ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರ ಮುಂಬೈನ ಜುಹುವಿನಲ್ಲಿರುವ ಪ್ರಸಿದ್ಧ ‘ಜಲ್ಸಾ’ ಬಂಗಲೆಯ ಮಾಲೀಕತ್ವದ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಅಮಿತಾಬ್ ಅವರ ಕಿರಿಯ ಸಹೋದರ ಅಜಿತಾಬ್ ಬಚ್ಚನ್ ಅವರ ಪತ್ನಿ ರಮೋಲಾ ಬಚ್ಚನ್, 1993ರಲ್ಲಿ ಜಯಾ ಬಚ್ಚನ್ ಅವರ ಹೆಸರಿಗೆ ಆಸ್ತಿಯನ್ನು ವರ್ಗಾಯಿಸಲಾಗಿದೆ ಎನ್ನಲಾದ ಉಡುಗೊರೆ ಪತ್ರದ (Gift Deed) ಸಿಂಧುತ್ವವನ್ನು ಪ್ರಶ್ನಿಸಿದ್ದಾರೆ.
ತಮ್ಮ ಒಪ್ಪಿಗೆ ಇಲ್ಲದೆ ಆಸ್ತಿ ವರ್ಗಾವಣೆ ನಡೆದಿದೆ ಎಂಬುದು ರಮೋಲಾ ಅವರ ಆರೋಪ. ಕಪೋಲ್ ಹೌಸಿಂಗ್ ಸೊಸೈಟಿಯ ದಾಖಲೆಗಳಲ್ಲಿ ‘ಜಲ್ಸಾ’ ಬಂಗಲೆಯ ಮಾಲೀಕರಾಗಿ ಜಯಾ ಬಚ್ಚನ್ ಅವರ ಹೆಸರಿದೆ. ಆದರೆ ಮಹಾರಾಷ್ಟ್ರ ಸರ್ಕಾರದ ಆಸ್ತಿ ಕಾರ್ಡ್ನಲ್ಲಿ (Property Card) ಇನ್ನೂ ರಮೋಲಾ ಬಚ್ಚನ್ ಅವರ ಹೆಸರಿದೆ ಎನ್ನಲಾಗಿದೆ. ಸರ್ಕಾರಿ ದಾಖಲೆಯಲ್ಲಿ ತಮ್ಮ ಹೆಸರನ್ನು ತೆಗೆದು ಜಯಾ ಬಚ್ಚನ್ ಅವರ ಹೆಸರನ್ನು ಸೇರಿಸುವ ಪ್ರಕ್ರಿಯೆ ಆರಂಭವಾದಾಗ ಈ ವಿವಾದ ಮುನ್ನೆಲೆಗೆ ಬಂದಿದೆ.
1993ರ ಉಡುಗೊರೆ
‘ಜಲ್ಸಾ’ ಬಂಗಲೆಯನ್ನು ಮೂಲತಃ ತಮ್ಮ ಹೆಸರಿನಲ್ಲಿ ನೋಂದಾಯಿಸಲಾಗಿತ್ತು ಎಂದು ರಮೋಲಾ ದೂರಿನಲ್ಲಿ ತಿಳಿಸಿದ್ದಾರೆ. 1993ರಲ್ಲಿ ಸಿದ್ಧಪಡಿಸಲಾದ ಉಡುಗೊರೆ ಪತ್ರಕ್ಕೆ ಸ್ಟಾಂಪ್ ಡ್ಯೂಟಿ ಪಾವತಿಸಿಲ್ಲ. ಅದನ್ನು ಸರಳ ಕಾಗದದಲ್ಲಿ ಸಿದ್ಧಪಡಿಸಲಾಗಿದ್ದು, ಸಾಕ್ಷಿಗಳ ಸಹಿಯೂ ಇಲ್ಲ ಎಂದು ಅವರು ಆರೋಪಿಸಿದ್ದಾರೆ. ಇದರ ಜೊತೆಗೆ, ಮಹಾರಾಷ್ಟ್ರ ಸರ್ಕಾರದ ‘ಅಭಯ ಯೋಜನೆ’ ಅಡಿಯಲ್ಲಿ ಈ ದಾಖಲೆಯನ್ನು ನೋಂದಾಯಿಸಿ ಕ್ರಮಬದ್ಧಗೊಳಿಸಿರುವ ಪ್ರಕ್ರಿಯೆಯ ಬಗ್ಗೆಯೂ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವಿವಾದದ ಕುರಿತು ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರಿಂದ ಯಾವುದೇ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಅಭಿಷೇಕ್ ಬಚ್ಚನ್ ಅವರ ವಕ್ತಾರರು ಇದನ್ನು ಕುಟುಂಬದ ಆಂತರಿಕ ವಿಷಯ ಎಂದು ಹೇಳಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.ಇದನ್ನೂ ಓದಿ: ಬಾಕ್ಸಾಫೀಸ್ನಲ್ಲಿ ಧೂಳೆಬ್ಬಿಸಿದ ಯಶ್ ʻರಾಮಾಯಣʼ – ಕಾಂತಾರ ಚಾಪ್ಟರ್-1, ಜವಾನ್, ಕಲ್ಕಿ ದಾಖಲೆಗಳು ಉಡೀಸ್
ಮುಂಬೈನ ಪ್ರಸಿದ್ಧ ಸೆಲೆಬ್ರಿಟಿ ನಿವಾಸಗಳಲ್ಲಿ ಒಂದಾಗಿರುವ ‘ಜಲ್ಸಾ’, ಪ್ರತಿ ಭಾನುವಾರ ಅಮಿತಾಬ್ ಬಚ್ಚನ್ ತಮ್ಮ ಅಭಿಮಾನಿಗಳನ್ನು ಭೇಟಿಯಾಗಿ ಶುಭಾಶಯ ಕೋರುವ ಸ್ಥಳವಾಗಿಯೂ ಗುರುತಿಸಿಕೊಂಡಿದೆ. ಇದೀಗ ಈ ನಿವಾಸದ ಮಾಲೀಕತ್ವದ ವಿಚಾರ ಕುಟುಂಬದೊಳಗಿನ ವಿವಾದಕ್ಕೆ ಕಾರಣವಾಗಿರುವುದು ಸುದ್ದಿಯಾಗಿದೆ.ಇದನ್ನೂ ಓದಿ: ಮದ್ವೆಯಾದ ನಾಲ್ಕೇ ತಿಂಗಳಿಗೆ ಫ್ಯಾನ್ಸ್ಗೆ ಗುಡ್ನ್ಯೂಸ್ ಕೊಟ್ಟ ʻನವಗ್ರಹʼ ನಟಿ ಶರ್ಮಿಳಾ ಮಾಂಡ್ರೆ!
