ನೇಪಿಡಾವ್: ಮ್ಯಾನ್ಮಾರ್‌ನ ಕೇಂದ್ರ ಭಾಗದಲ್ಲಿರುವ ಸಾಗೈಂಗ್ ಪ್ರದೇಶದ ಬೌದ್ಧ ವಿಹಾರದ (Buddhist Monastery) ಮೇಲೆ ಶುಕ್ರವಾರ (ಇಂದು) ಸೇನಾ ಪಡೆಗಳು ನಡೆಸಿದ ವಾಯುದಾಳಿಯಲ್ಲಿ (Airstrike), 14 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ಸಂಘರ್ಷಪೀಡಿತ ಮ್ಯಾನ್ಮಾರ್‌ನಲ್ಲಿ (Myanmar) ವಾಯುದಾಳಿಗಳಿಂದ ನಾಗರಿಕರ ಸಾವುನೋವು ಹೆಚ್ಚುತ್ತಿರುವ ನಡುವೆಯೇ ಈ ಘಟನೆ ನಡೆದಿದೆ.
🚨 #BreakingNews: A Myanmar Air Force airstrike targeted a monastery hosting a Buddhist meditation retreat and flood evacuees in Myaung Township, Sagaing Region, resulting in the deaths of at least 14 civilians—primarily elderly meditators—and injuring over 20 others.#Myanmar… pic.twitter.com/2xK9yHLNA1
— X-K (@ConflictRadarME) August 21, 2026
ವಾರಾಂತ್ಯದ ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದ 14 ಮಂದಿ ದುರ್ಮರಣಕ್ಕೀಡಾಗಿದ್ದಾರೆ ಎಂದು ವಿರೋಧ ಪಕ್ಷದ ಸಂಘಟನೆ ಹಾಗೂ ಸ್ಥಳೀಯ ನಿವಾಸಿಯೊಬ್ಬರು ತಿಳಿಸಿದ್ದಾರೆ.
ಸ್ಥಳೀಯ ಕಾಲಮಾನ ಪ್ರಕಾರ ಶುಕ್ರವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ಮ್ಯಾನ್ಮಾರ್‌ನ 2ನೇ ಅತಿದೊಡ್ಡ ನಗರವಾದ ಮಂಡಲೆಯಿಂದ ಸುಮಾರು 75 ಕಿಲೋಮೀಟರ್ ಪಶ್ಚಿಮದಲ್ಲಿರುವ ಮ್ಯಾಔಂಗ್ ಟೌನ್‌ಶಿಪ್‌ನ ಸ್ವೆಲ್ ಲೆ ಓ ಗ್ರಾಮದಲ್ಲಿ ಈ ದಾಳಿ ನಡೆದಿದೆ. ಮ್ಯಾಔಂಗ್ ಟೌನ್‌ಶಿಪ್‌ನ ಸಿವಿಲ್ ಡಿಫೆನ್ಸ್ ಆ್ಯಂಡ್ ಸೆಕ್ಯುರಿಟಿ ಆರ್ಗನೈಸೇಶನ್ (CDSOM)ನ ವಕ್ತಾರ ನ್ವೇ ಓ ಈ ಮಾಹಿತಿಯನ್ನು ತಿಳಿಸಿದ್ದಾರೆ.
ನ್ವೇ ಓ ಅವರ ಪ್ರಕಾರ, ಜನರು ಧ್ಯಾನ ಶಿಬಿರದಲ್ಲಿ ಪಾಲ್ಗೊಂಡಿದ್ದ ವೇಳೆ ಯುದ್ಧವಿಮಾನವೊಂದು ಗ್ರಾಮದ ಬೌದ್ಧ ವಿಹಾರದ ಆವರಣದೊಳಗೆ ಪ್ರವೇಶಿಸಿ ಬಾಂಬ್ ಹಾಕಿದೆ. ದಾಳಿಯಲ್ಲಿ ಮೂರು ಮಹಿಳೆಯರು ಸೇರಿದಂತೆ ಒಟ್ಟು 14 ಮಂದಿ ಮೃತಪಟ್ಟಿದ್ದು, 20 ಮಂದಿ ಗಾಯಗೊಂಡಿದ್ದಾರೆ.
ವಾರದ ಅವಧಿಯ ಧ್ಯಾನ ಶಿಬಿರಕ್ಕಾಗಿ ಈ ಬೌದ್ಧ ವಿಹಾರದಲ್ಲಿ ಹಲವರು ಸೇರಿದ್ದರು. ಆದರೆ ವಾಯುದಾಳಿಯ ಪರಿಣಾಮ ಶಾಂತಿಯುತವಾಗಿ ನಡೆಯುತ್ತಿದ್ದ ಧ್ಯಾನ ಶಿಬಿರವು ಕ್ಷಣಾರ್ಧದಲ್ಲಿ ದುರಂತದ ಸ್ಥಳವಾಗಿ ಮಾರ್ಪಟ್ಟಿದೆ.
ಮೃತರ ಗುರುತು ಹಾಗೂ ಗಾಯಗೊಂಡವರ ಪ್ರಸ್ತುತ ಆರೋಗ್ಯ ಸ್ಥಿತಿಯ ಕುರಿತು ತಕ್ಷಣಕ್ಕೆ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

