ಕೀವ್: ಉಕ್ರೇನ್‌ನ (Ukraine) ಕೀವ್‌ನಲ್ಲಿರುವ (Kyiv) ಸೂಪರ್‌ಮಾರ್ಕೆಟ್‌ನಲ್ಲಿ ಬಂದೂಕುಧಾರಿ ನಡೆಸಿದ ಗುಂಡಿನ ದಾಳಿಗೆ ಆರು ಮಂದಿ ಬಲಿಯಾಗಿರುವ ಘಟನೆ ನಡೆದಿದೆ.
ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾತನಾಡಿ, ರಾಜಧಾನಿಯ ವಸತಿ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಕನಿಷ್ಠ ಐದು ಜನರು ಸಾವನ್ನಪ್ಪಿದ್ದಾರೆ. 10 ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ 2 ತೈಲ ಟ್ಯಾಂಕರ್ ಮೇಲೆ ಗುಂಡಿನ ದಾಳಿ – ಇರಾನ್ ರಾಯಭಾರಿಗೆ ಭಾರತ ಸಮನ್ಸ್
ಕೀವ್‌ನಲ್ಲಿ ನಾಗರಿಕರ ಮೇಲೆ ಗುಂಡು ಹಾರಿಸಿದ ದಾಳಿಕೋರನನ್ನು ಹೊಡೆದುರುಳಿಸಲಾಗಿದೆ ಎಂದು ಝೆಲೆನ್ಸ್ಕಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಇದೇ ವೇಳೆ, ಮೃತರ ಕುಟುಂಬಗಳಿಗೆ ಮತ್ತು ಪ್ರೀತಿ ಪಾತ್ರರಿಗೆ ಸಾಂತ್ವನ ಹೇಳಿದ್ದಾರೆ.
ನಗರದ ದಕ್ಷಿಣದಲ್ಲಿರುವ ಹೊಲೊಸಿವ್ಸ್ಕಿ ಜಿಲ್ಲೆಯಲ್ಲಿ ಘಟನಾ ಸ್ಥಳಕ್ಕೆ ತನ್ನ ವಿಶೇಷ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಉಕ್ರೇನ್ ಪೊಲೀಸರು ತಿಳಿಸಿದ್ದಾರೆ. ದಾಳಿಕೋರನ ಉದ್ದೇಶ ತಿಳಿದುಬಂದಿಲ್ಲ. ಈ ಬಗ್ಗೆ ತ್ವರಿತ ತನಿಖೆ ನಡೆಸುವಂತೆ ಝೆಲೆನ್ಸ್ಕಿ ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಭಾರತದ ಎರಡು ತೈಲ ಟ್ಯಾಂಕರ್ ಮೇಲೆ ಇರಾನ್ ಗುಂಡಿನ ದಾಳಿ

