ನವದೆಹಲಿ/ವಾಷಿಂಗ್ಟನ್: ಇರಾನ್(Iran) ವಿರುದ್ಧ ಅಮೆರಿಕ ಹೇರಲು ಉದ್ದೇಶಿಸಿರುವ ನೂತನ ಆರ್ಥಿಕ ನಿರ್ಬಂಧಗಳು ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಇರಾನ್ ಜೊತೆಗಿನ ವ್ಯಾಪಾರ ವಹಿವಾಟನ್ನು ಸ್ಥಗಿತಗೊಳಿಸಿರುವ ನಿರ್ಧಾರವು ಭಾರತದ ರಫ್ತು (Export) ಮೇಲೆ ಭಾರೀ ಪರಿಣಾಮ ಬೀಳಲಿದೆ.
ಇತ್ತೀಚಿನ ವರ್ಷಗಳಲ್ಲಿ ದುಬೈ(Dubai) ಬಂದರಿನ ಮೂಲಕವೇ ಹೆಚ್ಚಾಗಿ ಸಾಗಣೆಯಾಗುತ್ತಿದ್ದ ಭಾರತದ ಅಕ್ಕಿ, ಚಹಾ ಮತ್ತು ಔಷಧಗಳ ರಫ್ತಿಗೆ ಇದರಿಂದ ಭಾರೀ ಹಿನ್ನಡೆಯಾಗುವ ಸಾಧ್ಯತೆಯಿದೆ.
ಒಂದು ಕಾಲದಲ್ಲಿ ಇರಾನ್‌ನ ಅಗ್ರ ಐದು ವ್ಯಾಪಾರ ಪಾಲುದಾರರಲ್ಲಿ ಭಾರತವೂ ಒಂದಾಗಿತ್ತು. 2018 -19 ರಲ್ಲಿ 17 ಶತಕೋಟಿ ಡಾಲರ್‌ನಷ್ಟಿದ್ದ ದ್ವಿಪಕ್ಷೀಯ ವ್ಯಾಪಾರವು ಈಗ ಶೇ. 90 ಕ್ಕಿಂತ ಹೆಚ್ಚು ಕುಸಿದಿದ್ದು, ಪ್ರಸ್ತುತ ಮಾನವೀಯ ನೆಲೆಯಲ್ಲಿ ವಿನಾಯಿತಿ ಪಡೆದ ಸರಕುಗಳಿಗೆ ಮಾತ್ರ ಸೀಮಿತವಾಗಿದೆ.
ಡೊನಾಲ್ಡ್ ಟ್ರಂಪ್ ಘೋಷಿಸಲಿರುವ ಎಕನಾಮಿಕ್ ಡಿ-ಡೇ (Economic D-Day) ಯೋಜನೆಯು ಈಗಾಗಲೇ ಬ್ಯಾಂಕಿಂಗ್ ಎಚ್ಚರಿಕೆ ಮತ್ತು ಶಿಪ್ಪಿಂಗ್ ನಿರ್ಬಂಧಗಳಿಂದ ನಲುಗಿರುವ ವ್ಯಾಪಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಬಹುದು ಎಂದು ರಫ್ತುದಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಅಮೆರಿಕವು ಎಚ್ಚರಿಕೆ ನೀಡಿರುವ ದ್ವಿತೀಯ ಹಂತದ ನಿರ್ಬಂಧಗಳಿಂದ (Secondary Sanctions) ಭಾರತದ ಮೇಲೆ ಯಾವುದೇ ನೇರ ಪರಿಣಾಮ ಬೀರಲಿದೆಯೇ ಎಂಬುದು ಸದ್ಯಕ್ಕೆ ಸ್ಪಷ್ಟವಾಗಿಲ್ಲ. ಈ ನಿರ್ಬಂಧಗಳು ಪ್ರಮುಖವಾಗಿ ಡಿಜಿಟಲ್ ಆಸ್ತಿಗಳು, ತಂತ್ರಜ್ಞಾನ, ಚಿನ್ನ, ವಿಮಾನಯಾನ ಮತ್ತು ಶಿಪ್ಪಿಂಗ್ (ಸರಕು ಸಾಗಣೆ) ಎಂಬ ಐದು ಕ್ಷೇತ್ರಗಳನ್ನು ಒಳಗೊಂಡಿವೆ.
ಯುಎಇ ಕಳೆದ ವಾರ ಇರಾನ್ ಜೊತೆಗಿನ ಎಲ್ಲಾ ವ್ಯಾಪಾರ ಚಟುವಟಿಕೆಗಳು, ವಿನಿಮಯಗಳು ಮತ್ತು ಹಣಕಾಸು ವಹಿವಾಟುಗಳನ್ನು ಮುಂದಿನ ಸೂಚನೆ ಬರುವವರೆಗೂ ಅಮಾನತುಗೊಳಿಸಿದೆ.
ಸಾಂಪ್ರದಾಯಿಕವಾಗಿ ಯುಎಇ ಮೂಲಕ ನಡೆಯುತ್ತಿದ್ದ ವಹಿವಾಟು ಹಾಗೂ ಪಾವತಿ ವ್ಯವಸ್ಥೆಗಳಿಗೆ ಈಗ ಟರ್ಕಿಯಂತಹ ಪರ್ಯಾಯ ದೇಶಗಳ ಮೊರೆಹೋಗುವ ಅನಿವಾರ್ಯತೆ ಎದುರಾಗಿದೆ ಎಂದು ‘ಇಂಡಿಯನ್ ರೈಸ್ ಎಕ್ಸ್‌ಪೋರ್ಟರ್ಸ್ ಫೆಡರೇಶನ್’ ಉಪಾಧ್ಯಕ್ಷ ದೇವ್ ಗರ್ಗ್ ಹೇಳಿದ್ದಾರೆ.
ಭಾರತದ ಮೇಲೆ ಪರಿಣಾಮ ಏನು?
2026ರ ಮೊದಲಾರ್ಧದಲ್ಲಿ ಭಾರತವು ಇರಾನ್‌ಗೆ 383.11 ಮಿಲಿಯನ್ ಡಾಲರ್ ಮೌಲ್ಯದ ಅಕ್ಕಿಯನ್ನು ರಫ್ತು ಮಾಡಿದೆ. ಈ ಮಾರ್ಗದಲ್ಲಿ ಅಡಚಣೆ ಉಂಟಾದರೆ ಉತ್ತರ ಭಾರತದ ಬಾಸ್ಮತಿ ಅಕ್ಕಿ ಗಿರಣಿಗಳು ಮತ್ತು ರಫ್ತುದಾರರ ಮೇಲೆ ತೀವ್ರ ಪರಿಣಾಮ ಬೀರಲಿದೆ.
ಭಾರತವು ಇರಾನ್‌ಗೆ 14.34 ಮಿಲಿಯನ್ ಡಾಲರ್ ಮೌಲ್ಯದ ಚಹಾವನ್ನು ರಫ್ತು ಮಾಡಿದೆ. ಹೆಚ್ಚಿನ ಪಾಲು ಯುಎಇ ಮೂಲಕವೇ ಹೋಗುತ್ತಿರುವುದರಿಂದ ಚಹಾ ಮಾರಾಟಕ್ಕೂ ಹೊಡೆತ ಬೀಳಲಿದೆ.
ಭಾರತ-ಇರಾನ್ ನೇರ ಸಾಗಣೆ ಹೆಚ್ಚಾದರೂ, ಪಾವತಿ ಸಮಸ್ಯೆಗಳು ಜಟಿಲವಾಗಬಹುದು. ಆಹಾರ ಮತ್ತು ಔಷಧ ಉತ್ಪನ್ನಗಳಿಗೆ ವಿನಾಯಿತಿ ಸಿಕ್ಕರೂ ಸರಕು ಸಾಗಣೆ ವೆಚ್ಚ (Freight), ವಿಮೆ ಮತ್ತು ಹಣಕಾಸು ವರ್ಗಾವಣೆ ವೆಚ್ಚಗಳು ಗಣನೀಯವಾಗಿ ಹೆಚ್ಚಾಗುವ ಸಾಧ್ಯತೆಯಿದೆ.
2019ರ ಆರ್ಥಿಕ ವರ್ಷದಲ್ಲಿ 12.4 ಶತಕೋಟಿ ಡಾಲರ್ ಮೌಲ್ಯದ ಕಚ್ಚಾ ತೈಲವೂ ಸೇರಿದಂತೆ ಒಟ್ಟು 13.5 ಶತಕೋಟಿ ಡಾಲರ್‌ನಷ್ಟಿದ್ದ ಆಮದು ಪ್ರಮಾಣವು, 2026ರ ಆರ್ಥಿಕ ವರ್ಷದಲ್ಲಿ 375 ಮಿಲಿಯನ್ ಡಾಲರ್‌ಗಿಂತಲೂ ಕಡಿಮೆಗೆ ಇಳಿದಿದೆ.
ಈ ಅವಧಿಯಲ್ಲಿ 138 ಮಿಲಿಯನ್ ಡಾಲರ್ ಮೌಲ್ಯದ ಡಾಂಬರು (ಬಿಟುಮೆನ್) ಅತಿ ಹೆಚ್ಚು ಆಮದಾದ ವಸ್ತುವಾಗಿದ್ದು, ನಂತರದ ಸ್ಥಾನಗಳಲ್ಲಿ ಸೇಬು (41 ಮಿಲಿಯನ್ ಡಾಲರ್), ಬಾದಾಮಿ (36 ಮಿಲಿಯನ್ ಡಾಲರ್) ಮತ್ತು ಖರ್ಜೂರ (35 ಮಿಲಿಯನ್ ಡಾಲರ್) ಇವೆ.
2026ರ ಮೊದಲ ಆರು ತಿಂಗಳಲ್ಲಿ ಇರಾನ್‌ನಿಂದ ಭಾರತಕ್ಕೆ ಪ್ರಮುಖವಾಗಿ 707 ಮಿಲಿಯನ್ ಡಾಲರ್ ಮೌಲ್ಯದ ಕಚ್ಚಾ ತೈಲ ಆಮದಾಗಿತ್ತು. ಉಳಿದಂತೆ ಅಲ್ಪಪ್ರಮಾಣದಲ್ಲಿ ಎಲ್‌ಪಿಜಿ, ಸೇಬು, ಖರ್ಜೂರ, ಬಾದಾಮಿ ಆಮದಾಗಿದ್ದವು. ಆದರೆ ಅಮೆರಿಕದ ವಿನಾಯಿತಿ ಅಂತ್ಯಗೊಂಡರೆ ಕಚ್ಚಾ ತೈಲ ಆಮದನ್ನು ಮುಂದುವರಿಸುವುದು ಕೂಡ ಭಾರತಕ್ಕೆ ಕಷ್ಟಕರವಾಗಲಿದೆ.
