ಮಡಿಕೇರಿ: ಕೊಡಗು (Kodagu) ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕನ್ನಂಬಾಡಿ ಗ್ರಾಮದಲ್ಲಿ ಕೆರೆಯ ಕೆಸರಿನಲ್ಲಿ 24 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ ಕಾಡಾನೆ, ಅರಣ್ಯ ಇಲಾಖೆ ಹಾಗೂ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ ವೇಳೆ ತಾನಾಗಿಯೇ ಮೇಲಕ್ಕೆದ್ದು ಕಾಡಿನತ್ತ ತೆರಳಿದೆ.
ಪೊನ್ನಂಪೇಟೆ ತಾಲೂಕಿನ ಕನ್ನಂಬಾಡಿ ಗ್ರಾಮದ ಖಾಸಗಿ ತೋಟದ ಕೆರೆಗೆ ನೀರು ಕುಡಿಯಲು ಬಂದಿದ್ದ ಕಾಡಾನೆ ಕೆಸರಿನಲ್ಲಿ ಸಿಲುಕಿ ಹೊರಬರಲು ಹರಸಾಹಸ ಪಟ್ಟಿತ್ತು. ಹಲವು ಬಾರಿ ಪ್ರಯತ್ನಿಸಿದರೂ ಹೊರಬರಲು ಸಾಧ್ಯವಾಗದೇ ಸುಮಾರು 24 ಗಂಟೆಗಳಿಗೂ ಹೆಚ್ಚು ಕಾಲ ಅಲ್ಲೇ ಸಿಲುಕಿಕೊಂಡಿತ್ತು.
ಕಾಡಾನೆಗೆ ಗಾಯವಾಗಿರಬಹುದು ಎಂಬ ಅನುಮಾನವೂ ವ್ಯಕ್ತವಾಗಿತ್ತು. ಹೆಚ್ಚು ಸಮಯ ಕೆಸರಿನಲ್ಲಿ ಉಳಿದರೆ ಕಾಲಿಗೆ ಸೋಂಕು ತಗುಲುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿ, ಕೂಡಲೇ ರಕ್ಷಣಾ ಕಾರ್ಯ ಆರಂಭಿಸಬೇಕೆಂದು ಒತ್ತಾಯಿಸಿದ್ದರು.ಇದನ್ನೂ ಓದಿ: ಮಡಿಕೇರಿಯಲ್ಲಿ ಮಳೆ ಅಬ್ಬರ; ಜು.12ರವರೆಗೆ ರಾಜಾಸೀಟ್ ಉದ್ಯಾನವನಕ್ಕೆ ಪ್ರವಾಸಿಗರಿಗಿಲ್ಲ ಎಂಟ್ರಿ
ಸ್ಥಳೀಯರು ಮಾಹಿತಿ ನೀಡಿದರೂ ಆರಂಭದಲ್ಲಿ ಅರಣ್ಯ ಇಲಾಖೆಯ ರಕ್ಷಣಾ ಕಾರ್ಯ ವಿಳಂಬವಾಗಿದೆ ಎಂದು ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದರು. ಸಾಕಾನೆಗಳನ್ನು ಕರೆತಂದು ಕಾಡಾನೆಯನ್ನು ಸುರಕ್ಷಿತವಾಗಿ ಹೊರತೆಗೆದು ರಕ್ಷಿಸಬೇಕಿತ್ತು ಎಂದು ಆಗ್ರಹಿಸಿದರು.
ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಪಶುವೈದ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ವೇಳೆ ಅಲ್ಲಿದ್ದ ಜನರನ್ನು ಕಂಡ ಕಾಡಾನೆ, ತಾನಾಗಿಯೇ ಕೆಸರಿನಿಂದ ಮೇಲಕ್ಕೆದ್ದು ಯಾವುದೇ ನೆರವಿಲ್ಲದೆ ಕಾಡಿನತ್ತ ಓಡಿ ಹೋಗಿದೆ.
ಅರಣ್ಯ ಇಲಾಖೆ ಮೂಲಗಳ ಪ್ರಕಾರ, ಕಾಡಾನೆಗಳಿಗೆ ಗಾಯ ಅಥವಾ ದೈಹಿಕ ನೋವು ಉಂಟಾದಾಗ ಕೆಸರು ಮಿಶ್ರಿತ ನೀರಿನಲ್ಲಿ ಕೆಲಕಾಲ ಉಳಿಯುವುದು ಸಹಜ. ನೋವು ಕಡಿಮೆಯಾದ ಬಳಿಕ ಅವು ತಾವಾಗಿಯೇ ಹೊರಬರುವುದು ಸಾಮಾನ್ಯ ವರ್ತನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಇದನ್ನೂ ಓದಿ: ದೆಹಲಿಯ ರೋಹಿಣಿಯಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿತ – ಹಲವರು ಸಿಲುಕಿರುವ ಶಂಕೆ

