದು, ಹಠಾತ್ತನೆ ಕರೆ ಕಟ್ ಆಗಿತ್ತು ಎಂದು ತ್ವಿಶಾ ಅವರ ಸಹೋದರ, ಭಾರತೀಯ ಸೇನೆಯ ಅಧಿಕಾರಿ ಮೇಜರ್ ಹರ್ಷಿತ್ ಶರ್ಮಾ ತಿಳಿಸಿದ್ದಾರೆ.
ಇದಾದ ಬಳಿಕ ನಮ್ಮ ಕುಟುಂಬಸ್ಥರು ತ್ವಿಶಾ, ಸಮರ್ಥ್ ಮತ್ತು ಕುಟುಂಬಸ್ಥರನ್ನು ಸಂಪರ್ಕಿಸಲು ಪದೇ ಪದೇ ಪ್ರಯತ್ನಿಸಿದ್ದರು. ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ. ಹತ್ತು ನಿಮಿಷಗಳ ನಂತರ, ರಾತ್ರಿ 10:15 ಕ್ಕೆ, ಸಮರ್ಥ್ ತಾಯಿ, ಗಿರಿಬಾಲಾ ಸಿಂಗ್ ಕರೆಗೆ ಉತ್ತರಿಸಿದ್ದರು. ಈ ವೇಳೆ ತ್ವಿಶಾ ಏನು ಮಾಡುತ್ತಿದ್ದಾಳೆ ನೋಡಿ ತಿಳಿಸಿ ಎಂದು ಹೇಳಿದ್ದೆವು. ಇದಾದ 5 ನಿಮಿಷಕ್ಕೆ ಅಂದರೆ ರಾತ್ರಿ 10:20 ಕ್ಕೆ, ತ್ವಿಶಾ ಉಸಿರಾಡುತ್ತಿಲ್ಲ ಎಂದು ತಿಳಿಸಿದ್ದರು.
ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲೇ ಆಕೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದರು. ಆಸ್ಪತ್ರೆಗೆ ಹೋಗಲು 10 ನಿಮಿಷ ಸಾಕು ಆದರೆ ಯಾಕೆ ವಿಳಂಬವಾಗಿದೆ ಎಂದು ಕುಟುಂಬಸ್ಥರು ಸಮರ್ಥ್ ಮೇಲೆ ಸಂಶಯ ವ್ಯಕ್ತಪಡಿಸಿದ್ದಾರೆ.
ಸಹೋದರಿಗೆ ಮಾನಸಿಕ ಕಿರುಕುಳ ಮತ್ತು ಹಿಂಸೆ ನೀಡಲಾಗಿದೆ. ಆಕೆ ಗರ್ಭಿಣಿಯಾಗಿದ್ದಳು. ಮಗು ಅಕ್ರಮ ಸಂತಾನದ್ದು ಎಂದು ಗರ್ಭಪಾತ ಮಾಡಿಸಿದ್ದಾರೆ. ಅಲ್ಲದೇ ತಂದೆ ಉಡುಗೊರೆಯಾಗಿ ನೀಡಿದ್ದ 20 ಲಕ್ಷ ರೂ. ಮೌಲ್ಯದ ಷೇರುಗಳು ಮತ್ತು ಹೂಡಿಕೆಯನ್ನು ಆಕೆಯ ಪತಿ, ಅತ್ತೆ-ಮಾವಂದಿರಿಗೆ ವರ್ಗಾಯಿಸಲು ಒತ್ತಡ ಹೇರುತ್ತಿದ್ದರು ಎಂದು ಹರ್ಷಿತ್ ಶರ್ಮಾ ಆರೋಪಿಸಿದ್ದಾರೆ.
ಪ್ರಾಥಮಿಕ ಮರಣೋತ್ತರ ವರದಿಯ ಪ್ರಕಾರ, ಸಾವಿಗೂ ಮುನ್ನ ದೇಹದ ಇತರ ಭಾಗಗಳ ಮೇಲೆ ಗಾಯಗಳಾಗಿವೆ ಎಂದು ಉಲ್ಲೇಖಿಸಲಾಗಿದೆ. ಹೆಚ್ಚಿನ ಪರೀಕ್ಷೆಗಾಗಿ ಅಂಗಾಂಗಗಳನ್ನು ಎಫ್‌ಎಸ್‌ಎಲ್‌ಗೆ ರವಾನಿಸಲಾಗಿದೆ.
ಈ ಪ್ರಕರಣ ಸಂಬಂಧ ಪೊಲೀಸರು ವರದಕ್ಷಿಣೆ ಕಿರುಕುಳ ಆರೋಪದಡಿ ಸಮರ್ಥ್ ಸಿಂಗ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದನ್ನೂ ಓದಿ: ಹಾರ್ಟ್ ಅಟ್ಯಾಕ್ ಅಲ್ಲ, ಪತ್ನಿಯಿಂದ ಕೊಲೆ ಎಂದ ಸಹೋದರ- ಹೂತಿಟ್ಟ ಶವ ಹೊರತೆಗೆದು ಮರು ತನಿಖೆ

