ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ(Satish Jarkiholi) ಅವರ ಸರ್ಕಾರಿ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ ಒಟ್ಟು 15 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ಇಂದು ಬೆಳಿಗ್ಗೆ ಏಕಕಾಲಕ್ಕೆ ದಾಳಿ ನಡೆಸಿದ್ದಾರೆ. ಬೆಂಗಳೂರು, ಬೆಳಗಾವಿ, ಗೋವಾ ಹಾಗೂ ಮಹಾರಾಷ್ಟ್ರದ ಹಲವೆಡೆ 25ಕ್ಕೂ ಹೆಚ್ಚು ಅಧಿಕಾರಿಗಳ ತಂಡವು ಕೇಂದ್ರ ಸಶಸ್ತ್ರ ಮೀಸಲು ಪಡೆಯ (CRPF) ಭದ್ರತೆಯೊಂದಿಗೆ ಪರಿಶೀಲನೆ ಮುಂದುವರಿಸಿದೆ.
ಬೆಳಿಗ್ಗೆ ಸುಮಾರು 7 ಗಂಟೆಗೆ ಎರಡು ಇನ್ನೋವಾ ಸೇರಿದಂತೆ ಒಟ್ಟು 18 ವಾಹನಗಳಲ್ಲಿ ಆಗಮಿಸಿದ ಇಡಿ ಅಧಿಕಾರಿಗಳು ಬೆಂಗಳೂರಿನ(Bengaluru) 6 ಕಡೆಗಳಲ್ಲಿ ಶೋಧ ಆರಂಭಿಸಿದ್ದಾರೆ. ದಾಳಿಯ ವೇಳೆ ಸಚಿವ ಸತೀಶ್ ಜಾರಕಿಹೊಳಿ ಅವರು ತಮ್ಮ ಅಧಿಕೃತ ಸರ್ಕಾರಿ ನಿವಾಸದಲ್ಲೇ ಇದ್ದು, ಅವರ ಸಮ್ಮುಖದಲ್ಲೇ ಮಹತ್ವದ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ದಾಳಿಗೆ ಏನು ಕಾರಣ?
ಕಳೆದ ಜೂನ್ ತಿಂಗಳಲ್ಲಿ ಸತೀಶ್ ಜಾರಕಿಹೊಳಿ ಅವರ ಬಾಮೈದ, ಅಬಕಾರಿ ಹೆಚ್ಚುವರಿ ಆಯುಕ್ತ ಮಂಜುನಾಥ್, ಉಪ ಆಯುಕ್ತ ಜಗದೀಶ್ ನಾಯಕ್ ಹಾಗೂ ಅಧೀಕ್ಷಕ ತಮ್ಮಣ್ಣ ಅವರಿಗೆ ಸೇರಿದ ಬೆಂಗಳೂರು, ಮೈಸೂರು, ಬೆಳಗಾವಿಯ 14 ಕಡೆಗಳಲ್ಲಿ ಇಡಿ ದಾಳಿ ನಡೆಸಿತ್ತು. ಆ ವೇಳೆ 5 ಕೋಟಿ ರೂ. ನಗದು, ಚಿನ್ನಾಭರಣ, ವಿದೇಶಿ ಕರೆನ್ಸಿ ಸೇರಿದಂತೆ 13 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು. ಮದ್ಯದಂಗಡಿ ಮತ್ತು ಬಾರ್‌ಗಳಿಂದ ಮಾಸಿಕ ಲಂಚ ವಸೂಲಿ, ಹೊಸ ಲೈಸೆನ್ಸ್, ನವೀಕರಣ ಹಾಗೂ ವರ್ಗಾವಣೆಗೆ ಭಾರಿ ಲಂಚ ಪಡೆದು ಬೇನಾಮಿ ಆಸ್ತಿ ಸೃಷ್ಟಿಸಿರುವ ವಿವರಗಳಿದ್ದ ರಹಸ್ಯ ಡೈರಿಯೂ ಸಿಕ್ಕಿತ್ತು.
ಆರೋಪ ಏನು?
ಸಚಿವರಾಗಿದ್ದ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಮಾಡಿಕೊಂಡು 18 ಅನಧಿಕೃತ ಬಾರ್ ಲೈಸೆನ್ಸ್ ಕೊಡಿಸಲು ಸಹಾಯ ಮಾಡಿರುವ ಆರೋಪ ಕೇಳಿ ಬಂದಿದೆ. ಬಾರ್ ಲೈಸೆನ್ಸ್ ಹಂಚಿಕೆ ಮೂಲಕ ಬಂದ 178 ಕೋಟಿ ರೂ. ಹಣವನ್ನು ಅಕ್ರಮವಾಗಿ ವರ್ಗಾವಣೆ (Money Laundering) ಮಾಡಿದ್ದಾರೆ ಎನ್ನಲಾಗಿದೆ. ಅಕ್ರಮವಾಗಿ ಸಂಪಾದಿಸಿದ ಹಣವನ್ನು ವಿದೇಶಗಳಲ್ಲಿ ಹೂಡಿಕೆ ಮಾಡಲು ಸಚಿವರು ನೆರವು ನೀಡಿದ್ದಾರೆ ಎನ್ನಲಾಗಿದ್ದು, ಈ ಹಿಂದೆ 3 ಕೋಟಿ ರೂ. ವಿದೇಶಿ ಹಣ ಪತ್ತೆಯಾಗಿತ್ತು.
PMLA ಹಾಗೂ FEMA ಕಾಯ್ದೆಯಡಿ ಪ್ರಕರಣ
ಕೇವಲ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಷ್ಟೇ ಅಲ್ಲದೆ, ವಿದೇಶಗಳಲ್ಲಿ ಅಕ್ರಮ ಆಸ್ತಿ ಮತ್ತು ಹೂಡಿಕೆ ಹೊಂದಿರುವ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಸತೀಶ್ ಜಾರಕಿಹೊಳಿ ಮೇಲೆ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (FEMA) ಅಡಿಯಲ್ಲೂ ಪ್ರಕರಣ ದಾಖಲಿಸಿಕೊಂಡು ಇಡಿ ತನಿಖೆ ಚುರುಕುಗೊಳಿಸಿದೆ. ಸಚಿವರ ಡಾಲರ್ಸ್ ಕಾಲೋನಿಯ ಮನೆ ಹಾಗೂ ಕೆಕೆ ಗೆಸ್ಟ್ ಹೌಸ್ ಸೇರಿದಂತೆ ಹಲವೆಡೆ ಶೋಧ ಮುಂದುವರಿದಿದೆ.
ಮನಿ ಲಾಂಡ್ರಿಂಗ್ (Money Laundering)
ಅಕ್ರಮವಾಗಿ ಅಥವಾ ತಪ್ಪು ದಾರಿಯಲ್ಲಿ ಗಳಿಸಿದ ಕಪ್ಪು ಹಣವನ್ನು ಕಾನೂನುಬದ್ಧವಾಗಿ ಗಳಿಸಿದ ಹಣದಂತೆ ಬದಲಾಯಿಸುವ ಕಳ್ಳಾಟವೇ ಮನಿ ಲಾಂಡ್ರಿಂಗ್. ಇದು ಒಂದು ಆರ್ಥಿಕ ಅಪರಾಧವಾಗಿದೆ. ಮಾದಕ ದ್ರವ್ಯ ಮಾರಾಟ, ಭ್ರಷ್ಟಾಚಾರ, ಅಥವಾ ವಂಚನೆಯಿಂದ ಬಂದ ಹಣದ ಮೂಲವನ್ನು ಮರೆಮಾಚಲು ಬ್ಯಾಂಕ್ ವರ್ಗಾವಣೆ ಅಥವಾ ಬೇರೆ ವ್ಯವಹಾರಗಳ ಮೂಲಕ ಹಣವನ್ನು ತಿರುಗಿಸುವುದೇ ಮನಿ ಲಾಂಡ್ರಿಂಗ್.
ಪಿಎಂಎಲ್‌ಎ
ಇದು ಭಾರತ ಸರ್ಕಾರ 2002 ರಲ್ಲಿ ಜಾರಿಗೆ ತಂದ ಒಂದು ಕಠಿಣ ಕಾನೂನು. ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ(PMLA – Prevention of Money Laundering Act) ಇದು ಮನಿ ಲಾಂಡ್ರಿಂಗ್ ಅಪರಾಧವನ್ನು ಪತ್ತೆಹಚ್ಚಲು, ತಡೆಯಲು ಮತ್ತು ಅದರಲ್ಲಿ ತೊಡಗಿರುವವರಿಗೆ ಶಿಕ್ಷೆ ನೀಡಲು ಸರ್ಕಾರಕ್ಕೆ ಅಧಿಕಾರ ನೀಡುವ ಕಾನೂನು ಚೌಕಟ್ಟಾಗಿದೆ.
ಈ ಕಾನೂನಿನ ಅಡಿಯಲ್ಲಿ ಜಾರಿ ನಿರ್ದೇಶನಾಲಯಕ್ಕೆ (ED) ಅಕ್ರಮ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲು, ಆಸ್ತಿಯನ್ನು ಜಪ್ತಿ ಮಾಡಲು ಮತ್ತು ಆರೋಪಿಗಳನ್ನು ಬಂಧಿಸಲು ಅಧಿಕಾರ ಸಿಗುತ್ತದೆ.
