ಯಾದಗಿರಿ: ಸಾಮಾನ್ಯವಾಗಿ ಸಣ್ಣ ಪುಟ್ಟ ಅಂಗಡಿಗಳಲ್ಲಿ 1-2 ಮೂಟೆ ಅಕ್ಕಿ (Rice) ಕದಿಯುವುದನ್ನು, ಐಷಾರಾಮಿ ಜೀವನ ನಡೆಸಲು ಹಣ ಕದಿಯೋದನ್ನು ನಾವು ಕೇಳಿರುತ್ತೇವೆ. ಆದರೆ ಬಡವರ ಹೊಟ್ಟೆ ತುಂಬಿಸುವ ಸಲುವಾಗಿ ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡಲು ಸಾಗಾಟ ಮಾಡುತ್ತಿದ್ದ ಅಕ್ಕಿ ತುಂಬಿದ ಲಾರಿಯನ್ನೇ ಕಳ್ಳತನ ಮಾಡಿರುವ ವಿಚಿತ್ರ ಘಟನೆ ಯಾದರಿಗಿಯಲ್ಲಿ (Yadagiri) ನಡೆದಿದೆ.
ಬಡವರ ಹಸಿವು ನೀಗಿಸುವ ಸಲುವಾಗಿ ಸರ್ಕಾರ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು ಪ್ರತಿ ಕಾರ್ಡುದಾರ ಕುಟುಂಬಕ್ಕೆ ಐದೈದು ಕೆಜಿ ಅಕ್ಕಿಯನ್ನು ನೀಡುತ್ತಿದೆ. ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಅಧಿಕೃತ ಪರವಾನಗಿ ಪಡೆದಿರುವ ವಾಹನಗಳ ಮೂಲಕ ಅಕ್ಕಿಯನ್ನು ಸಾಗಾಟ ಮಾಡಲಾಗುತ್ತದೆ. ಆದರೆ ನಿಯಮಗಳನ್ನು ಮೀರಿರುವ ಯಾದಗಿರಿಯ ಆಹಾರ ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ 420 ಮೂಟೆಯ ಬರೋಬ್ಬರಿ 20 ಟನ್ ಪಡಿತರ ಅಕ್ಕಿ (Ration Rice) ಲಾರಿ (Lorry) ಮೇತವಾಗಿ ಕಳ್ಳತನ ಆಗಿದೆ.
Advertisement
Advertisement
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ವಿವಿಧ ಗ್ರಾಮಗಳ ಪಡಿತರ ಕೇಂದ್ರಗಳಿಗೆ ವಿತರಿಸಲು ಲಾರಿಯಲ್ಲಿ ಅನ್ನಭಾಗ್ಯದ ಅಕ್ಕಿಯನ್ನು ತುಂಬಿಕೊಂಡು ಹೋಗಲಾಗಿತ್ತು. ಅಕ್ಕಿ ತುಂಬಿದ್ದ ಲಾರಿಯನ್ನು ಶಹಾಪುರದ ನಗರದ ಎಪಿಎಂಸಿ ಬಳಿ ನಿಲ್ಲಿಸಿದ್ದಾಗ ಲಾರಿ ಸಮೇತ ಅಕ್ಕಿಯನ್ನು ಕಳವು ಮಾಡಲಾಗಿದೆ. ಎಪಿಎಂಸಿಯಲ್ಲಿ ಅನ್ನಭಾಗ್ಯ ಅಕ್ಕಿ ಸರಬರಾಜು ಮಾಡುವ 4 ಲಾರಿಗಳನ್ನು ನಿಲ್ಲಿಸಲಾಗಿತ್ತು. ಅದರಲ್ಲಿ ಒಂದು ಲಾರಿಯಲ್ಲಿ 420 ಮೂಟೆಯ 20 ಟನ್ ಅಕ್ಕಿ ಇತ್ತು.
Advertisement
ಚಾಲಕ ಕೀಯನ್ನು ಲಾರಿಯಲ್ಲೇ ಬಿಟ್ಟಿದ್ದ. ಮಾತ್ರವಲ್ಲದೇ ತಾನು ರಾತ್ರಿ ಲಾರಿಯಲ್ಲಿ ಮಲಗುವುದನ್ನು ಬಿಟ್ಟು ತನ್ನ ಸ್ವಗ್ರಾಮ ಸುರಪುರಕ್ಕೆ ಹೋಗಿದ್ದ. ಊರಿನಿಂದ ಬೆಳಗ್ಗೆ ವಾಪಸ್ ಬಂದು ನೋಡಿದರೆ ನಿಲ್ಲಿಸಿದ್ದ ಜಾಗದಲ್ಲಿ ಲಾರಿಯೇ ಇರಲಿಲ್ಲ. ಎಪಿಎಂಸಿ ಸೇರಿ ಇಡೀ ಪಟ್ಟಣದಲ್ಲಿ ಲಾರಿ ಹುಡುಕಿದರೂ ಎಲ್ಲಿಯೂ ಸಿಗಲಿಲ್ಲ. ಇದರಲ್ಲಿ ಗುತ್ತಿಗೆದಾರನ ನಿರ್ಲಕ್ಷ್ಯ ಇರುವುದರಿಂದ ಕಠಿಣ ಕ್ರಮ ಕೈಗೊಳ್ಳಲಾಗುವುದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಈಗಾಗಲೇ ಘಟನೆ ಸಂಬಂಧ ಶಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆದರೆ ಪಡಿತರ ಅಕ್ಕಿ ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿಪಿಎಸ್ ಇರಬೇಕಿದ್ದರೂ ಇಲ್ಲಿ ಅದು ಸಂಪೂರ್ಣ ಉಲ್ಲಂಘನೆಯಾಗಿದೆ. ಜಿಪಿಎಸ್ (GPS) ಇಲ್ಲದ ವಾಹನದಲ್ಲಿ ಅಕ್ಕಿ ಸಾಗಾಟಕ್ಕೆ ಅಧಿಕಾರಿಗಳು ಹೇಗೆ ಅವಕಾಶ ಮಾಡಿಕೊಟ್ಟರು ಎನ್ನುವ ಸಂಶಯ ವ್ಯಕ್ತವಾಗಿದೆ. ಇದನ್ನೂ ಓದಿ: ತುಂಗಾನದಿಗೆ ಅಲ್ಯುಮಿನಿಯಂ ಅಂಶ ಸೇರ್ಪಡೆ – ಪ್ರಯೋಗಾಲಯದಿಂದ ನೀರಿನ ವರದಿ ಬಹಿರಂಗ
ಇಲ್ಲಿ ಗುತ್ತಿಗೆದಾರನ ತಪ್ಪು ಎಷ್ಟಿದೆಯೋ ಅಷ್ಟೇ ಅಧಿಕಾರಿಗಳ ನಿರ್ಲಕ್ಷ್ಯವೂ ಇದೆ. ಹೀಗಾಗಿ 2 ದಿನಗಳಿಂದ ವಾಹನ ಹುಡುಕಾಟ ಮಾಡುತ್ತಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಸಿಗುತ್ತಿಲ್ಲ. ಸಿಪಿಐ ಚೆನ್ನಯ್ಯ ಹಿರೇಮಠ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚನೆ ಮಾಡಿ ಲಾರಿಯನ್ನು ಹುಡುಕಲು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸ್ ತನಿಖೆಯೂ ಚುರುಕುಗೊಂಡಿದೆ. ಮಾತ್ರವಲ್ಲದೇ ನಗರದ ಎಲ್ಲ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಮಾಡಲಾಗುತ್ತಿದೆ.
ಅಧಿಕಾರಿಗಳು ಮಾಡೋ ಕೆಲಸ ಸರಿಯಾಗಿ ಮಾಡಿದರೆ ಯಾವುದೇ ಎಡವಟ್ಟು ಆಗುವುದಿಲ್ಲ ಎನ್ನುವುದಕ್ಕೆ ಯಾದಗಿರಿಯಲ್ಲಿ ನಡೆದಿರುವ ಈ ಪ್ರಕರಣ ಸಾಕ್ಷಿ. ಹೀಗಾಗಿ ಇಲಾಖೆ ಕೂಡಲೆ ಎಚ್ಚೆತ್ತುಕೊಂಡು ತಪ್ಪಿತಸ್ಥ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕಿದೆ. ಅಲ್ಲದೇ ಇಲಾಖೆಗೆ ಆಗಿರುವ ನಷ್ಟ ಭರಿಸುವ ಜೊತೆಗೆ ಮತ್ತೊಮ್ಮೆ ಈ ರೀತಿಯ ಅವಾಂತರ ಆಗದಂತೆ ಕ್ರಮ ಕೈಗೊಳ್ಳಬೇಕಿದೆ. ಇದನ್ನೂ ಓದಿ: ಪಿಎಫ್‌ಐ ನಿಷೇಧಕ್ಕೆ ಪ್ರತೀಕಾರ – ವಿಧ್ವಂಸಕ ಕೃತ್ಯಕ್ಕೆ ದಕ್ಷಿಣ ಕನ್ನಡ, ಶಿವಮೊಗ್ಗದಲ್ಲಿ ಪ್ಲ್ಯಾನ್