ಬಾಗಲಕೋಟೆ: ಎದುರಿನ ಮನೆಯ ನೀರಿನ ಸಂಪ್‌ನಲ್ಲಿ(Sump)ಮುಳುಗಿ 18 ತಿಂಗಳ ಹೆಣ್ಣು ಮಗುವೊಂದು ದುರಂತವಾಗಿ ಸಾವನ್ನಪ್ಪಿರುವ ಘಟನೆ ಬಾಗಲಕೋಟೆಯ (Bagalkote) ನವನಗರದ ಸೆಕ್ಟರ್ ನಂಬರ್ 38 ರಲ್ಲಿ ನಡೆದಿದೆ.
ಮೃತಪಟ್ಟ ಮಗುವನ್ನು ಅಮೀನಾ ಪಟಾಣ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಗು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದರೂ, “ನೀರಿನಲ್ಲಿ ಮುಳುಗಿದವರನ್ನು ಉಪ್ಪಿನಲ್ಲಿ ಮುಳುಗಿಸಿಟ್ಟರೆ ಮರಳಿ ಬದುಕುತ್ತಾರೆ” ಎಂಬ ತಪ್ಪು ನಂಬಿಕೆಯಿಂದ ಪೋಷಕರು ಮಗುವನ್ನು ಬದುಕಿಸಿಕೊಳ್ಳಲು ವಿಶಿಷ್ಟ ಪ್ರಯತ್ನ ನಡೆಸಿದ್ದಾರೆ.
ಬಾಗಲಕೋಟೆ ಜಿಲ್ಲಾಸ್ಪತ್ರೆಯ ಶವಾಗಾರದ ಮುಂಭಾಗದಲ್ಲೇ ಮಗುವಿನ ಮುಖವನ್ನು ಮಾತ್ರ ಹೊರಗಿಟ್ಟು, ಇಡೀ ದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಡಲಾಗಿತ್ತು. ಇದರೊಂದಿಗೆ ಮಗುವಿನ ಕಿವಿಯ ಬಳಿ ಮೊಬೈಲ್‌ನಲ್ಲಿ ಕುರಾನ್ ಪಠಣವನ್ನು ಹಾಕಿ, ಮಗು ಹೇಗಾದರೂ ಮಾಡಿ ಬದುಕಲಿ ಎಂದು ಪೋಷಕರು ಹಾಗೂ ಕುಟುಂಬಸ್ಥರು ಪ್ರಾರ್ಥಿಸುತ್ತಾ ಕಣ್ಣೀರಿಟ್ಟ ದೃಶ್ಯ ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು.
ಸತತ ಎರಡು ಗಂಟೆಗಳಿಗೂ ಅಧಿಕ ಕಾಲ ಮಗುವಿನ ದೇಹವನ್ನು ಉಪ್ಪಿನಲ್ಲಿ ಮುಳುಗಿಸಿ ಇಡಲಾಗಿತ್ತು. ನಂತರ ಸ್ಥಳದಲ್ಲಿದ್ದ ವೈದ್ಯರು ಪೋಷಕರಿಗೆ ಸೂಕ್ತ ತಿಳಿವಳಿಕೆ ಮತ್ತು ಸಲಹೆ ನೀಡಿದ್ದಾರೆ
ಅಂತಿಮವಾಗಿ ಮಗುವನ್ನು ಉಪ್ಪಿನಿಂದ ಹೊರಗೆ ತೆಗೆದರು. ಬಳಿಕ ಅಲ್ಲಿದ್ದ ಉಪ್ಪನ್ನು ಹೊರಗೆ ಎಸೆದು, ಮಗುವಿನ ಮರಣೋತ್ತರ ಪರೀಕ್ಷೆಗೆ (Post-mortem) ಸಮ್ಮತಿಸಿದರು. ಸದ್ಯ ಮಗುವಿನ ಶವವನ್ನು ಜಿಲ್ಲಾ ಆಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೊಠಡಿಗೆ ರವಾನಿಸಲಾಗಿದೆ.
