– ಪೋಲೀಸ್ ಲೋಗೋ ಇರುವ ಕಾರನ್ನೇ ಬಳಸಿ ಕೃತ್ಯ
ಲಕ್ನೋ: ಸಿಆರ್ಪಿಎಫ್ ಯೋಧ ಹಾಗೂ ನಿವೃತ್ತ ಪೊಲೀಸ್ ಅಧಿಕಾರಿ ಮಗ ಸೇರಿ ನಾಲ್ವರು 10ನೇ ತರಗತಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಉತ್ತರ ಪ್ರದೇಶದ ಮಿರ್ಜಾಪುರದ ಹಳಿಯಾ ಎಂಬಲ್ಲಿ ಘಟನೆ ನಡೆದಿದ್ದು, ಆರೋಪಿಗಳಾದ ಜೈಲರ್ ಮಗ ಜೈ ಪ್ರಕಾಶ್, ಸುಲ್ತಾನ್‍ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್ಪಿಎಫ್ ಕಾನ್ಸ್‍ಟೇಬಲ್ ಮಹೇಂದ್ರ ಕುಮಾರ್ ಯಾದವ್, ಲವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಬಂಧಿತ ಆರೋಪಿಗಳು. ಪೊಲೀಸ್ ಲೋಗೋ ಇರುವ ಕಾರಿನಲ್ಲೇ ವಿದ್ಯಾರ್ಥಿನಿಯನ್ನು ಅಪಹರಿಸಿ ಕೃತ್ಯ ಎಸಗಿದ್ದಾರೆ.
Advertisement
ಹಳಿಯಾ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ದೇವಿವರ್ ಶುಕ್ಲಾ ಈ ಕುರಿತು ಮಾಹಿತಿ ನೀಡಿ, ಆರೋಪಿಗಳ ವಿರುದ್ಧ ಅಪಹರಣ ಹಾಗೂ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ(ಪೊಕ್ಸೊ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Advertisement
Advertisement
ಆರೋಪಿಗಳು ಹಳಿಯಾದ ನಿರ್ಜನ ಪ್ರದೇಶದಲ್ಲಿ 15 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ನಾಲ್ವರು ಆರೋಪಿಗಳ ಪೈಕಿ ಒಬ್ಬ ನಿವೃತ್ತ ಜೈಲರ್ ಬ್ರಿಜ್‍ಲಾಲ್ ಮೌರ್ಯ ಅವರ ಮಗ ಜೈ ಪ್ರಕಾಶ್ ಮೌರ್ಯ ಆಗಿದ್ದಾನೆ ಎಂದು ವಿವರಿಸಿದರು.
Advertisement
ಜೈ ಪ್ರಕಾಶ್ ಸಹೋದರಿ ಮದುವೆಯ ನಂತರ ಹಳಿಯಾದಲ್ಲಿಯೇ ವಾಸವಿದ್ದು, ಈತ ಪದೇ ಪದೆ ಸಹೋದರಿ ಮನೆಗೆ ಭೇಟಿ ನೀಡುತ್ತಿದ್ದ. ಆಗ ಕೆಲವು ತಿಂಗಳ ಹಿಂದೆ ಬಾಲಕಿಯನ್ನು ಪರಿಚಯ ಮಾಡಿಕೊಂಡಿದ್ದ ಎಂದು ಶುಕ್ಲಾ ಮಾಹಿತಿ ನೀಡಿದ್ದಾರೆ.
ಸಂತ್ರಸ್ತೆಯ ತಂದೆ ಈ ಕುರಿತು ಪ್ರತಿಕ್ರಿಯಿಸಿ, ಜೈ ಶಂಕರ್ ಬಾಲಕಿಯ ಮೊಬೈಲ್‍ಗೆ ಕರೆ ಮಾಡಿದ್ದಾನೆ. ನಂತರ ಊರಿನ ಹೊರಗಡೆ ನನ್ನನ್ನು ಭೇಟಿಯಾಗು ಸೂಚಿಸಿದ್ದಾನೆ. ನಂತರ ಕಾರಿನಲ್ಲಿ ತನ್ನ ಮೂವರು ಸ್ನೇಹಿತರೊಂದಿಗೆ ಆ ಸ್ಥಳಕ್ಕೆ ಜೈ ಶಂಕರ್ ತೆರಳಿದ್ದ. ನಾಲ್ವರೂ ಸೇರಿ ಅವಳನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದು, ಅಲ್ಲಿ ಅತ್ಯಾಚಾರ ಎಸಗಿದ್ದಾರೆ ಎಂದು ದೂರಿದ್ದಾರೆ.
ಜೈ ಪ್ರಕಾಶ್, ಲುವ್ ಕುಮಾರ್ ಪಾಲ್, ಗಣೇಶ್ ಪ್ರಸಾದ್ ಹಾಗೂ ಸುಲ್ತಾನ್‍ಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಆರ್ ಪಿಎಫ್ ಪೇದೆ ಮಹೇಂದ್ರ ಕುಮಾರ್ ಯಾದವ್ ನಾಲ್ವರ ವಿರುದ್ಧ ಬಾಲಕಿಯ ತಂದೆ ಪ್ರಕರಣ ದಾಖಲಿಸಿದ್ದಾರೆ.
ಕಾರನ್ನು ನಿಲ್ಲಿಸಿದಾಗ ಬಾಲಕಿ ಅಳಲು ಪ್ರಾರಂಭಿಸಿದ್ದು, ಆಗ ಕಾರಿನ ಸೈರನ್ ಶಬ್ದವನ್ನು ಜೋರು ಮಾಡಿದ್ದಾರೆ. ಪರಿಶೀಲನೆಗೆ ತೆರಳಿದಾಗ ಬಾಲಕಿಯನ್ನು ಕರೆದೊಯ್ದಿದ್ದ ಕಾರನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಕಾರು ಮೌರ್ಯ ಅವರಿಗೆ ಸೇರಿದ್ದಾಗಿದ್ದು, ಇದರ ಮೇಲೆ ಹೇಗೆ ಪೊಲೀಸ್ ಲೋಗೋ ಹಾಕಿದ್ದ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮಿರ್ಜಾಪುರ ಎಸ್‍ಪಿ ಧರ್ಮ ವೀರ್ ಈ ಕುರಿತು ಪ್ರತಿಕ್ರಿಯಿಸಿ, ಸಂತ್ರಸ್ತೆ ಹಾಗೂ ನಾಲ್ವರೂ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.