ಚಿತ್ರದುರ್ಗ: ಕಾರು ಹಾಗೂ ಕ್ಯಾಂಟರ್ ಲಾರಿ ಮಧ್ಯೆ ಡಿಕ್ಕಿಯಾದ ಪರಿಣಾಮ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಹಿಂಡಸಕಟ್ಟೆ ಗ್ರಾಮದ ಬಳಿ ನಡೆದಿದೆ.
ಬೀದರ್-ಶ್ರೀರಂಗಪಟ್ಟಣ ರಾಜ್ಯ ಹೆದ್ದಾರಿ 150ಎ ನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಾರಲ್ಲಿದ್ದ ನಾಲ್ವರು ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಸ್ವಿಫ್ಟ್ ಕಾರು ನಜ್ಜುಗುಜ್ಜಾಗಿ ಕಾರಿನ ಅವಶೇಷಗಳು ದಿಕ್ಕಿಗೊಂದು ಬಿದ್ದಿವೆ.
ಕಾರಿನಲ್ಲಿದ್ದವರು ಕೂಡ ಅಪಘಾತದ ವೇಳೆ ಚೆಲ್ಲಾಪಿಲ್ಲಿಯಾಗಿ ದಿಕ್ಕಿಗೊಬ್ರು ಬಿದ್ದಿದ್ದು, ಸ್ಥಳದಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಮೃತರೆಲ್ಲರೂ ಹಿರಿಯೂರು ತಾಲ್ಲೂಕಿನ ನಂಜಯ್ಯನಕೊಟ್ಟಿಗೆ ನಿವಾಸಿಗಳೆಂದು ತಿಳಿದುಬಂದಿದೆ. ವಿಶ್ವನಾಥ್ (22), ನಂಜುಂಡಿ (23), ರಾಹುಲ್ (23), ಯಶ್ವಂತ್ (22) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ.
ಇವರೆಲ್ಲರೂ ಹುಳಿಯಾರಿನಿಂದ ಹಿರಿಯೂರಿಗೆ ಆಗಮಿಸುತ್ತಿದ್ದರು. ಈ ವೇಳೆ ಜವರಾಯನ ರೂಪದಲ್ಲಿ ಎದುರಿಗೆ ಬಂದ ಕ್ಯಾಂಟರ್ ಲಾರಿ ನಾಲ್ವರು ಯುವಕರನ್ನು ಬಲಿ ಪಡೆದಿದೆ. ಘಟನಾ ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಸಿಪಿಐ ಆನಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಪ್ರಕರಣ ಹಿರಿಯೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

