ಅತಿ ಹೆಚ್ಚು ಗಿನ್ನೆಸ್ ದಾಖಲೆಗಳ ಸರಮಾಲೆಯನ್ನು ಧರಿಸಿಕೊಂಡಿರುವ ದುಬೈ ಇದೀಗ ಮತ್ತೊಂದು ಸಾಧನೆಗೆ ಮುನ್ನುಡಿ ಬರೆದಿದೆ. ಜನನಿ ಬಿಡಾಗಿರುವ ದುಬೈ (Dubai) ನಗರದಲ್ಲಿ ವಿಶಾಲವಾಗಿರುವ ರಾಷ್ಟ್ರೀಯ ಹೆದ್ದಾರಿಗಳು ನಾಲ್ಕು ದಿಕ್ಕಿನಲ್ಲಿ ಹಾದೂ ಹೋಗಿದ್ದರೂ ದಿನಪೂರ್ತಿ ಸದಾ ವಾಹನ ಸಂಚಾರಗಳ ದಟ್ಟಣೆ ಹೆಚ್ಚುತಲೇ ಇರುತ್ತದೆ. ತಮ್ಮ ಸ್ವಂತ ವಾಹನವಿದ್ದರೂ ಮೆಟ್ರೊ ರೈಲಿನ ಬಳಕೆ ಮಾಡುವವರ ಸಂಖ್ಯೆಯೂ ಸಹ ಹೆಚ್ಚಿದೆ. ಆದ್ದರಿಂದ ಆಕಾಶದಲ್ಲಿ ಡ್ರೋನ್ ಏರ್ ಟ್ಯಾಕ್ಸಿ (Drone Air Taxi) ಸೇವೆ ನೀಡಲು ದುಬೈ ಸಜ್ಜಾಗಿದೆ.
ದುಬೈ ರಸ್ತೆ ಸಾರಿಗೆ ಪ್ರಾಧಿಕಾರ (ದುಬೈ ಆರ್‌ಟಿಎ) ಶೂನ್ಯ-ಹೊರಸೂಸುವಿಕೆ ವಾಹನಗಳ ಮೇಲೆ ಕೇಂದ್ರೀಕರಿಸಿ, ಹವಾಮಾನ ಬದಲಾವಣೆಯನ್ನು ತಗ್ಗಿಸುವುದು ಮತ್ತು ಇಂಗಾಲದ ಹೆಜ್ಜೆಗುರುತನ್ನು ಕಡಿಮೆ ಮಾಡುವ ಮೂಲಕ 2050 ರ ವೇಳೆಗೆ ಶೂನ್ಯ-ಹೊರಸೂಸುವಿಕೆ ಯೋಜನೆಯನ್ನು ಬಿಡುಗಡೆ ಮಾಡಿದೆ. ಕಡಿಮೆ ಶಬ್ದ ಹೊಂದಿರುವ ಹಾಗೂ ಆಕಾಶದಲ್ಲಿ ಹಾರಿ ವೇಗವಾಗಿ ತಲುಪಬಲ್ಲ ಏರ್ ಟ್ಯಾಕ್ಸಿ ಸೇವೆಯನ್ನು 2026ರ ವೇಳೆಗೆ ದುಬೈ ನೀಡಲು ಸಜ್ಜಾಗಿದೆ. ಈ ಮೂಲಕ ವಿಶ್ವದಲ್ಲೇ ಡ್ರೋನ್ ಆಧಾರಿತ ಏರ್ ಟ್ಯಾಕ್ಸಿ ಸೇವೆ ಒದಗಿಸುವ ಮೊದಲ ನಗರ ಎಂಬ ಹೆಗ್ಗುರುತಿಗೆ ದುಬೈ ಪಾತ್ರವಾಗಲಿದೆ.
Advertisement
Advertisement
ದುಬೈ ಆರ್‌ಟಿಒ ಮತ್ತು ಜೋಬಿ ಏವಿಯೇಶನ್ ಅಂಡ್ ಸ್ಕೈಪೋರ್ಟ್ ಇನ್ಫ್ರಾಸ್ಟ್ರಕ್ಚರ್ ಜೊತೆಗೂಡಿ ʼಪಬ್ಲಿಕ್ ಟ್ರಾನ್ಸ್ ಪೋರ್ಟ್ ಆನ್ ದಿ ಸ್ಕೈʼ ಯೋಜನೆಗೆ ತಯಾರಿ ನಡೆಸುತ್ತಿದೆ. ಡ್ರೋನ್ ಏರ್‌ಕ್ರಾಫ್ಟ್ ಬಳಸಿ ಭೂಮಿಯಿಂದ ಒಂದು ಸಾವಿರ ಅಡಿಯಿಂದ ಮೂರು ಸಾವಿರ ಅಡಿ ಎತ್ತರದಲ್ಲಿ ನಗರದ ಮಧ್ಯೆ ಗಗನಚುಂಬಿ ಕಟ್ಟಡಗಳ ಮೇಲ್ಭಾಗದಲ್ಲಿ ಏರ್ ಟ್ಯಾಕ್ಸಿ ಹಾರಾಟ ನಡೆಸುವಂತೆ ಸಕಲ ಸಿದ್ಧತೆಗಳು ನಡೆದಿವೆ. ಹಾಗಿದ್ರೆ ಈ ಡ್ರೋನ್ ಆಧಾರಿತ ಏರ್ ಟ್ಯಾಕ್ಸಿ/ಫ್ಲೈಯಿಂಗ್ ಟ್ಯಾಕ್ಸಿ ಹೇಗಿದೆ ಎಂಬುದನ್ನು ನೋಡೋಣ.
Advertisement
ಏನಿದು ಏರ್ ಟ್ಯಾಕ್ಸಿ?
ದುಬೈ ಏರ್ ಟ್ಯಾಕ್ಸಿ ಎನ್ನುವುದು ಡ್ರೋನ್-ಆಧಾರಿತ ವಾಯು ಟ್ಯಾಕ್ಸಿ ಸೇವೆಯಾಗಿದೆ. ಈ ಸೇವೆಯು ದುಬೈನಲ್ಲಿ ವೇಗವಾದ ಮತ್ತು ಸುರಕ್ಷಿತ ಪ್ರಯಾಣಕ್ಕೆ ಹೊಸ ಆಯಾಮವನ್ನು ನೀಡುತ್ತದೆ. ದುಬೈ ಏರ್ ಟ್ಯಾಕ್ಸಿಯು ದುಬೈನಲ್ಲಿ ಪ್ರಯಾಣಿಸುವವರಿಗೆ ಒಂದು ಹೊಸ ಮತ್ತು ರೋಮಾಂಚಕ ಅನುಭವವನ್ನು ನೀಡುತ್ತದೆ.
Advertisement
ಏರ್ ಟ್ಯಾಕ್ಸಿ ದುಬೈನ ಪ್ರಮುಖ ಸ್ಥಳಗಳಾದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಮ್ ಜುಮೇರಾ, ದುಬೈ ಡೌನ್ ಟೌನ್, ದುಬೈ ಮರಿನಾ ಭಾಗಕ್ಕೆ ನಿಗದಿಪಡಿಸಲಾಗಿದೆ. 2025ರ ಕೊನೆಯ ಭಾಗದಲ್ಲಿ ಅಥವಾ 2026ರ ವೇಳೆಗೆ ಪ್ರಯಾಣಿಕರಿಗೆ ಈ ಏರ್‌ಟ್ಯಾಕ್ಸಿ ಲಭ್ಯವಾಗುವಂತೆ ಯೋಜನೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಕ್ಯಾಲಿಫೋರ್ನಿಯಾದಲ್ಲಿ ಏರ್‌ಟ್ಯಾಕ್ಸಿ ಟೆಸ್ಟ್ ಹಂತದಲ್ಲಿದ್ದು, ದುಬೈ ಮರುಭೂಮಿಯಲ್ಲಿಯೂ ಸಹ ಪ್ರಾಯೋಗಿಕವಾಗಿ ಟೆಸ್ಟ್ ನಡೆಯಲಿದೆ. ಡ್ರೋನ್ ಫ್ಲೈಯಿಂಗ್ ಏರ್‌ಟ್ಯಾಕ್ಸಿ ಜನಸೇವೆಗೆ ಲಭ್ಯವಾದರೆ, ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪಾಮ್ ಜುಮೇರಾಕ್ಕೆ ರಸ್ತೆಯ ಮೂಲಕ 45 ನಿಮಿಷ ತೆಗೆದುಕೊಂಡರೆ, ಗಗನ ಮಾರ್ಗವಾಗಿ ಏರ್‌ಟ್ಯಾಕ್ಸಿ ಕೇವಲ ಹತ್ತು ನಿಮಿಷ ಮಾತ್ರ ತೆಗೆದುಕೊಳ್ಳುತ್ತದೆ.
ಹೇಗಿದೆ ಫ್ಲೈಯಿಂಗ್ ಟ್ಯಾಕ್ಸಿ?
ಡ್ರೋನ್ ಫ್ಲೈಯಿಂಗ್ ಏರ್‌ಕ್ರಾಫ್ಟ್ ಪೈಲೆಟ್ ಮತ್ತು ನಾಲ್ಕು ಜನ ಪ್ರಯಾಣಿಕರು ಹಾಗೂ ತಮ್ಮ ಲಗೇಜ್ ಸಹಿತ 200-350 ಕಿ.ಮೀ. ವೇಗದಲ್ಲಿ ಹೊತ್ತೊಯ್ಯಲಿದೆ. ಎಲೆಕ್ಟ್ರಿಕ್ ಏರ್‌ಟ್ಯಾಕ್ಸಿ ಆಕಾಶದಲ್ಲಿ ಹಾರಾಡುವ ಸಮಯದಲ್ಲಿ ಪ್ರಯಾಣಿಕರಿಗೆ ಮೊಬೈಲ್ ಬಳಕೆ ಸಹ ಮಾಡಲು ನೆಟ್ ವರ್ಕ್ ಇರುತ್ತದೆ. ಏರ್ ಟ್ಯಾಕ್ಸಿ ಚಲಿಸುವಾಗ 45 ಡೆಸಿಬಲ್ ಸೌಂಡ್ ಮಾಡುವುದರಿಂದ ಪ್ರಯಾಣಿಕರಿಗೆ ಕಿರಿಕಿರಿಯಾಗುವ ಸಾಧ್ಯತೆ ತುಂಬಾ ಕಡಿಮೆ.
ಏರ್ ಟ್ಯಾಕ್ಸಿ ಚಲಾಯಿಸುವ ಪೈಲೆಟ್ ಉನ್ನತ ಮಟ್ಟದ ತರಬೇತಿ ಹಾಗೂ ಏರ್ ಮಾರ್ಷಲ್ ಲೈಸೆನ್ಸ್ ಪಡೆದಿರುತ್ತಾರೆ. ಅತ್ಯುನ್ನತ ತಂತ್ರಜ್ಞಾನದಿಂದ ತಯಾರಿಸಲಾಗಿರುವ ಡ್ರೋನ್ ಫ್ಲೈಯಿಂಗ್ ಏರ್‌ಕ್ರಾಫ್ಟ್ ಬಿಡುವಿಲ್ಲದ ಉದ್ಯಮಿಗಳಿಗೆ, ಉದ್ಯೋಗಿಗಳಿಗೆ ಸಮಯವನ್ನು ಉಳಿಸಿಕೊಳ್ಳಲು ಸದುಪಯೋಗವಾಗಲಿದೆ. ಬಹು ದೂರದರ್ಶಿತ್ವ ಹೊಂದಿರುವ ಅರಬ್ಬರ ದಾಖಲೆಯನ್ನು ಸೃಷ್ಠಿಸುವ ಕಾರ್ಯ ಯೋಜನೆಯಲ್ಲಿ ಡ್ರೋನ್ ಫ್ಲೈಯಿಂಗ್ ಏರ್‌ಕ್ರಾಫ್ಟ್ ವಿಶೇಷ ಸ್ಥಾನ ಪಡೆದುಕೊಳ್ಳಲಿದೆ.
ನವೀನ ಚಾರ್ಜಿಂಗ್ ಮೂಲಸೌಕರ್ಯವು ಹತ್ತು ನಿಮಿಷಗಳಲ್ಲಿ ಶೂನ್ಯದಿಂದ 100% ವರೆಗೆ ರೀಚಾರ್ಜ್ ಮಾಡುವ ಸಾಮರ್ಥ್ಯದೊಂದಿಗೆ ಏರ್ ಟ್ಯಾಕ್ಸಿಗಳಿಗೆ ವೇಗವಾದ ಸಮಯವನ್ನು ಸಕ್ರಿಯಗೊಳಿಸುತ್ತದೆ. ಗೊತ್ತುಪಡಿಸಿದ ವರ್ಟಿಪೋರ್ಟ್‌ಗಳಲ್ಲಿ ಏರ್ ಟ್ಯಾಕ್ಸಿ ಲ್ಯಾಂಡ್ ಆದ ಬಳಿಕ ಸಿಬ್ಬಂದಿ ಏರ್ ಟ್ಯಾಕ್ಸಿಯನ್ನು ಚಾರ್ಜಿಂಗ್ ಪಾಯಿಂಟ್‌ಗಳಿಗೆ ಹಾಕುತ್ತಾರೆ. ಮುಂದಿನ ನಿರ್ಗಮನದ ಮೊದಲು ಕನಿಷ್ಠ ಅಲಭ್ಯತೆಯನ್ನು ಖಚಿತಪಡಿಸಿಕೊಳ್ಳುತ್ತಾರೆ.
ಪ್ರಯಾಣ ದರ ಎಷ್ಟು?
ಈ ಏರ್ ಟ್ಯಾಕ್ಸಿ ಗಾಳಿಯಲ್ಲಿ 1,000 ಮತ್ತು 3,000 ಅಡಿಗಳ ನಡುವೆ ಹಾರುತ್ತವೆ. ಈ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಕನಿಷ್ಠ 350 ದಿರ್ಹಮ್‌ಗಳು (ಸುಮಾರು 8,032 ರೂ.) ವೆಚ್ಚವಾಗಲಿದೆ ಎಂದು ದುಬೈ RTA ಅಂದಾಜಿಸಿದೆ.
ಈ ಟ್ಯಾಕ್ಸಿಗಳು ಪ್ರಮುಖ ಸ್ಥಳಗಳ ನಡುವಿನ ಪ್ರಯಾಣದ ಸಮಯವನ್ನು 70% ರಷ್ಟು ಕಡಿಮೆ ಮಾಡುತ್ತದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಉದಾಹರಣೆಗೆ ದುಬೈ ಅಂತರಾಷ್ಟ್ರೀಯ ವಿಮಾನನಿಲ್ದಾಣದಿಂದ ಪಾಮ್ ಜುಮೇರಾಗೆ ಪ್ರಯಾಣ, ಸಾಮಾನ್ಯವಾಗಿ ರಸ್ತೆಯ ಮೂಲಕ 45 ನಿಮಿಷದಿಂದ ಒಂದು ಗಂಟೆಯವರೆಗೆ ತೆಗೆದುಕೊಳ್ಳುತ್ತದೆ. ಆದರೆ ಏರ್ ಟ್ಯಾಕ್ಸಿಯಲ್ಲಿ ಕೇವಲ 10 ರಿಂದ 12 ನಿಮಿಷಗಳಲ್ಲಿ ತಲುಪಬಹುದಾಗಿದೆ.
500 ರಿಂದ 1000 ಮೀಟರ್ ಎತ್ತರದಲ್ಲಿ ಹಾರುವ ಈ ಏರ್ ಟ್ಯಾಕ್ಸಿಗಳ ವಿನ್ಯಾಸ ಮತ್ತು ಕಾರ್ಯಾಚರಣೆಯಲ್ಲಿ ಸುರಕ್ಷತೆಯು ಅತಿಮುಖ್ಯವಾಗಿದೆ. ಪ್ರಯಾಣದ ದೂರವನ್ನು ಆಧರಿಸಿ ಎತ್ತರವು ಬದಲಾಗುತ್ತದೆ. ವರ್ಧಿತ ಸುರಕ್ಷತೆ ಮತ್ತು ದಕ್ಷತೆಗಾಗಿ ದೂರ ಪ್ರಯಾಣದ ವೇಳೆ ಹೆಚ್ಚು ಎತ್ತರದಲ್ಲಿ ಏರ್ ಟ್ಯಾಕ್ಸಿಗಳು ಹಾರುತ್ತವೆ.
ಬುಕ್ಕಿಂಗ್ ಹೇಗೆ?
ಏರ್ ಟ್ಯಾಕ್ಸಿಗಳನ್ನು ಸಮರ್ಥವಾಗಿ ನ್ಯಾವಿಗೇಟ್ ಮಾಡಲು ಮತ್ತು ಪ್ರಯಾಣಿಕರಿಗೆ ಸುಗಮ ಮತ್ತು ಸುರಕ್ಷಿತ ಪ್ರಯಾಣವನ್ನು ಖಚಿತಪಡಿಸಿಕೊಳ್ಳಲು ಪೈಲಟ್‌ಗಳು 6 ರಿಂದ 8 ವಾರಗಳವರೆಗೆ ಕಠಿಣ ತರಬೇತಿಗೆ ಒಳಗಾಗುತ್ತಾರೆ. ಹೆಚ್ಚುವರಿಯಾಗಿ, ಜಾಬಿ ಏವಿಯೇಷನ್ ಅಭಿವೃದ್ಧಿಪಡಿಸಿದ ಮೀಸಲಾದ ಮೊಬೈಲ್ ಅಪ್ಲಿಕೇಶನ್‌ನ ಮೂಲಕ ಸವಾರಿಯ ಕಾಯ್ದಿರಿಸುವಿಕೆಯನ್ನು ಸುಲಭವಾಗಿ ಮಾಡಲಾಗುತ್ತದೆ.
ಪ್ರಯಾಣಿಕರು ಮೊಬೈಲ್ ಅಪ್ಲಿಕೇಶನ್ ಮೂಲಕ ಡ್ರೋನ್ ಟ್ಯಾಕ್ಸಿಯನ್ನು ಮುಂಚಿತವಾಗಿ ಬುಕ್ ಮಾಡಬಹುದು. ಡ್ರೋನ್ ಟ್ಯಾಕ್ಸಿ ಗೊತ್ತುಪಡಿಸಿದ ವರ್ಟಿಪೋರ್ಟ್‌ಗೆ ಆಗಮಿಸುತ್ತದೆ, ಅಲ್ಲಿ ಪ್ರಯಾಣಿಕರು ಹತ್ತಬಹುದು. ಬಳಿಕ ಟ್ಯಾಕ್ಸಿ ಪ್ರಯಾಣಿಕರನ್ನು ಗಮ್ಯಸ್ಥಾನಕ್ಕೆ ಸಾಗಿಸುತ್ತದೆ. ಈ ವೇಳೆ ಅಡೆತಡೆಗಳನ್ನು ತಪ್ಪಿಸಲು ಏರ್ ಟ್ಯಾಕ್ಸಿಯಲ್ಲಿ ಜಿಪಿಎಸ್ ನ್ಯಾವಿಗೇಷನ್ ಬಳಸಲಾಗುತ್ತದೆ.
ಪ್ರಯೋಜನಗಳೇನು?
*ಡ್ರೋನ್ ಟ್ಯಾಕ್ಸಿಗಳು ಪರ್ಯಾಯ ಸಾರಿಗೆ ವಿಧಾನವನ್ನು ಒದಗಿಸುವ ಮೂಲಕ ದುಬೈನಲ್ಲಿ ಟ್ರಾಫಿಕ್ ದಟ್ಟಣೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ.
*ಡ್ರೋನ್ ಟ್ಯಾಕ್ಸಿಗಳು ಸೀಮಿತ ರಸ್ತೆ ಪ್ರವೇಶವಿರುವ ಪ್ರದೇಶಗಳಿಗೆ ಸಾರಿಗೆ ಸೇವೆಗಳನ್ನು ಒದಗಿಸಬಹುದು.
*ಎಲೆಕ್ಟ್ರಿಕ್ ಪ್ರೊಪಲ್ಷನ್ ಸಿಸ್ಟಮ್ ಹೊರಸೂಸುವಿಕೆ ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ.
ಜೋಬಿ ಏವಿಯೇಷನ್ ದುಬೈನೊಂದಿಗೆ 6 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಅದರ ಪ್ರಕಾರ 2026ರಿಂದ 6 ವರ್ಷಗಳ ಕಾಲ ಜೋಬಿ ಏವಿಯೇಷನ್ ನೇತೃತ್ವದಲ್ಲಿ ಏರ್ ಟ್ಯಾಕ್ಸಿಗಳು ಸೇವೆ ಸಲ್ಲಿಸಲಿದೆ.