ಲಕ್ನೋ: ಮಳೆಯ ಆಟದಲ್ಲಿ ರನ್ ಮಳೆ ಹರಿಸಿದ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ವಿರುದ್ಧ 9 ರನ್‌ಗಳ ರೋಚಕ ಜಯ ಸಾಧಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಲಕ್ನೋ ಮಿಚೆಲ್ ಮಾರ್ಶ್(Mitchell Marsh) ಅವರ ಸ್ಫೋಟಕ ಶತಕದಿಂದ 19 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 209 ರನ್ ಹೊಡೆಯಿತು. ಮಳೆಯಿಂದ ಪಂದ್ಯಕ್ಕೆ ಅಡಚಣೆ ಮಾಡಿದ್ದರಿಂದ ಡಕ್‌ವರ್ಥ್ ನಿಯಮದ ಅನ್ವಯ ಆರ್‌ಸಿಬಿಗೆ 19 ಓವರ್‌ಗಳಲ್ಲಿ 213 ರನ್‌ಗಳ ಗುರಿಯನ್ನು ನೀಡಲಾಗಿತ್ತು.
ಈ ಮೊತ್ತವನ್ನು ಬೆನ್ನಟ್ಟಿದ ಆರ್‌ಸಿಬಿ 19 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು 203 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು. ತವರು ಮೈದಾನ ಲಕ್ನೋದಲ್ಲಿ ಹ್ಯಾಟ್ರಿಕ್ ಸೋಲು ಅನುಭವಿಸಿದ್ದ ಎಲ್‌ಎಸ್‌ಜಿ ಈ ಮೂಲಕ ಮೊದಲ ಜಯವನ್ನು ದಾಖಲಿಸಿತು.
ಕೊನೆಯ 24 ಎಸೆತಗಳಲ್ಲಿ ಆರ್‌ಸಿಬಿ 63 ರನ್‌ಗಳ ಅಗತ್ಯವಿತ್ತು. ಶಹಬಾಜ್ ಎಸೆತ 16ನೇ ಓವರ್‌ನಲ್ಲಿ 16 ರನ್, ಶಮಿ ಎಸೆದ 17ನೇ ಓವರ್‌ನಲ್ಲಿ 14 ರನ್, ಪ್ರಿನ್ಸ್ ಯಾದವ್ ಎಸೆದ 18ನೇ ಓವರ್‌ನಲ್ಲಿ 13 ರನ್ ಬಂತು. ದಿಗ್ವೇಶ್ ರಾತಿ ಎಸೆದ ಕೊನೆಯ ಓವರ್‌ನಲ್ಲಿ 10 ರನ್ ಮಾತ್ರ ಬಿಟ್ಟುಕೊಟ್ಟ ಪರಿಣಾಮ ಪಂದ್ಯವನ್ನು ಲಕ್ನೋ ಜಯಿಸಿತು. ಇದನ್ನೂ ಓದಿ: 10 ಸಾವಿರ ಉಚಿತ ಟಿಕೆಟ್ ಕೇಳಿದ್ದಕ್ಕೆ ಬೆಂಗಳೂರಿನಿಂದ ಅಹಮದಾಬಾದ್‌ಗೆ ಐಪಿಎಲ್ ಫೈನಲ್ ಶಿಫ್ಟ್
ಸಿಕ್ಸರ್, ಬೌಂಡರಿ ಹೊಡೆದು ಅಬ್ಬರದ ಬ್ಯಾಟಿಂಗ್ ನಡೆಸಿದ ಟಿಮ್ ಡೇವಿಡ್ 40 ರನ್(17 ಎಸೆತ, 4 ಬೌಂಡರಿ, 3 ಸಿಕ್ಸ್) ಹೊಡೆದು ಔಟಾದರು. ಕೊನೆಯಲ್ಲಿ ಕೃನಾಲ್ ಪಾಡ್ಯ ಔಟಾಗದೇ 28 ರನ್(16 ಎಸೆತ, 2 ಬೌಂಡರಿ, 2 ಸಿಕ್ಸ್), ರೋಮಾರಿಯೋ ಶೆಪಾರ್ಡ್ ಔಟಾಗದೇ 23 ರನ್(15 ಎಸೆತ, 3 ಬೌಂಡಡಿ, 1 ಸಿಕ್ಸ್) ಹೊಡೆದರು.
ಮೊದಲು ಬ್ಯಾಟ್ ಬೀಸಿದ ಮಾರ್ಷ್ 111 ರನ್(56 ಎಸೆತ, 9 ಬೌಂಡರಿ, 9 ಸಿಕ್ಸ್) ಹೊಡೆದು ಔಟಾದರೆ ಪೂರನ್ 38 ರನ್(23 ಎಸೆತ, 4 ಬೌಂಡರಿ, 1 ಸಿಕ್ಸ್), ಕೊನೆಯಲ್ಲಿ ರಿಷಬ್ ಪಂತ್ ಔಟಾಗದೇ 32 ರನ್(10 ಎಸೆತ, 4 ಬೌಂಡರಿ, 2 ಸಿಕ್ಸ್) ಹೊಡೆದು ತಂಡದ ಮೊತ್ತವನ್ನು 200 ರನ್‌ಗಳ ಗಡಿಯನ್ನು ದಾಟಿಸಿದರು.

