ಮೈಸೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ 7 ಮಂದಿ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಉಳಿದ ಮೃತದೇಹಗಳಿಗಾಗಿ ಶೋಧ ನಡೆಸುತ್ತಿರುವ ಪೊಲೀಸರಿಗೆ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಮತ್ತೊಂದು ಡೆಡ್ಬಾಡಿ ಸಿಕ್ಕಿದೆ. ಅಲ್ಲಿಗೆ ಪತ್ತೆಯಾದ ಮೃತದೇಹಗಳ ಸಂಖ್ಯೆ ಒಟ್ಟು 6ಕ್ಕೇರಿದೆ.
ಹೌದು. ಮೈಸೂರಿನ ಚಾಮುಂಡಿಬೆಟ್ಟದ ಮುಖ್ಯರಸ್ತೆಯ ಪಕ್ಕದಲ್ಲೇ ಬಿದ್ದಿದ್ದ ಮೃತದೇಹ ಪತ್ತೆಯಾಗಿದೆ. ಕೊಲೆ ಮಾಡಿದ ಬಳಿಕ ಹಂತಕ ಇಂದು ಶೇಖರ್ ಕೆಂಪು ಬಣ್ಣದ ಬೆಡ್ಶೀಟ್ನಲ್ಲಿ ಸುತ್ತಿ ಬಿಸಾಡಿದ್ದ ಮೃತದೇಹ ಈಗ ಪೊಲೀಸರಿಗೆ ಸಿಕ್ಕಿದೆ.
ಹಂತಕ ನೋ ಪಾರ್ಕಿಂಗ್ ಸ್ಥಳದಲ್ಲಿ ಮೃತದೇಹವನ್ನ ಬಿಸಾಡಿ ಹೋಗಿದ್ದ. ಸ್ಥಳದಲ್ಲಿ ದುರ್ವಾಸನೆ ಬೀರುತ್ತಿದ್ದ ಹಿನ್ನೆಲೆ, ಏನೆಂದು ಪರಿಶೀಲಿಸಿದಾಗ ಮೃತದೇಹ ಇರೋದು ಪತ್ತೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
6 ಮೃತದೇಹ ಪತ್ತೆ ಇನ್ನೊಂದಕ್ಕೆ ಶೋಧ
2 ದಿನಗಳ ಹಿಂದೆಯೇ ಸೇಲಂನ ಘಾಟ್ ಕಾಡಿನಲ್ಲಿ ಹಂತಕ ಇಂದುಶೇಖರ್ ಪತ್ನಿ ಸುನೀತಾ ಹಾಗೂ ರೂಪವತಿ ಮೃತದೇಹ ಪತ್ತೆಯಾಗಿದ್ದವು. ಕೊಳೆತ ಸ್ಥಿತಿಯಲ್ಲಿ ಶವಗಳು ಪತ್ತೆಯಾಗಿದ್ದವು. ಒಂದು ಒಂದೇ ದಿನ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲು (2) ಮತ್ತು ಮುಖ್ಯರಸ್ತೆ ಪಕ್ಕದಲ್ಲಿ (1) ಮೂರು ಮೃತದೇಹಗಳು ಪತ್ತೆಯಾಗಿವೆ. ಅಲ್ಲಿಗೆ ಒಟ್ಟಾರೆ ಆರು ಮಂದಿಯ ಮೃತದೇಹಗಳು ಪತ್ತೆಯಾಗಿದ್ದು, ಇನ್ನೊಂದು ಡೆಡ್ಬಾಡಿ ಪತ್ತೆಗೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಹತ್ಯೆಯಾದ ಬಾಲಕ ಪುನೀತ್ ಅಂತ್ಯಕ್ರಿಯೆಯನ್ನ ಶನಿವಾರ (ನ.7) ರಾಜಾಜಿನಗರದ ಹರಿಶ್ಚಂದ್ರ ಘಾಟ್ನಲ್ಲಿ ನೆರವೇರಿಸಲಾಗಿತ್ತು. ಇನ್ನುಳಿದ ನಾಲ್ಕು ಮೃತದೇಹಗಳ ಅಂತ್ಯಕ್ರಿಯೆಯನ್ನ ಒಂದೇ ಕಡೆ ನಡೆಸಲು ತೀರ್ಮಾನಿಸಲಾಗಿದೆ.
ಸದ್ಯ ಸೇಲಂ ನಲ್ಲಿ ಪತ್ತೆಯಾದ ಇಂದುಶೇಖರ್ ಪತ್ನಿ ಹಾಗೂ ಅತ್ತೆಯ ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ. ಶಿವಕುಮಾರ್ ಮತ್ತು ದಿವ್ಯಾ ದಂಪತಿಯ ಮೃತದೇಹಗಳ ಮರಣೋತ್ತರ ಪರೀಕ್ಷೆ ಮೈಸೂರಲ್ಲಿ ನಡೆಯಲಿದೆ. ಇನ್ನೊಂದು ಮೃತದೇಹ ಮಧ್ಯಾಹ್ನದ ನಂತರ ಪತ್ತೆಯಾಗಿದೆ. ಈ ಎಲ್ಲಾ ಮೃತದೇಹಗಳನ್ನ ಬೆಂಗಳೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳು ʻಪಬ್ಲಿಕ್ ಟಿವಿ’ಗೆ ತಿಳಿಸಿವೆ.

