– ದೆಹಲಿಯಲ್ಲಿ ಸುರ್ಜೆವಾಲಾ ಭೇಟಿಯಾದ 7 ಮಂದಿ ಹಿರಿಯ ಶಾಸಕರು
ನವದೆಹಲಿ: ಕರ್ನಾಟಕ ಕಾಂಗ್ರೆಸ್‌ನಲ್ಲಿ ಇತ್ತೀಚೆಗೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವಕಾಶ ವಂಚಿತರಾದ ಹಿರಿಯ ಶಾಸಕರು ಶುಕ್ರವಾರ (ಇಂದು) ದೆಹಲಿಯಲ್ಲಿ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ (Randeep Surjewala) ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು. ಸಚಿವ ಸ್ಥಾನ ಸಿಗದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ನಿಗಮ-ಮಂಡಳಿಗಳಲ್ಲಿ ಸೂಕ್ತ ಅವಕಾಶ ನೀಡಬೇಕು ಎಂದು ಶಾಸಕರು ಹೈಕಮಾಂಡ್‌ಗೆ ಮನವಿ ಮಾಡಿದ್ದಾರೆ.
ಶಾಸಕರಾದ ಹಂಪನಗೌಡ ಬಾದರ್ಲಿ, ಕೋನರೆಡ್ಡಿ, ಅಶೋಕ್ ಪಟ್ಟಣ್, ಕೆ.ವೈ ನಂಜೇಗೌಡ, ಬಸವರಾಜ ದದ್ದಲ್, ಜಿ.ಎಚ್ ಶ್ರೀನಿವಾಸ್ ಹಾಗೂ ಶಾಂತನಗೌಡ ಸೇರಿದಂತೆ 7 ಮಂದಿ ಹಿರಿಯ ಶಾಸಕರು ಸುರ್ಜೆವಾಲಾ ಅವರನ್ನ ಭೇಟಿಯಾಗಿ ಸುಮಾರು ಒಂದು ಗಂಟೆ ಚರ್ಚೆ ನಡೆಸಿದರು.

ಸಭೆಯ ಬಳಿಕ ಶಾಸಕ ಅಶೋಕ್ ಪಟ್ಟಣ್ ಮಾತನಾಡಿ, ತಮ್ಮ ಹಿರಿತನ ಹಾಗೂ ಯೋಗ್ಯತೆಯ ಆಧಾರದ ಮೇಲೆ ನಿಗಮ-ಮಂಡಳಿಗಳಲ್ಲಿ ಉತ್ತಮ ಅವಕಾಶ ನೀಡುವಂತೆ ಮನವಿ ಮಾಡಲಾಗಿದೆ ಎಂದರು. ನಾವು ಪಕ್ಷದೊಂದಿಗೇ ಇದ್ದೇವೆ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇವೆ. ಬಿನೆಟ್ ವಿಚಾರ ಮುಗಿದುಹೋಗಿದೆ. ಅದರ ಬಗ್ಗೆ ಈಗ ಮಾತನಾಡುವುದರಲ್ಲಿ ಅರ್ಥವಿಲ್ಲ. ಮುಂದಿನ ದಿನಗಳಲ್ಲಿ ನಮಗೆ ಉತ್ತಮ ಅವಕಾಶ ನೀಡುವಂತೆ ಮನವಿ ಮಾಡಿದ್ದೇವೆ ಎಂದು ಹೇಳಿದರು.
ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಸಚಿವ ಸಂಪುಟದಲ್ಲಿ ಆಗಿರುವ ಅನ್ಯಾಯವನ್ನ ಸರಿಪಡಿಸುವ ಕುರಿತು ಸುರ್ಜೆವಾಲಾ ವರೊಂದಿಗೆ ಚರ್ಚಿಸಲಾಗಿದೆ. ನಿಗಮ-ಮಂಡಳಿಗಳಲ್ಲಿ ಸೂಕ್ತ ಸ್ಥಾನಮಾನ ನೀಡುವುದರ ಜತೆಗೆ ಮುಂದಿನ ದಿನಗಳಲ್ಲಿ ಪಕ್ಷವನ್ನ ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಸಂಘಟನೆಯನ್ನ ಬಲಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ತಿಳಿಸಿದರು.
ಶಾಸಕ ಕೋನರೆಡ್ಡಿ ಮಾತನಾಡಿ, ರಾಜ್ಯದ ಶಾಸಕರ ನಿಯೋಗವಾಗಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿದ್ದೇವೆ. ಈ ಹಿಂದೆ ಎಲ್ಲರಿಗೂ ಸಚಿವ ಸ್ಥಾನ ನೀಡಬೇಕು ಎಂದು ಸುರ್ಜೆವಾಲ ಅವರ ಬಳಿ ಮನವಿ ಮಾಡಿದ್ದೆವು. ವಿವಿಧ ಲೆಕ್ಕಾಚಾರಗಳ ಆಧಾರದ ಮೇಲೆ ಪಕ್ಷ ಸಚಿವ ಸಂಪುಟ ರಚಿಸಿದೆ. ಮುಂದೆ ನಮಗೂ ಜವಾಬ್ದಾರಿ ನೀಡುವುದಾಗಿ ಹೈಕಮಾಂಡ್ ನಾಯಕರು ಹೇಳಿದ್ದಾಗಿ ತಿಳಿಸಿದರು.
ಯಾವುದೇ ಅವಕಾಶ ನೀಡಿದರೂ ಅದನ್ನು ಜವಾಬ್ದಾರಿಯಿಂದ ನಿರ್ವಹಿಸುತ್ತೇವೆ. ಪಕ್ಷದ ಹೈಕಮಾಂಡ್ ಏನು ಹೇಳುತ್ತದೆಯೋ ಅದನ್ನು ಮಾಡುತ್ತೇವೆ. ಸುರ್ಜೆವಾಲ ಅವರೊಂದಿಗೆ ಉತ್ತಮ ಚರ್ಚೆ ನಡೆದಿದೆ. ಅಧಿಕಾರ ಅಥವಾ ಜವಾಬ್ದಾರಿ ನೀಡುವ ವಿಚಾರ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗೆ ಬಿಟ್ಟದ್ದು ಎಂದು ಕೋನರೆಡ್ಡಿ ಹೇಳಿದರು.
