ದೇಶದಲ್ಲಿ ದಾಖಲೆಯ ವಿದ್ಯುತ್ ಬೇಡಿಕೆ – ಯಶಸ್ವಿಯಾಗಿ ಪೂರೈಕೆಯಾಗಿದ್ದು ಹೇಗೆ?

ಭಾರತದಲ್ಲಿ ಕಳೆದ ಏಪ್ರಿಲ್‌ ತಿಂಗಳಲ್ಲಿ ದಾಖಲೆ ಮಟ್ಟದ ವಿದ್ಯುತ್ ಬೇಡಿಕೆ ಹೆಚ್ಚಾಗಿತ್ತು. ರಾತ್ರಿ ವೇಳೆ (ಸಂಜೆ 6 ರಿಂದ ಬೆಳಿಗ್ಗೆ 6 ರವರೆಗೆ) ವಿದ್ಯುತ್‌ಗೆ ಹೆಚ್ಚಿನ ಬೇಡಿಕೆ ಉಂಟಾಗಿತ್ತು ಎಂದು ವರದಿಯಾಗಿದೆ. ವಿದ್ಯುತ್‌ ಗರಿಷ್ಠ ಬೇಡಿಕೆ 256 GW ಇತ್ತು. ರಾತ್ರಿ ವೇಳೆ 5.4 GW ಕೊರತೆ ಉಂಟಾಗಿತ್ತು. ಹಗಲಿನ ವೇಳೆ ಬೇಡಿಕೆ ಇದ್ದ 256 GWನ ಗರಿಷ್ಠ ವಿದ್ಯುತ್ ಬೇಡಿಕೆಯನ್ನು ಕೊರತೆಯಿಲ್ಲದೆ ಪೂರೈಸಲಾಗಿದೆ. ಈ ಬೆಳಣಿಗೆಯಿಂದ ಪವರ್‌ ಗ್ರೀಡ್‌ಗಳ ಮೇಲೆ ಭಾರೀ ಒತ್ತಡಕ್ಕೂ ಕಾರಣವಾಗಿತ್ತು.

ಕರ್ನಾಟಕದಲ್ಲಿ ಏಪ್ರಿಲ್ 1ರಿಂದ 26ರವರೆಗೆ 910.1 ಕೋಟಿ ಯುನಿಟ್‌ಗಳ (MU) ವಿದ್ಯುತ್ ಬಳಕೆ ದಾಖಲಾಗಿದ್ದು, ಇದು ಕಳೆದ ಐದು ವರ್ಷಗಳಲ್ಲಿ ಅತಿ ಹೆಚ್ಚು ಹಾಗೂ 2025ರ ಇದೇ ಅವಧಿಗಿಂತ ಸುಮಾರು 20% ಹೆಚ್ಚಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಅವಧಿಯ ಬಳಕೆ 7,500ರಿಂದ 8,000 MUಗಳ ನಡುವೆ ಇತ್ತು. ಈ ಧಿಡೀರ್‌ ಬೆಳವಣಿಗೆಗೆ ಕಾರಣವೇನು ಎಂಬುದರ ಬಗ್ಗೆ ಇಲ್ಲಿ ವಿವರಿಸಲಾಗಿದೆ.

ವಿಪರೀತ ಬಿಸಿಲಿನ ತಾಪ ವಿದ್ಯುತ್ ಬಳಕೆಯ ಏರಿಕೆಗೆ ಪ್ರಮುಖ ಕಾರಣವಾಗಿದೆ. ಈ ವರ್ಷ ತೀವ್ರವಾದ ಬಿಸಿಲು ಕಂಡುಬಂದಿದ್ದು, ಹೆಚ್ಚಿನ ಜನರು ಏರ್ ಕಂಡೀಷನ್, ಫ್ಯಾನ್‌ಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ವಿದ್ಯುತ್‌ ಬೇಡಿಕೆಯೂ ಹೆಚ್ಚಾಗಿದೆ ಎಂದು ಇಂಧನ ಇಲಾಖೆ ಹೇಳಿದೆ.

ರಾತ್ರಿ ವೇಳೆ ಹೆಚ್ಚಿದ ವಿದ್ಯುತ್‌ ಬೇಡಿಕೆ
ಹೆಚ್ಚಿದ ತಾಪಮಾನ: ಭಾರತ ಸೇರಿದಂತೆ ವಿಶ್ವದ ಬಹುತೇಕ ಭಾಗಗಳಲ್ಲಿ ತಾಪಮಾನ ಹೆಚ್ಚಾಗಿದೆ. ಇದರಿಂದ ಎಸಿ, ಫ್ಯಾನ್‌ ಹಾಗೂ ಫ್ರಿಡ್ಜ್‌ಗಳ ಬಳಕೆ ಹೆಚ್ಚಾಗಿದೆ. ಹಗಲು ಮಾತ್ರವಲ್ಲದೇ ರಾತ್ರಿ ವೇಳೆಯಲ್ಲೂ ಜನ ಇವುಗಳನ್ನು ಬಳಸುವುದರಿಂದ ವಿದ್ಯುತ್‌ ಬೇಡಿಕೆ ತೀವ್ರ ಹೆಚ್ಚಾಗಿದೆ.

ರಾತ್ರಿ ವೇಳೆ ಸೋಲರ್‌ ವಿದ್ಯುತ್‌ ಅಲಭ್ಯತೆ: ರಾತ್ರಿ ವೇಳೆಯಲ್ಲಿ ಸೋಲರ್‌ ವಿದ್ಯುತ್‌ ಲಭ್ಯವಿಲ್ಲದ ಕಾರಣ ವಿದ್ಯುತ್‌ ಉತ್ಪಾದನೆ ಕಡಮೆಯಾಗುತ್ತದೆ. ಇದರಿಂದ ವಿದ್ಯುತ್‌ ಕೊರತೆ ಉಂಟಾಗುತ್ತಿದೆ. ಹಗಲಿನಲ್ಲಿ ಉತ್ಪಾದನೆಯಾಗುವ ಹೆಚ್ಚುವರಿ ಸೌರಶಕ್ತಿಯನ್ನು ರಾತ್ರಿ ಬಳಕೆಗಾಗಿ ಸಂಗ್ರಹಿಸಿಡಲು ಅಗತ್ಯವಾದ ದೊಡ್ಡ ಪ್ರಮಾಣದ ಬ್ಯಾಟರಿ ಶೇಖರಣಾ ವ್ಯವಸ್ಥೆಗಳ (Battery Storage) ಕೊರತೆ ಇದೆ. ಇದು ಭಾರತದ ವಿದ್ಯುತ್‌ ವ್ಯವಸ್ಥೆ ಮತ್ತು ಗ್ರಿಡ್‌ಗಳ ವ್ಯವಸ್ಥೆಗೆ ದೊಡ್ಡ ಸವಾಲಾಗಿದೆ.

ಏಪ್ರಿಲ್ 24 ರಂದು ದಾಖಲೆಯ ಬೇಡಿಕೆ
ಭಾರತದಲ್ಲಿ ಏಪ್ರಿಲ್ 24 ರಂದು ವಿದ್ಯುತ್ ಬೇಡಿಕೆಯು ದಾಖಲೆಯ 252 ಗಿಗಾವಾಟ್ (GW) ತಲುಪಿದೆ. ದೇಶಾದ್ಯಂತ ಬೀಸುತ್ತಿರುವ ತೀವ್ರ ಬಿಸಿಗಾಳಿಯೇ ಈ ದಿಢೀರ್ ಏರಿಕೆಗೆ ಪ್ರಮುಖ ಕಾರಣವಾಗಿದೆ.

ಮನೆ ಮತ್ತು ಕಚೇರಿಗಳಲ್ಲಿ ಎಂದಿಗಿಂತ ಮುಂಚಿತವಾಗಿಯೇ ಎಸಿಗಳ ಬಳಕೆ ಹೆಚ್ಚಾಗಿದೆ. ಈ ಪ್ರಮಾಣದ ವಿದ್ಯುತ್ ಬಳಕೆಯ ಏರಿಕೆ ಮುಂಬರುವ ಬೇಸಿಗೆ ದೇಶಕ್ಕೆ ಎಷ್ಟು ಕಠಿಣವಾಗಿರಲಿದೆ ಎಂಬ ಎಚ್ಚರಿಕೆಯ ಗಂಟೆ ಇದಾಗಿದೆ. ಹೆಚ್ಚುತ್ತಿರುವ ಈ ಬೇಡಿಕೆಯನ್ನು ಪೂರೈಸಲು ವಿದ್ಯುತ್ ಗ್ರಿಡ್‌ಗಳ ಮೇಲೆ ಭಾರಿ ಒತ್ತಡ ಉಂಟಾಗಿದೆ. ಸ್ಥಳೀಯವಾಗಿ ವಿದ್ಯುತ್ ವ್ಯತ್ಯಯವಾಗದಂತೆ ತಡೆಯಲು ವಿತರಣಾ ಕಂಪನಿಗಳು ಹರಸಾಹಸ ಪಡುತ್ತಿವೆ. ದಿಢೀರ್ ಬ್ಲ್ಯಾಕ್‌ಔಟ್ ಅಥವಾ ವಿದ್ಯುತ್ ಸ್ಥಗಿತವನ್ನು ತಪ್ಪಿಸಲು ರಾಜ್ಯಗಳು ತಮ್ಮ ಇಂಧನ ದಾಸ್ತಾನುಗಳನ್ನು ಈಗಿನಿಂದಲೇ ಪರಿಶೀಲಿಸುತ್ತಿವೆ.

ಕಲ್ಲಿದ್ದಲು ದಾಸ್ತಾನು ನಿರ್ವಹಣೆ
ವಿದ್ಯುತ್ ಕಂಪನಿಗಳಿಗೆ ಕಲ್ಲಿದ್ದಲು ದಾಸ್ತಾನು ದೊಡ್ಡ ಚಿಂತೆಯ ವಿಷಯವಾಗಿದೆ. ಸದ್ಯಕ್ಕೆ ಪವರ್ ಪ್ಲಾಂಟ್‌ಗಳಲ್ಲಿನ ದಾಸ್ತಾನು ಸ್ಥಿರವಾಗಿದ್ದರೂ, ನಿರಂತರ ಪೂರೈಕೆ ಅಗತ್ಯವಿದೆ. ಇದೇ ವೇಳೆ, ಇಂಡಿಯನ್ ಎನರ್ಜಿ ಎಕ್ಸ್ಚೇಂಜ್‌ನಲ್ಲಿ (IEX) ವಿದ್ಯುತ್ ದರ ಇತ್ತೀಚೆಗೆ ಏರಿಕೆಯಾಗಿದೆ. ಮಾರುಕಟ್ಟೆಯಲ್ಲಿ ದರ ಹೆಚ್ಚಾದಷ್ಟೂ ಗ್ರಾಹಕರ ಮಾಸಿಕ ವಿದ್ಯುತ್ ಬಿಲ್ ಕೂಡ ಏರುವ ಸಾಧ್ಯತೆ ಇದೆ.

ವಿದ್ಯುತ್‌ ಯಶಸ್ವಿ ಪೂರೈಕೆ ಬಗ್ಗೆ ಸಚಿವ ಜೋಶಿ ಹೇಳಿದ್ದೇನು?
ಪ್ರಸ್ತುತ ದೇಶದ ವಿದ್ಯುತ್ ಬೇಡಿಕೆ ದಾಖಲೆಯ ಗರಿಷ್ಠ ಮಟ್ಟ 256.11 GW ತಲುಪಿದ್ದು, ಇದರ ಮೂರನೇ ಒಂದು ಭಾಗದಷ್ಟು ನವೀಕರಿಸಬಹುದಾದ ಇಂಧನ ಮೂಲಗಳಿಂದ ಪೂರೈಸಲಾಗುತ್ತಿದೆ. ಸೌರ, ಪವನ ಮತ್ತು ಜಲ ವಿದ್ಯುತ್ ಸೇರಿದಂತೆ ನವೀಕರಿಸಬಹುದಾದ ಇಂಧನ ಮೂಲದಿಂದ ಗರಿಷ್ಠ ವಿದ್ಯುತ್ ಅಗತ್ಯತೆಯನ್ನು ಯಶಸ್ವಿಯಾಗಿ ಪೂರೈಸಲಾಗುತ್ತಿದೆ. ಇದು ಆತ್ಮನಿರ್ಭರ ಭಾರತದ ಪಾಲಿಗೆ ಹೆಮ್ಮೆಯ ಸಂಗತಿ ಎಂದು ಕೇಂದ್ರ ಪ್ರಹ್ಲಾದ್‌ ಜೋಶಿಯವರು ಹೇಳಿದ್ದಾರೆ.

ವಿವಿಧ ಮೂಲಗಳ ಕೊಡುಗೆ
ನೆರೆ ರಾಷ್ಟ್ರಗಳಿಗೂ ರಫ್ತು: ಭಾರತ ಏ.25ರಂದು ಮಧ್ಯಾಹ್ನ 3:38ಕ್ಕೆ 256.1 GW ನಷ್ಟು ಗರಿಷ್ಠ ವಿದ್ಯುತ್ ಬೇಡಿಕೆಯನ್ನು ನಿರಾಯಾಸವಾಗಿ ಪೂರೈಸಿದೆ. ಅಲ್ಲದೆ, ಅದೇ ವೇಳೆ ನೆರೆಯ ರಾಷ್ಟ್ರಗಳಿಗೂ ವಿದ್ಯುತ್ ರಫ್ತು ಮುಂದುವರಿಸಿದೆ.

ಶುದ್ಧ ಇಂಧನದಿಂದ ಗರಿಷ್ಠ ಬೇಡಿಕೆ
ಸೌರ ಶಕ್ತಿಯಿಂದ 21.5% ರಷ್ಟು, ಜಲ ವಿದ್ಯುತ್ 4.4% ಪವನ ಶಕ್ತಿ 1.9% ಪರಮಾಣು ಮೂಲದಿಂದ 2.4% ಅನಿಲದಿಂದ 2% ಮತ್ತು ಉಷ್ಣ ವಿದ್ಯುತ್ ನಿಂದ 66.9% ರಷ್ಟು ವಿದ್ಯುತ್ ಒದಗಿಸಲಾಗಿದೆ.

ಭವಿಷ್ಯದಲ್ಲಿ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಳ
ಮುಂಬರುವ ದಿನಗಳಲ್ಲಿ ಭಾರತದ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗುವ ವಿಶ್ವಾಸವಿದೆ. ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸಲು ಗ್ರಿಡ್ ಆಧುನೀಕರಣ, ಡಿಜಿಟಲೀಕರಣ ಮತ್ತು AI ಮತ್ತು ಡಿಜಿಟಲ್ ವ್ಯವಸ್ಥೆ ಮೇಲೆ ಸರ್ಕಾರ ಗಮನ ಹರಿಸಿದೆ. ನವೀಕರಿಸಬಹುದಾದ ಇಂಧನದ ಪಾಲನ್ನು ಹೆಚ್ಚಿಸಲು, ಉತ್ಪಾದನೆ ಸುಧಾರಿಸಲು ಮತ್ತು ಪ್ರಸರಣವನ್ನು ಹೆಚ್ಚಿಸಲು ಮತ್ತಷ್ಟು ಪ್ರಯತ್ನ ಮಾಡಲಾಗುತ್ತಿದೆ.

Share This Article