ಮಡಿಕೇರಿ: ಭಾಗಮಂಡಲದ (Bhagamandala) ಮೇಲ್ಸೇತುವೆ ಹಾಗೂ ಸುತ್ತಮುತ್ತಲಿನ ಪ್ರದೇಶದ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದೆ.
ದಕ್ಷಿಣ ಭಾರತದ ಜೀವನದಿ ಎಂದೇ ಕರೆಯಲ್ಪಡುವ ಕಾವೇರಿ ನದಿಯ ತಟದಲ್ಲಿರುವ ಭಾಗಮಂಡಲದ ಮೇಲ್ಸೇತುವೆ ಹಾಗೂ ಸುತ್ತಮುತ್ತಲಿನ ಅಭಿವೃದ್ಧಿಗೆ ಕಾವೇರಿ ನೀರಾವರಿ ನಿಗಮದಿಂದ 3 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ.
ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರ ಮನವಿಯ ಮೇರೆಗೆ ಈ ಅನುದಾನ ಮಂಜೂರಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈಗಾಗಲೇ ಕಾಮಗಾರಿಗೆ ಕಾರ್ಯಾದೇಶವೂ ನೀಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ಮಾಹಿತಿ ನೀಡಿದೆ.
ಈ ಯೋಜನೆಯಡಿ ಮೇಲ್ಸೇತುವೆ ಆವರಣದ ಅಭಿವೃದ್ಧಿ, ನೀರು ಹರಿಯುವ ಪೈಪ್‌ಗಳ ದುರಸ್ತಿ, ಸೇತುವೆಯ ಕೆಳಭಾಗದಲ್ಲಿ ಕಾಂಕ್ರೀಟ್ ಕಾಮಗಾರಿ, ಕನ್ನಿಕೆ ನದಿಗೆ ಪಾದಚಾರಿ ಸೇತುವೆ ಹಾಗೂ ಕಾವೇರಿ ನದಿಗೆ ಪಾದಚಾರಿ ಸೇತುವೆ ನಿರ್ಮಾಣ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿಗಳು ನಡೆಯಲಿವೆ.ಇದನ್ನೂ ಓದಿ: ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ – ಜೀವ ಪಣಕ್ಕಿಟ್ಟು ಸೆಲ್ಫಿ, ಈಜಾಟ
ಬೆಂಗಳೂರಿನ ಪ್ರಥಮ ದರ್ಜೆ ಗುತ್ತಿಗೆದಾರ ಕೆ. ರೋಹಿತ್ ಕಾಮಗಾರಿ ಗುತ್ತಿಗೆ ಪಡೆದಿದ್ದು, ಅಕ್ಟೋಬರ್ ಅಂತ್ಯದೊಳಗೆ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿ ಹಸ್ತಾಂತರಿಸಬೇಕು ಎಂದು ನಿಗಮ ಸೂಚಿಸಿದೆ.ಇದನ್ನೂ ಓದಿ: ಪ್ರವಾಸಕ್ಕೆ ತೆರಳಿದ್ದ ವೇಳೆ ಕಾಲು ಜಾರಿ ಪುರಾತನ ಬಾವಿಗೆ ಬಿದ್ದು ಬಾಲಕ ಸಾವು
