ಮುಂಬೈ: ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ (Ajit Pawar) ಅವರ ಹಠಾತ್ ನಿಧನದಿಂದಾಗಿ ಎನ್‌ಸಿಪಿ ಪಕ್ಷದಲ್ಲಿ ರಾಜಕೀಯ ಬದಲಾವಣೆಗಳು ಆರಂಭವಾಗಿವೆ. ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ (Sunetra Pawar) ಅವರಿಗೆ ಪಕ್ಷದಲ್ಲಿ ಹಾಗೂ ಮಹಾರಾಷ್ಟ್ರ ಸರ್ಕಾರದಲ್ಲಿ ಉನ್ನತ ಹುದ್ದೆಗಳನ್ನು ಕೊಡಿಸಲು ಆ ಪಕ್ಷದ ಶಾಸಕರು ಪ್ರಯತ್ನಿಸುತ್ತಿದ್ದಾರೆ.
ಈ ನಡುವೆ ಮಹಾರಾಷ್ಟ್ರದ ನೂತನ ಉಪಮುಖ್ಯಮಂತ್ರಿಯಾಗಿ (Maharashtra DCM) ಸುನೇತ್ರಾ ಪವಾರ್ ನಾಳೆ (ಜ.31) ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಒಂದು ವೇಳೆ ಸುನೇತ್ರಾ ಪವಾರ್ ಅವರು ಡಿಸಿಎಂ ಆದ್ರೆ ಅದುವೇ ಮುಂದೆ ಶರದ್ ಪವಾರ್ ಅವರ ಎನ್‌ಸಿಪಿ ಜೊತೆಗಿನ ವಿಲೀನಕ್ಕೆ ನಾಂದಿ ಹಾಡಲಿದೆಯೇ? ಎಂಬ ಕುತೂಹಲವೂ ದಟ್ಟವಾಗಿದೆ.

ಸುನೇತ್ರಾ ಪಾವರ್ ಆಯ್ಕೆಗೆ ಬಿಜೆಪಿ, ಎನ್‌ಸಿಪಿ ಬೆಂಬಲ
ರಾಜಕೀಯ ಬಿಸಿಬಿಸಿ ಚರ್ಚೆಗಳು ಜೋರಾಗಿರುವ ಹೊತ್ತಿನಲ್ಲೇ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರ ನಿಧನ ಹೊಂದಿರುವುದರಿಂದ ತೆರವಾಗಿರುವ ಉಪಮುಖ್ಯಮಂತ್ರಿ ಹುದ್ದೆಗೆ, ಎನ್‌ಸಿಪಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವನ್ನ ಮಹಾಯುತಿ ಮೈತ್ರಿಕೂಟ ಬೆಂಬಲಿಸುತ್ತದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ( Devendra Fadnavis) ಹೇಳಿದ್ದಾರೆ.
ಈ ನಿರ್ಧಾರವನ್ನ ಎನ್‌ಸಿಪಿ ತೆಗೆದುಕೊಳ್ಳುತ್ತದೆ. ಎನ್‌ಸಿಪಿ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ನಾವು ಅಜಿತ್ ಪವಾರ್ ಮತ್ತು ಎನ್‌ಸಿಪಿ ಕುಟುಂಬದ ಬೆಂಬಲಕ್ಕೆ ನಿಲ್ಲುತ್ತೇವೆ ಎಂದು ಫಡ್ನವಿಸ್ ತಿಳಿಸಿದ್ದಾರೆ. ಆದ್ರೆ ಅದಕ್ಕೂ ಮುನ್ನವೇ ಎನ್‌ಸಿಪಿ ನಾಯಕರು ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನ ಭೇಟಿ ಮಾಡಿ, ಖಾಲಿ ಇರುವ ಉಪಮುಖ್ಯಮಂತ್ರಿ ಹುದ್ದೆಗೆ ಸುನೇತ್ರಾ ಪವಾರ್ ಅವರ ಆಯ್ಕೆಯನ್ನು ಪರಿಗಣಿಸುವಂತೆ ಮನವಿ ಮಾಡಿದ್ದರು.

ಪ್ರಫುಲ್ ಪಟೇಲ್, ಸುನಿಲ್ ತತ್ಕರೆ, ನಾನು ಮತ್ತು ಧನಂಜಯ್ ಮುಂಡೆ ಒಟ್ಟಾಗಿ, ನಿನ್ನೆ ರಾತ್ರಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನ ಭೇಟಿ ಮಾಡಿದೆವು. ಆದಷ್ಟು ಶೀಘ್ರದಲ್ಲಿ ಸುನೇತ್ರಾ ಪವಾರ್ ಡಿಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವಂತೆ ವ್ಯವಸ್ಥೆ ಮಾಡಲು ಸಾಧ್ಯವೇ ಎಂದು ಕೇಳಿದವು. ಅದಕ್ಕೆ ಫಡ್ನವಿಸ್ ಸಮ್ಮತಿ ಸೂಚಿಸಿದ್ದು, ಸುನೇತ್ರಾ ಪವಾರ್ ಅವರನ್ನ ನಾವು ಒಪ್ಪಿಸುತ್ತೇವೆ ಎಂದು ಮಹಾರಾಷ್ಟ್ರ ಸಚಿವ ಮತ್ತು ಎನ್‌ಸಿಪಿ ನಾಯಕ ಛಗನ್ ಭುಜಬಲ್ ಹೇಳಿದ್ದಾರೆ.

ಪಕ್ಷದ ಬಲವರ್ದನೆ ಲೆಕ್ಕಾಚಾರ
ಸುನೇತ್ರಾ ಅವರು ಎನ್‌ಸಿಪಿ ಪಕ್ಷದ ಅಧ್ಯಕ್ಷೆಯಾಗಿ, ಡಿಸಿಎಂ ಆಗುವುದು ಬಹುತೇಕ ನಿಶ್ಚಿತ. ಇತ್ತ, ಅಜಿತ್ ಪವಾರ್ ಅವರ ಆಪ್ತರಾಗಿರುವ ಕೇಂದ್ರದ ಮಾಜಿ ಸಚಿವರಾದ ಪ್ರಫುಲ್ಲ ಪಟೇಲ್ ಅವರಿಗೆ ಎನ್‌ಸಿಪಿ ಪಕ್ಷದ ಕಾರ್ಯಕಾರಿ ಅಧ್ಯಕ್ಷ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ಪಕ್ಷದ ಆಡಳಿತ ಚುಕ್ಕಾಣಿಯು ಅಜಿತ್ ಪವಾರ್ ಅವರ ವಿಚಾರಧಾರೆ, ಸಿದ್ಧಾಂತಗಳನ್ನೇ ಅನುಸರಿಸುವ ವ್ಯಕ್ತಿಗಳ ಕೈಗೆ ಸಿಕ್ಕಾಗ ಪಕ್ಷವು ಈ ಹಿಂದಿನಂತೆಯೇ ಮುಂದುವರಿದುಕೊಂಡು ಹೋಗುತ್ತದೆ.

