ಬೆಂಗಳೂರು: ತಾಂತ್ರಿಕ ದೋಷದ ನೆಪವೊಡ್ಡಿ ಸ್ಪೈಸ್ಜೆಟ್ (Spicejet) ವಿಮಾನಗಳ ಹಾರಾಟದಲ್ಲಿ ಗಂಟೆಗಟ್ಟಲೆ ವಿಳಂಬವಾಗಿದ್ದು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (KIA) ನೂರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಸಿಲುಕಿ ಆಕ್ರೋಶ ಹೊರಹಾಕಿದ ಘಟನೆ ನಡೆದಿದೆ.
ಬೆಂಗಳೂರಿನಿಂದ ಕೋಲ್ಕತ್ತಾ ಮತ್ತು ಮುಂಬೈಗೆ ತೆರಳಬೇಕಿದ್ದ ಸ್ಪೈಸ್ಜೆಟ್ನ ಮೂರು ಪ್ರಮುಖ ವಿಮಾನಗಳ ಹಾರಾಟ ವಿಳಂಬಗೊಂಡಿದ್ದರಿಂದ ಸುಮಾರು 473 ಮಂದಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು.
ಎಸ್ಜಿ 158 (ಕೋಲ್ಕತ್ತಾ) 135 ಪ್ರಯಾಣಿಕರು, ಎಸ್ಜಿ 647 (ಕೋಲ್ಕತ್ತಾ) 161 ಪ್ರಯಾಣಿಕರು, ಎಸ್ಜಿ 633 (ಮುಂಬೈ) 177 ಪ್ರಯಾಣಿಕರು ತೆರಳಬೇಕಿತ್ತು.ನಿಗದಿತ ಸಮಯಕ್ಕಿಂತ ಹಲವು ಗಂಟೆಗಳ ಮೊದಲೇ ಟರ್ಮಿನಲ್ಗೆ ಆಗಮಿಸಿದ್ದ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್ಗಳನ್ನೂ ನೀಡದೆ ಕಾಯಿಸಲಾಗಿದೆ. ತಾಂತ್ರಿಕ ಸಮಸ್ಯೆಯ ನೆಪ ಹೇಳಿ ಸುಮಾರು 4 ರಿಂದ 5 ಗಂಟೆಗಳ ಕಾಲ ಪ್ರಯಾಣಿಕರನ್ನು ಕಾಯಿಸಲಾಗಿದ್ದು, ವಿಮಾನ ಯಾವಾಗ ಟೇಕ್ ಆಫ್ ಆಗಲಿದೆ ಎಂಬ ಬಗ್ಗೆ ಸ್ಪೈಸ್ಜೆಟ್ ಸಿಬ್ಬಂದಿ ಯಾವುದೇ ಸ್ಪಷ್ಟ ಮತ್ತು ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಲಾಗಿದೆ.
ತುರ್ತು ಕೆಲಸಗಳು, ಕಚೇರಿ ಕಾರ್ಯ ಹಾಗೂ ಆರೋಗ್ಯ ಸಮಸ್ಯೆಗಳಿದ್ದ ಪ್ರಯಾಣಿಕರು ವಿಮಾನಯಾನ ಸಂಸ್ಥೆಯ ಬೇಜವಾಬ್ದಾರಿ ನಿರ್ವಹಣೆ ವಿರುದ್ಧ ಕೆಂಡಾಮಂಡಲರಾಗಿದ್ದು, ವಿಮಾನ ನಿಲ್ದಾಣದ ಕೌಂಟರ್ ಎದುರು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು. ವಿಮಾನಯಾನ ಸಂಸ್ಥೆಗಳು ಇಂತಹ ಸಂದರ್ಭಗಳಲ್ಲಿ ಪ್ರಯಾಣಿಕರಿಗೆ ಕನಿಷ್ಠ ಮೂಲಸೌಕರ್ಯ ಮತ್ತು ನಿಖರ ಮಾಹಿತಿ ನೀಡಬೇಕೆಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಲಾಗಿದೆ ಎಂದು ಪ್ರಯಾಣಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
