ಚಿಕ್ಕೋಡಿ(ಬೆಳಗಾವಿ): ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಒಂದೇ ಕುಟುಂಬದ 6 ಜನ ದಾರುಣವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಸಮೀಪದ ಸ್ಥವನಿಧಿಯ ಬಳಿಯ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದಿದೆ.
ಲಾರಿ ಹಾಗೂ ಮಾರುತಿ ವ್ಯಾಗನಾರ್ ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಪರಿಣಾಮ ವಾಹನದಲ್ಲಿದ್ದ ಒಂದೇ ಕುಟುಂಬದ 6 ಜನ ಸಾವನ್ನಪ್ಪಿದ್ದಾರೆ. ಮೃತರನ್ನು ದಿಲಾವರಖಾನ ಬಾಪೂಸಾಹೇಬ ಜಮಾದಾರ (60), ಜುನೇದಖಾನ ದಿಲಾವರ ಜಮಾದಾರ (30), ಅಯಾನ್ ಮೋಶಿನ್ ಜಮಾದಾರ (4), ರಿಹಾನಾ ದಿಲಾವರ ಜಮಾದಾರ (55), ಅಫ್ರೀನ್ ಮೊಶೀನ ಜಮಾದಾರ (34), ಮೋಶಿನ್ ದಿಲಾವರ ಜಮಾದಾರ (30) ಎಂದು ಗುರುತಿಸಲಾಗಿದೆ.
Advertisement
Advertisement
ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಮುರಗೋಡ ಗ್ರಾಮದಿಂದ ಬೆಳಗಾವಿಗೆ ಸಂಬಂಧಿಕರ ಮಗುವಿನ ನಾಮಕರಣಕ್ಕೆ ಕುಟುಂಬಸ್ಥರು ತೆರಳುತ್ತಿದ್ದರು. ಬೆಳಗಾವಿಯಿಂದ ಗ್ರಾನೈಟ್ ತುಂಬಿದ್ದ ಲಾರಿ ಕೊಲ್ಲಾಪುರಕ್ಕೆ ತೆರಳುತ್ತಿರುವಾಗ ಸ್ಥವನಿಧಿ ಘಾಟ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಮತ್ತೊಂದು ಬದಿಯಲ್ಲಿ ಎದುರಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ.
Advertisement
ಡಿಕ್ಕಿಯ ರಭಸಕ್ಕೆ ಸುಮಾರು 500 ಅಡಿ ಅಷ್ಟು ದೂರ ಕಾರ್ ಹಾರಿ ಬಿದ್ದಿದ್ದು, ಕಾರಿನಲ್ಲಿದ್ದ ಎಲ್ಲರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ ಲಾರಿ ಚಾಲಕ ಹಾಗೂ ಕ್ಲೀನರ್ ಕೂಡ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನು ಚಿಕಿತ್ಸೆಗಾಗಿ ಕೊಲ್ಲಾಪುರ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಇಬ್ಬರು ತಮಿಳುನಾಡು ಮೂಲದವರು ಎಂಬ ಮಾಹಿತಿ ಲಭಿಸಿದೆ.
Advertisement
ಸ್ಥಳಕ್ಕೆ ನಿಪ್ಪಾಣಿ ಪೊಲೀಸರು ಹಾಗೂ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರ ಕುಮಾರ್ ರೆಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಹಾಗೂ 108 ಸಿಬ್ಬಂದಿ ಭೇಟಿ ನೀಡಿ ಕಾರಿನಲ್ಲಿ ಸಿಲುಕಿರುವ ಶವ ತೆಗೆಯುವ ಕಾರ್ಯ ನಡೆಸಿದ್ದಾರೆ. ಅಪಘಾತದ ರಭಸಕ್ಕೆ ಶವಗಳು ಗುರುತು ಸಿಗಲಾರದ ಸ್ಥಿತಿ ತಲುಪಿದ್ದು, ನಿಪ್ಪಾಣಿ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv