ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಸರ್ಕಾರಕ್ಕೆ 12 ವರ್ಷಗಳು ತುಂಬಿವೆ. ಈ ಹಿನ್ನೆಲೆಯಲ್ಲಿ ಜೂ.10 ರಂದು ರಾಜ್ಯಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ಮೋದಿ ಅವರ ಆಯಸ್ಸು, ಆರೋಗ್ಯ ವೃದ್ಧಿಗಾಗಿ ಬಿಜೆಪಿ (BJP) ವಿಶೇಷ ಪೂಜೆ ನೆರವೇರಿಸಲಿದೆ.
ಈ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಜೆಪಿ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಚುನಾಯಿತ ಪ್ರಧಾನಿಗಳಾಗಿ ಕಳೆದ 12 ವರ್ಷಗಳಿಂದ ಪ್ರಧಾನ ಸೇವಕರಾಗಿ ಕೆಲಸ ನಿರ್ವಹಿಸಿದ್ದಾರೆ. ಹೀಗಾಗಿ, ನಾಳೆ ಇಡೀ ರಾಜ್ಯ ಮಾತ್ರವಲ್ಲದೇ ದೇಶಾದ್ಯಂತ ಎಲ್ಲಾ ದೇವಸ್ಥಾನಗಳಲ್ಲಿ ಮೋದಿ ಹೆಸರಲ್ಲಿ ಪೂಜೆ ನೆರವೇರಿಸಲಾಗುತ್ತಿದೆ. ಇದನ್ನೂ ಓದಿ: ಹಳೆ ವೇಳಾಪಟ್ಟಿಯಂತೆ ಬೆಂಗಳೂರು-ಬೀದರ್ ವಿಮಾನ ಸಂಚಾರಕ್ಕೆ ಈಶ್ವರ ಖಂಡ್ರೆ ಆಗ್ರಹ; ಸಿಎಂಗೆ ಪತ್ರ
ಮಲ್ಲೇಶ್ವರಂನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪೂಜೆ ನೆರವೇರಿಸಲಿದ್ದಾರೆ. ಶಾಸಕ ಡಾ. ಸಿ.ಎನ್.ಅಶ್ವತ್ಥನಾರಾಯಣ್ ಉಪಸ್ಥಿತರಿರುವರು. ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಾಜ್ಯ ಉಸ್ತುವಾರಿ ಡಾ. ರಾಧಾಮೋಹನ್ ದಾಸ್ ಅಗರ್ವಾಲ್, ಮಲ್ಲೇಶ್ವರಂನಲ್ಲಿ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಪೂಜೆ ನೆರವೇರಿಸಲಿದ್ದಾರೆ. ಬನಶಂಕರಿಯಲ್ಲಿ ವಿಪಕ್ಷ ನಾಯಕ ಆರ್.ಅಶೋಕ್ ಪೂಜೆ ಸಲ್ಲಿಸುವರು.
ಮೋದಿ ಅವರು 4,398 ದಿನಗಳ ಯಶಸ್ವಿ ಆಡಳಿತದ ಮೂಲಕ ದೇಶದ ಜನರ ಸೇವೆ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಆಯುಸ್ಸು, ಆರೋಗ್ಯ ವೃದ್ಧಿಗಾಗಿ ಪೂಜೆ ನಡೆಸಲಾಗುತ್ತಿದೆ. ಮಾಜಿ ಸಚಿವ ಗೋಪಾಲಯ್ಯ ಅವರು ಮಹಾಲಕ್ಷ್ಮಿ ಲೇಔಟ್‍ನ ಶ್ರೀ ವೀರಾಂಜನೇಯ ದೇವಸ್ಥಾನದಲ್ಲಿ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಶಾಂತಿನಗರ ಕೆಂಪಮ್ಮ ದೇವಸ್ಥಾನದಲ್ಲಿ ಪೂಜೆಯಲ್ಲಿ ಭಾಗವಹಿಸುವರು. ಇದನ್ನೂ ಓದಿ: ನಿಮ್ಮಪ್ಪನಿಂದಲೇ ಆರ್‌ಎಸ್‌ಎಸ್‌ಗೆ ಏನು ಮಾಡಲು ಆಗಿಲ್ಲ, ನಿಮ್ಮಿಂದ ಆಗುತ್ತಾ? – ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ ರವಿ ಕಿಡಿ
ರಾಜ್ಯದ ಎಲ್ಲ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಕೋರ್ ಕಮಿಟಿ ಸದಸ್ಯರು, ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವರು ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
