-ಕರ್ನಾಟಕ ಸೇರಿ ದೇಶದ 9 ರಾಜ್ಯಗಳಲ್ಲಿ ಜಾರಿಗೆ ಚಿಂತನೆ
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚರಿಸುವ ವಾಹನ ಸವಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ನಾಲ್ಕು ತಿಂಗಳಲ್ಲಿ ಕರ್ನಾಟಕ ಸೇರಿದಂತೆ ದೇಶದ ಒಂಬತ್ತು ರಾಜ್ಯಗಳಲ್ಲಿ ‘ತಡೆರಹಿತ ಟೋಲ್ ಪ್ಲಾಜಾ’ ವ್ಯವಸ್ಥೆ ಜಾರಿಗೆ ಬರಲಿದೆ. ಚೋರಾಯಸಿಯಲ್ಲಿ ಮೊದಲ ತಡೆ ರಹಿತ ಟೋಲ್ ಪ್ಲಾಜಾ ಆರಂಭಗೊಂಡಿದ್ದು, ಇದೀಗ ದೆಹಲಿಯಲ್ಲೂ ಕಾರ್ಯಾರಂಭಗೊಂಡಿದೆ.
ದೆಹಲಿಯ ಅರ್ಬನ್ ಎಕ್ಸ್ಟೆನ್ಷನ್ ರಸ್ತೆ-2ರಲ್ಲಿ ದೇಶದ ಎರಡನೇ ತಡೆರಹಿತ ಟೋಲ್ ಪ್ಲಾಜಾ ಉದ್ಘಾಟಿಸಿ ಮಾತನಾಡಿದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಮಹತ್ವದ ವಿಷಯವನ್ನು ಹಂಚಿಕೊಂಡಿದ್ದಾರೆ.ಇದು ಅತ್ಯಾಧುನಿಕ ANPR (Automatic Number Plate Recognition) ಮತ್ತು ಸುಧಾರಿತ ಫಾಸ್ಟ್ಯಾಗ್ ತಂತ್ರಜ್ಞಾನದ ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ ಎಂದು ಹೇಳಿದ್ದಾರೆ. ಹಾಗಿದ್ರೆ ಏನಿದು ತಡೆ ರಹಿತ ಟೋಲ್ ಸಿಸ್ಟಮ್? ವಿಶೇಷತೆಗಳೇನು? ಕೆಲಸ ಹೇಗೆ ಮಾಡುತ್ತೆ ಎಂಬ ಕುರಿತು ಇಲ್ಲಿ ವಿವರಿಸಲಾಗಿದೆ.
ಇನ್ಮೇಲೆ ಟೋಲ್ ಪ್ಲಾಜಾದಲ್ಲಿ ವಾಹನ ನಿಲ್ಲಿಸಬೇಕಿಲ್ಲ:
ಟೋಲ್ ಪ್ಲಾಜಾಗಳಲ್ಲಿ ಟೋಲ್ ಪಾವತಿ ಸದ್ಯ ಫಾಸ್ಟಾಗ್ ಮೂಲಕ ಕಡಿತಗೊಳ್ಳುತ್ತಿದೆ. ಟೋಲ್ ಪ್ಲಾಜಾ ಬಳಿ ವಾಹನ ಸರದಿ ಸಾಲಿನಲ್ಲಿ ನಿಂತು ಸ್ಕ್ಯಾನ್ ಮಾಡಿ ಸಾಗಬೇಕು. ಸಂಚಾರ ದಟ್ಟಣೆ ಹೆಚ್ಚಿದ್ದರೆ ಟೋಲ್ ಪ್ಲಾಜಾ ಬಳಿ ಹೆಚ್ಚಿನ ಸಮಯ ಕಳೆಯಬೇಕಾಗುತ್ತದೆ. ಇದೀಗ ANPR ಹೊಸ ವ್ಯವಸ್ಥೆ ಜಾರಿಗೆ ಬಂದಿದೆ. ಟೋಲ್ ಪ್ಲಾಜಾ ಇರುವುದಿಲ್ಲ, ಟೋಲ್ ಕಲೆಕ್ಷನ್ ಕೇಂದ್ರಗಳೂ ಇಲ್ಲ, ಬ್ಯಾರಿಕೇಡ್ ಇಲ್ಲ. ವಾಹನ ನಿಧಾನ ಮಾಡಿ ಸ್ಕ್ಯಾನ್ ಮಾಡಬೇಕಾದ ಅನಿವಾರ್ಯತೆಯೂ ಇಲ್ಲ. ಗೇಟ್ ಓಪನ್ ಆಗಲು ಕಾಯಬೇಕಾಗಿಲ್ಲ. ಹೆದ್ದಾರಿ ಮೂಲಕ ಸಾಗಿದರೆ ಸಾಕು ಆಟೋಮ್ಯಾಟಿಕ್ ಆಗಿ ಟೋಲ್ ಕಡಿತಗೊಳ್ಳಲಿದೆ. ಹೊಸ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನೀಶನ್ ವ್ಯವಸ್ಥೆ ಜಾರಿಯಾಗಿದೆ.
ದೇಶದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಚಾರವನ್ನು ಮತ್ತಷ್ಟು ಸುಗಮಗೊಳಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹೊಸ ತಂತ್ರಜ್ಞಾನ ಆಧಾರಿತ ಟೋಲ್ ವ್ಯವಸ್ಥೆಯನ್ನು ವಿಸ್ತರಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ದೆಹಲಿಯ ಅರ್ಬನ್ ಎಕ್ಸ್ಟೆನ್ಷನ್ ರೋಡ್-2 (UER-II) ಮಾರ್ಗದಲ್ಲಿನ ಮುಂಡ್ಕಾ-ಬಕ್ಕರ್ವಾಲಾ ಟೋಲ್ ಪ್ಲಾಜಾದಲ್ಲಿ ಮಲ್ಟಿ ಲೇನ್ ಫ್ರೀ ಫ್ಲೋ (MLFF) ಟೋಲ್ ವ್ಯವಸ್ಥೆಯನ್ನು ಉದ್ಘಾಟಿಸಿದ್ದಾರೆ.
ಈ ಹೊಸ ವ್ಯವಸ್ಥೆಯ ಮೂಲಕ ವಾಹನಗಳು ಟೋಲ್ ಪ್ಲಾಜಾದಲ್ಲಿ ನಿಲ್ಲದೇ ನೇರವಾಗಿ ಸಂಚರಿಸಬಹುದಾಗಿದೆ. ಇದರಿಂದ ಸಂಚಾರ ದಟ್ಟಣೆ ಕಡಿಮೆಯಾಗುವುದರ ಜೊತೆಗೆ ಸಮಯ ಮತ್ತು ಇಂಧನ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮೊದಲು ಗುಜರಾತ್ನ ಸುರತ್-ಭರೂಚ್ ರಾಷ್ಟ್ರೀಯ ಹೆದ್ದಾರಿ-48ರಲ್ಲಿ ದೇಶದ ಮೊದಲ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ವ್ಯವಸ್ಥೆಯನ್ನು ಆರಂಭಿಸಲಾಗಿತ್ತು. ಇದೀಗ ದೆಹಲಿಯಲ್ಲೂ ಈ ವ್ಯವಸ್ಥೆ ಜಾರಿಯಾಗಿರುವುದು ದೇಶದ ಹೆದ್ದಾರಿ ಮೂಲಸೌಕರ್ಯದಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮೊದಲ ANPR ಆರಂಭ:
ದೆಹಲಿ ಮುಂಬೈ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಭಾರತದ ಮೊದಲ ANPR ಟೋಲ್ ಕಡಿತ ವ್ಯವಸ್ಥೆ ಆರಂಭಗೊಂಡಿದೆ. ಸೂರತ್ ಬಳಿ ಈ ANPR ವ್ಯವಸ್ಥೆ ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ಸಾಗುವಾಗ ಯಾವುದೇ ಟೋಲ್ ಪ್ಲಾಜಾಗಳು ಸಿಗುವುದಿಲ್ಲ. ಎಷ್ಟೇ ವೇಗದಲ್ಲಿ ಹೋದರೂ ಆಟೋಮ್ಯಾಟಿಕ್ ಆಗಿ ಟೋಲ್ ಕಡಿತಗೊಳ್ಳಲಿದೆ. ಕಳೆದ ಎರಡು ತಿಂಗಳಿನಿಂದ ಪರೀಕ್ಷೆಗಳು ಆರಂಭಗೊಂಡಿತ್ತು. ಇದೀಗ ಹೊಸ ಟೋಲ್ ವ್ಯವಸ್ಥೆ ಕಾರ್ಯಾರಂಭಗೊಂಡಿದೆ.
ಕೇಂದ್ರ ರಸ್ತೆ ಹಾಗೂ ಸಾರಿಗೆ ಸಚಿವಾಲಯದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೊಸ ವ್ಯವಸ್ಥೆ ಜಾರಿ ಮಾಡಿದೆ. ಈ ವ್ಯವಸ್ಥೆಯಲ್ಲಿ ANPR ಹಾಗೂ ಫಾಸ್ಟಾಗ್ ವ್ಯವಸ್ಥೆಯನ್ನೂ ಇಂಟಿಗ್ರೇಟೆಡ್ ಮಾಡಿ ಜಾರಿ ಮಾಡಲಾಗಿದೆ. ಹೆದ್ದಾರಿಗಳಲ್ಲಿ ANPR ತಂತ್ರಜ್ಞಾನ ಅಳವಡಿಸಲಾಗಿದೆ. ಈ ರಸ್ತೆಯಲ್ಲಿ ವಾಹನ ಹಾದು ಹೋಗುವಾಗ ತ್ವರಿತವಾಗಿ ಎಐ ಕ್ಯಾಮೆರಾ, ಎಐ ಸ್ಕ್ಯಾನರ್ ಫಾಸ್ಟಾಗ್ ಸ್ಕ್ಯಾನ್ ಮಾಡಿ ಟೋಲ್ ಹಣ ಕಡಿತ ಮಾಡಲಿದೆ. ಜಿಪಿಎಸ್ ಆಧಾರಿತ ಟೋಲ್ ಸಿಸ್ಟಮ್ ಇದಾಗಿದೆ.
ಪ್ರಯೋಜನಗಳೇನು?
UER-II ಮಾರ್ಗದಲ್ಲಿ ಜಾರಿಗೊಂಡಿರುವ ಹೊಸ ಮಲ್ಟಿ ಲೇನ್ ಫ್ರೀ ಫ್ಲೋ ಟೋಲ್ ವ್ಯವಸ್ಥೆಯಿಂದ ದೈನಂದಿನ ಪ್ರಯಾಣಿಕರಿಗೆ ಹಲವು ಅನುಕೂಲಗಳು ಲಭ್ಯವಾಗಲಿವೆ.
ಪ್ರಮುಖ ಪ್ರಯೋಜನಗಳು:
* ಟೋಲ್ ಪ್ಲಾಜಾಗಳಲ್ಲಿ ಕಾಯುವ ಅವಶ್ಯಕತೆ ಇಲ್ಲ
* ಸಂಚಾರ ಮತ್ತಷ್ಟು ವೇಗವಾಗಿ ಮತ್ತು ಸುಗಮವಾಗಿ ಸಾಗಲಿದೆ
* ಇಂಧನ ಬಳಕೆ ಕಡಿಮೆಯಾಗಿ ವಾಯು ಮಾಲಿನ್ಯ ಕಡಿಮೆಯಾಗಲಿದೆ
ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ವ್ಯವಸ್ಥೆಯಲ್ಲಿ ಟೋಲ್ ಗೇಟ್ಗಳ ಬದಲು ತಂತ್ರಜ್ಞಾನ ಆಧಾರಿತ ಟೋಲ್ ಸಂಗ್ರಹ ವ್ಯವಸ್ಥೆ ಬಳಸಲಾಗುತ್ತದೆ. ವಾಹನಗಳ ನಂಬರ್ ಪ್ಲೇಟ್ ಗುರುತಿಸುವ ANPR ತಂತ್ರಜ್ಞಾನ ಹಾಗೂ ಫಾಸ್ಟ್ಯಾಗ್ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತಗೊಳ್ಳುತ್ತದೆ.
ಫಾಸ್ಟ್ಯಾಗ್ ನಲ್ಲಿ ಬ್ಯಾಲೆನ್ಸ್ ಇರಬೇಕು:
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಗೆ ತಮ್ಮ ಫಾಸ್ಟ್ಯಾಗ್ ಖಾತೆಯಲ್ಲಿ ಸಾಕಷ್ಟು ಮೊತ್ತ ಇರಿಸಿಕೊಳ್ಳುವಂತೆ ಸೂಚಿಸಿದೆ. FASTag ಅಮಾನ್ಯವಾಗಿದ್ದರೆ ಅಥವಾ ಬ್ಯಾಲೆನ್ಸ್ ಕಡಿಮೆ ಇದ್ದರೆ ವಾಹನ ಮಾಲೀಕರಿಗೆ ಇ-ನೋಟಿಸ್ ಕಳುಹಿಸಲಾಗುತ್ತದೆ. ಈ ಶುಲ್ಕವನ್ನು 72 ಗಂಟೆಗಳೊಳಗೆ ಪಾವತಿಸಬೇಕಾಗುತ್ತದೆ. ದೇಶಾದ್ಯಂತ ಈ ವ್ಯವಸ್ಥೆ ತರಲು ಸಿದ್ಧತೆ ನಡೆಸಲಾಗಿದೆ.
ಈ ಟೋಲ್ ವ್ಯವಸ್ಥೆಯಿಂದ ಜನರು ಟೋಲ್ ಹೆದ್ದಾರಿಗಳಲ್ಲಿ ಎಷ್ಟು ಪ್ರಯಾಣ ಮಾಡುತ್ತಾರೋ ಅಷ್ಟೇ ಪಾವತಿ ಮಾಡಿದರೆ ಸಾಕು. ಸದ್ಯ ಇರುವ ವ್ಯವಸ್ಥೆಯಲ್ಲಿ ಹಲವು ಬಾರಿ ವಾಹನ ಸವಾರರು ಟೋಲ್ ಪಾವತಿ ಕೆಲವೇ ಕಿಲೋಮೀಟರ್ ತೆರಳಿ ಬಳಿಕ ತಮ್ಮ ಸ್ಥಳಗಳಿಗೆ ತೆರಳಲು ಸರ್ವೀಸ್ ರಸ್ತೆಗೆ ತಿರುಗುತ್ತಾರೆ. ಇತ್ತ ಸಂಪೂರ್ಣ ಟೋಲ್ ಪಾವತಿಸಿ ಟೋಲ್ ರಸ್ತೆಯಲ್ಲಿ ಕೆಲವೇ ಕಿಲೋಮೀಟರ್ ಬಳಸುತ್ತಾರೆ. ಇದರಿಂದ ವಾಹನ ಸವಾರರಿಗೆ ನಷ್ಟವಾಗುತ್ತದೆ. ಇತ್ತ ಕೆಲವರು ಟೋಲ್ ಪ್ಲಾಜಾ ಬರುವ ಮುನ್ನ ಸರ್ವೀಸ್ ರಸ್ತೆಗೆ ತೆರಳಿ ಬಳಿಕ ಮತ್ತೆ ಹೆದ್ದಾರಿಗೆ ಆಗಮಿಸುತ್ತಾರೆ. ಈ ಮೂಲಕ ಟೋಲ್ ಹಣ ಪಾವತಿಸುವುದನ್ನು ತಪ್ಪಿಸುತ್ತಾರೆ. ಹೊಸ ವ್ಯವಸ್ಥೆಯಿಂದ ನೀವು ಹೆದ್ದಾರಿಗೆ ಎಂಟ್ರಿಯಾದರೆ ಸಾಕು ಎಷ್ಟು ಕಿಲೋಮೀಟರ್ ಪ್ರಯಾಣಿಸುತ್ತೀರಿ, ಅಷ್ಟು ಮೊತ್ತ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳಲಿದೆ.
ಈ ಹೊಸ ಟೋಲ್ ವ್ಯವಸ್ಥೆಯಿಂದ ಟೋಲ್ ನಿರ್ವಹಣೆಯಲ್ಲಿ ಪಾರದರ್ಶಕತೆ ಹೆಚ್ಚುವುದರ ಜೊತೆಗೆ ಭೌತಿಕ ಟೋಲ್ ಪ್ಲಾಜಾಗಳ ನಿರ್ವಹಣಾ ವೆಚ್ಚವೂ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ದೇಶದ ವಿವಿಧ ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇದೇ ಮಾದರಿಯ ತಡೆರಹಿತ ಟೋಲ್ ವ್ಯವಸ್ಥೆಯನ್ನು ಜಾರಿಗೆ ತರಲು ಸರ್ಕಾರ ಯೋಜಿಸಿದೆ.

