– ಮಗನೊಂದಿಗಿನ ಭಾವುಕ ವಿಡಿಯೋ ಹಂಚಿಕೊಂಡ ಸೆಹ್ವಾಗ್
– ಅಂಡರ್-19 ಏಷ್ಯಾಕಪ್ ಗೆಲುವಿನ ಸಂಭ್ರಮ
– 5 ಪಂದ್ಯಗಳಲ್ಲಿ 361 ರನ್ ಹೊಡೆದ ಆರ್ಯವೀರ್
ನವದೆಹಲಿ: ಅಂಡರ್-19 ಏಷ್ಯಾಕಪ್ ಫೈನಲ್ನಲ್ಲಿ(Asia Cup Final) ಪಾಕಿಸ್ತಾನ(Pakistan) ವಿರುದ್ಧ ಭಾರತ ತಂಡವು ರೋಚಕ ಜಯ ಸಾಧಿಸಿದ ಬೆನ್ನಲ್ಲೇ, ಭಾರತದ ಮಾಜಿ ದಿಗ್ಗಜ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್(Virender Sehwag) ಅವರು ತಮ್ಮ ಪುತ್ರ ಆರ್ಯವೀರ್ ಸೆಹ್ವಾಗ್ ಜೊತೆ ನಡೆಸಿದ ವಿಡಿಯೋ ಕರೆಯ ಹೃದಯಸ್ಪರ್ಶಿ ವಿಡಿಯೋವನ್ನು ಹಂಚಿಕೊಂಡಿದ್ದಾರೆ.
“ಇವು ಒಬ್ಬ ತಂದೆ ಜೀವನಪರ್ಯಂತ ನೆನಪಿನಲ್ಲಿಟ್ಟುಕೊಳ್ಳುವ ಕ್ಷಣಗಳು” ಎಂದು ಬಣ್ಣಿಸಿರುವ ಸೆಹ್ವಾಗ್, ತಮ್ಮ ಪುತ್ರ ಪರಿಶ್ರಮ ಮತ್ತು ಪ್ರತಿಭೆಯ ಮೂಲಕ ಆಕಾಶದೆತ್ತರಕ್ಕೆ ಬೆಳೆಯಲಿ ಎಂದು ಹಾರೈಸಿದ್ದಾರೆ.
ಶನಿವಾರ ಒಮಾನ್ನಲ್ಲಿ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ನೀಡಿದ್ದ 338 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತಕ್ಕೆ ಆರ್ಯವೀರ್(Aaryavir Sehwag) 61 ಎಸೆತಗಳಲ್ಲಿ 58 ರನ್ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಅಂತಿಮ ಎಸೆತದಲ್ಲಿ ಮೋಹಿತ್ ಉಲ್ವಾ ಬಾರಿಸಿದ ಬೌಂಡರಿಯ ನೆರವಿನಿಂದ ಭಾರತ ಗೆಲುವಿನ ನಗೆ ಬೀರಿತು.
View this post on Instagram
ಟೂರ್ನಿಯುದ್ದಕ್ಕೂ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಆರ್ಯವೀರ್, 5 ಪಂದ್ಯಗಳಲ್ಲಿ 90.25ರ ಸರಾಸರಿ ಹಾಗೂ 95ಕ್ಕೂ ಹೆಚ್ಚಿನ ಸ್ಟ್ರೈಕ್ ರೇಟ್ನಲ್ಲಿ 361 ರನ್ (ಒಂದು ಶತಕ ಮತ್ತು ಮೂರು ಅರ್ಧಶತಕ) ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಟೂರ್ನಿಯಲ್ಲಿ ಅತಿ ಹೆಚ್ಚು ಅಂದರೆ 16 ಸಿಕ್ಸರ್ಗಳನ್ನು ಸಿಡಿಸುವ ಮೂಲಕ ತಂದೆಯ ಪರಂಪರೆಯನ್ನು ಮುಂದುವರಿಸಿದ ಆರ್ಯವೀರ್, ಸೆಮಿಫೈನಲ್ ಮತ್ತು ಫೈನಲ್ ಎರಡೂ ಪಂದ್ಯಗಳಲ್ಲಿ ಅರ್ಧಶತಕ ಬಾರಿಸಿ ತಾವೊಬ್ಬ ‘ಬಿಗ್ ಮ್ಯಾಚ್ ಪ್ಲೇಯರ್’ ಎಂಬುದನ್ನು ಸಾಬೀತುಪಡಿಸಿದ್ದಾರೆ.
ಪಂದ್ಯದ ಬಳಿಕ ನಡೆದ ಸಂಭಾಷಣೆಯ ಇನ್ಸ್ಟಾಗ್ರಾಮ್ ವಿಡಿಯೋದಲ್ಲಿ, ಕೊನೆಯ ಓವರ್ನಲ್ಲಿ ಭಾರತಕ್ಕೆ ಕೇವಲ 1 ವಿಕೆಟ್ ಬಾಕಿ ಇದ್ದು 8 ರನ್ಗಳ ಅಗತ್ಯವಿದ್ದಾಗ ತಮಗಾದ ಆತಂಕ ಮತ್ತು ಒತ್ತಡದ ಬಗ್ಗೆ ಆರ್ಯವೀರ್ ತಂದೆಯ ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಪಾಕಿಸ್ತಾನ ವಿರುದ್ಧ ರಣರೋಚಕ ಗೆಲುವು; ಅಂಡರ್-19 ಏಷ್ಯಾಕಪ್ ಗೆದ್ದ ಭಾರತ
ಈ ವಿಡಿಯೋಗೆ ಭಾವುಕ ಸಾಲುಗಳನ್ನು ಬರೆದಿರುವ ವೀರೇಂದ್ರ ಸೆಹ್ವಾಗ್, “ಪಪ್ಪಾ, ನನಗೆ ತುಂಬಾ ಭಯವಾಗುತ್ತಿತ್ತು… ಕೇವಲ ಸೀತಾ ರಾಮ್, ಸೀತಾ ರಾಮ್ ಎಂದು ಜಪಿಸುತ್ತಿದ್ದೆ! ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದಿದ್ದರಿಂದ ಹಿಡಿದು ಆ ರೋಚಕ ಅಂತಿಮ ಕ್ಷಣಗಳನ್ನು ನೆನಪಿಸಿಕೊಳ್ಳುವವರೆಗೆ ಮಗ ಆರ್ಯವೀರ್ ಜೊತೆಗಿನ ಬಹಳ ವಿಶೇಷ ಸಂಭಾಷಣೆ ಇದಾಗಿದೆ. ಕೆಲವು ಕ್ಷಣಗಳು ಪ್ರಶಸ್ತಿಗಳು, ರನ್ಗಳು ಮತ್ತು ಟ್ರೋಫಿಗಳಿಗಿಂತ ದೊಡ್ಡದಾಗಿರುತ್ತವೆ. ಇವು ಒಬ್ಬ ತಂದೆ ಎಂದೆಂದಿಗೂ ಜೋಪಾನವಾಗಿಡುವ ನೆನಪುಗಳು. ನೀನು ಯಾವಾಗಲೂ ವಿನಯದಿಂದ ಇದ್ದು, ನಿನ್ನ ಪರಿಶ್ರಮ ಮತ್ತು ಪ್ರತಿಭೆಯಿಂದ ಆಕಾಶವನ್ನು ಮುಟ್ಟುವಂತಾಗಲಿ. ಶ್ರೀ ಸೀತಾರಾಮ್” ಎಂದು ಶುಭ ಹಾರೈಸಿದ್ದಾರೆ.
