ಶಿವಮೊಗ್ಗ: ಕಾಡುಪ್ರಾಣಿಗಳ ಕಾಟ ತಪ್ಪಿಸಿಕೊಳ್ಳಲು ಗದ್ದೆಗೆ ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿ ತುಳಿದು 13 ವರ್ಷದ ಕಾಡಾನೆ (Elephant) ಸಾವನ್ನಪ್ಪಿದ ಘಟನೆ ಗಾಜನೂರು ಸಮೀಪದ ಈಚಲವಾಡಿ ಗ್ರಾಮದಲ್ಲಿ ನಡೆದಿದೆ.
ಶಂಕರ ವಲಯ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ದುರಂತ ಸಂಭವಿಸಿದೆ. ಕಾಡಿನಿಂದ ಆಹಾರ ಅರಸಿ ಗ್ರಾಮಕ್ಕೆ ಕಾಡಾನೆ ಬಂದಿತ್ತು. ಈ ವೇಳೆ ಫಸಲಿಗೆ ಬಂದಿದ್ದ ಗದ್ದೆಯನ್ನು ರಕ್ಷಿಸಲು ಅಕ್ರಮವಾಗಿ ಎಳೆದಿದ್ದ ವಿದ್ಯುತ್ ತಂತಿ ತುಳಿದು ಆನೆ ಸಾವನ್ನಪ್ಪಿದೆ. ಕಾಡಾನೆ ಮೃತಪಟ್ಟಿರುವ ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ (Forest Department) ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದನ್ನೂ ಓದಿ: ಬೆಟ್ಟದಿಂದ ಉರುಳಿ ಬಿದ್ದು ಆನೆ ಮರಿ ಸಾವು – ತಾಯಿ ಆನೆ ಗೋಳಾಟದ ಸಿಸಿಟಿವಿ ವೀಡಿಯೋ ವೈರಲ್
ಜಮೀನಿನ ಮಾಲೀಕ ಸಯ್ಯದ್ ಆಲಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಈ ಬಗ್ಗೆ ಜಮೀನು ಮಾಲೀಕ ಅಧಿಕಾರಿಗಳ ಮುಂದೆ ತಾನೇ ವಿದ್ಯುತ್ ತಂತಿ ಎಳೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.
ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ, ಆರೋಪಿ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಂಡೀಪುರದ ಗೋಪಾಲಸ್ವಾಮಿ ಬೆಟ್ಟದಲ್ಲಿ ಗರ್ಭಿಣಿ ಆನೆ ಸಾವು – ಕಾರಣ ನಿಗೂಢ
