ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ: ವಿಜಯೇಂದ್ರ ಸ್ಪಷ್ಟನೆ

Public TV
1 Min Read
Vijayendra NOTA 3

ಬೆಂಗಳೂರು: ತಮ್ಮ ವಿರುದ್ಧ ಕೇಳಿಬಂದ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ ಎಂದು ಸಿಎಂ ಬಿ.ಎಸ್ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ತಮ್ಮ ಮೇಲೆ ಆಡಳಿತ ಮತ್ತು ವರ್ಗಾವಣೆ ವಿಚಾರವಾಗಿ ಹಸ್ತಕ್ಷೇಪ ಮಾಡಿರುವ ಆರೋಪದ ಬಗ್ಗೆ ವಿಜಯೇಂದ್ರ ಎರಡು ಪುಟದ ಪತ್ರದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಕೆಲ ಪಟ್ಟಭದ್ರ ಹಿತಾಸಕ್ತ ಶಕ್ತಿಗಳು ನನ್ನ ವಿರುದ್ಧ ಷಢ್ಯಂತ್ರ ರೂಪಿಸಿವೆ. ಆದರೆ ನನಗೆ ರಾಜಕೀಯದಲ್ಲಿ ಮೂಗು ತೂರಿಸುವ ಅನಿವಾರ್ಯತೆ ಇಲ್ಲ ಎಂದಿದ್ದಾರೆ. ನನ್ನ ಬಗ್ಗೆ ಕಪೋಲಕಲ್ಪಿತ ಸುದ್ದಿಗಳನ್ನು ಮಾಡಲಾಗುತ್ತಿದೆ. ನಾನು ಯಾವುದೇ ವರ್ಗಾವಣೆಯಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ. ನನ್ನನ್ನು ನಾನು ಪಕ್ಷ ಕಟ್ಟುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ. ಕೆಲವರು ಹತಾಷೆ ಮತ್ತು ಅಸೂಯೆಯಿಂದ ನನ್ನ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡ್ತಿದ್ದಾರೆ ಎಂದು ಆರೋಪವನ್ನು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ:ಕೋತಿ ತಾನು ತಿಂದು ಮೇಕೆ ಮೂತಿಗೆ ಒರೆಸಿತು: ಎಚ್‍ಡಿಕೆಗೆ ಸಿಎಂ ಪುತ್ರ ಟಾಂಗ್

vijayendra

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರು ಭಾಗದ ಜನರ ಪ್ರೀತಿಗೆ ತಲೆಬಾಗಿ ಸಾರ್ವಜನಿಕ ಜೀವನಕ್ಕೆ ಬರಬೇಕಾಯ್ತು. ನನ್ನ ಏಳಿಗೆ ಸಹಿಸಲಾಗದೆ ಕೆಲವರಿಂದ ಪಿತೂರಿ ನಡೆಯುತ್ತಿದೆ. ಪಕ್ಷಕ್ಕೆ ಮುಜುಗರ ಉಂಟು ಮಾಡಲು ಕೆಲವರಿಂದ ಸಂಚು ರೂಪಿಸಲಾಗುತ್ತಿದೆ. ಇದರಿಂದ ನಾನಾಗಲೀ, ಪಕ್ಷವಾಗಲೀ ಎದೆಗುಂದುವ ಮಾತೇ ಇಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ: ಹೆಚ್‍ಡಿಕೆ

ಈ ಹಿಂದೆ ಮಾಜಿ ಸಿಎಂ ಕುಮಾರಸ್ವಾಮಿ ಅವರು ನೇರವಾಗಿಯೇ ವಿಜಯೇಂದ್ರ ಬಗ್ಗೆ ಗಂಭೀರ ಆರೋಪ ಮಾಡಿ ಬಿಎಸ್‍ವೈ ಪುತ್ರ ವರ್ಗಾವಣೆ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು. ಅಷ್ಟೇ ಅಲ್ಲದೇ ಹಲವು ಬಾರಿ ಯಡಿಯೂರಪ್ಪನವರ ಜೊತೆಗೆ ವಿಜಯೇಂದ್ರ ಕಾಣಿಸಿಕೊಳ್ಳುತ್ತಿದ್ದರು. ಈ ವಿಚಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗುತ್ತಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ದಿನಗಳಿಂದ ವಿಜಯೇಂದ್ರ ಯಡಿಯೂರಪ್ಪನವರಿಂದ ಅಂತರ ಕಾಯ್ದುಕೊಂಡಿದ್ದಾರೆ.

vijayendra 1

Share This Article
Leave a Comment

Leave a Reply

Your email address will not be published. Required fields are marked *