Wednesday, 19th February 2020

Recent News

ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ: ಹೆಚ್‍ಡಿಕೆ

– ನಾನೂ ಸಾವಿರ ಟ್ವೀಟ್ ಮಾಡಬಲ್ಲೆ

ಚಿಕ್ಕಮಗಳೂರು: ಯಡಿಯೂರಪ್ಪನವರೇ ನಿಮ್ಮ ಮಕ್ಕಳನ್ನು ವ್ಯಾಪಾರಕ್ಕೆ ಬಿಡಬೇಡಿ, ಹದ್ದುಬಸ್ತಿನಲ್ಲಿಟ್ಟುಕೊಳ್ಳಿ, ನಾನೂ ಸಾವಿರ ಟ್ವೀಟ್ ಮಾಡಬಲ್ಲೆ ಎಂದು ಪರೋಕ್ಷವಾಗಿ ಸಂಸದ ಹಾಗೂ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ವಿರುದ್ಧ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ಯಲಹಂಕಗೆ ವರ್ಗಾವಣೆ ಮಾಡಿರುವ ರಘುಮೂರ್ತಿ ಎಂಬ ವ್ಯಕ್ತಿ ನನ್ನ ಬಳಿಯು ಬಂದಿದ್ದ. ಮಿಡೀಯೇಟ್ ಮಾಡಿಕೊಂಡು ನನ್ನ ಬಳಿ ಬಂದಿದ್ದ, ನಾನು ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಹೀಗಾಗಿ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ, ವ್ಯಾಪಾರ ಮಾಡಲು ಬಿಡಬೇಡಿ. ವ್ಯಾಪಾರ ಮಾಡಲು ಬಿಟ್ಟರೆ 2010ರಲ್ಲಿ ಜೈಲಿಗೆ ಹೋಗಿ ಬಂದಂತೆ ಮತ್ತೆ ಅದೇ ಸ್ಥಾನಕ್ಕೆ ಹೋಗಬೇಕಾಗುತ್ತದೆ ಎಂದು ಬಿಎಸ್‍ವೈ ಹಾಗೂ ಪುತ್ರ ವಿಜಯೇಂದ್ರ ವಿರುದ್ಧ ಕಿಡಿ ಕಾರಿದರು.

ಟ್ವೀಟ್ ಮಾಡೋದು ಸುಲಭ, ನಾನೂ ಸಹ ಸಾವಿರ ಟ್ವೀಟ್ ಮಾಡಬಲ್ಲೆ ಅದು ಮುಖ್ಯವಲ್ಲ. ನಿಮ್ಮ ಕ್ರಿಯೆ ಕಡೆ ಗಮನ ಕೊಡಿ. ರಘುಪತಿ ಎಂಬವನನ್ನು ವರ್ಗಾವಣೆ ಮಾಡಿಕೊಂಡು ಗೃಹ ಕಚೇರಿಯಲ್ಲಿ ಮಾರ್ಕೆಟ್ ದಂಧೆ ಮಾಡುತ್ತಿದ್ದೀರಾ? ಆ ದಂಧೆನಾ ನನ್ನ ಮಗನ ಕೈಲೂ ನಾನು ಮಾಡಿಸಿಲ್ಲ. ಸರ್ಕಾರ ಬೀಳಿಸೋಕೆ ನಿಮ್ಮ ಮಗ ಸಮಾಜಘಾತುಕ ಶಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಲೀಡ್ ತೋರಿಸಿದ್ದರು ಎಂದು ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾನು ಯಾವ ರೀತಿ ಬದುಕಬೇಕು ಎಂಬುದನ್ನು ನಿಮ್ಮಿಂದ ಕಲಿಯಬೇಕಿಲ್ಲ. ಮರ್ಯಾದೆಗೆ ಬದುಕಿರೋರು ನಾವು, ನಿಮ್ಮ ರೀತಿಯಲ್ಲಿ ಬದುಕಿಲ್ಲ. ಟ್ವೀಟ್ ಮಾಡೋದು ಬಿಟ್ಟು ಮರ್ಯಾದೆಯಿಂದ ಬದುಕಲು ಕಲಿಯಿರಿ. ನಿಮಗೆ ಆತ್ಮಸಾಕ್ಷಿ ಇದ್ದರೆ, ಯಾವ ರೀತಿ ನಡೆದುಕೊಳ್ಳುತ್ತಿದ್ದೀರಿ ಎಂದು ನಿಮ್ಮ ಹೃದಯಕ್ಕೆ ಪ್ರಶ್ನೆ ಹಾಕಿಕೊಳ್ಳಿ. ಬಿಡಿಎ ಆಯುಕ್ತರನ್ನು ವರ್ಗಾಯಿಸಿಕೊಂಡು ಎಷ್ಟು ಹಣ ಪಡೆದಿದ್ದೀರಿ ಬಹಿರಂಗಪಡಿಸಿ ಎಂದು ಪ್ರಶ್ನೆ ಮಾಡಿದರು.

ವಿಜಯೇಂದ್ರ ಟ್ವೀಟ್ ಮಾಡಿದ್ದೇನು?
ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಹರಿಹಾಯ್ದು, ವರ್ಗಾವಣೆ ದಂಧೆ ಮಾಡಲು ಯಡಿಯೂರಪ್ಪನವರು ತಮ್ಮ ಮಗನನ್ನೇ ಬಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಇದಕ್ಕೆ ಬಿಎಸ್‍ವೈ ಪುತ್ರ ಬಿ.ವೈ.ವಿಜಯೇಂದ್ರ ಅವರು ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿ, ಕಮಿಷನ್ ದಂಧೆ, ವರ್ಗಾವಣೆ ದಂಧೆ, ನೇಮಕಾತಿಗಳ ದಂಧೆಗಳ ಜನಕರು ಹಾಗೂ ಗುತ್ತಿಗೆದಾರರು ನೀವೆಂಬುದು ಇಡೀ ರಾಜ್ಯಕ್ಕೆ ತಿಳಿದಿದೆ ಕುಮಾರಸ್ವಾಮಿ ಅವರೇ ಎಂದು ಕಿಡಿಕಾರಿದ್ದರು.

‘ಕೋತಿ ತಾನು ತಿಂದು ಮೇಕೆ ಬಾಯಿಗೆ ಒರೆಸಿದಂತಿದೆ ನಿಮ್ಮ ಮಾತುಗಳು’ ಎಂದು ಕಟುವಾಗಿ ಟೀಕಿಸಿದ್ದರು. ಸಿಬಿಐ ತನಿಖೆಗೆ ಹೆದರಿ ಹತಾಶ ಹೇಳಿಕೆ ನೀಡುತ್ತಿದ್ದೀರಿ, ವಿಷಯಾಂತರಗೊಳಿಸಿ ಜನತೆಯ ದಿಕ್ಕು ತಪ್ಪಿಸುವ ಕುತಂತ್ರದ ಮಾತು ನಿಲ್ಲಿಸಿ ಎಂದು ಖಾರವಾಗಿ ಟ್ವೀಟ್ ಮಾಡಿದ್ದರು. ಇದಕ್ಕೆ ಇದೀಗ ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ಬಿಎಸ್‍ವೈ ಅವರೇ ನಿಮ್ಮ ಮಕ್ಕಳನ್ನು ಹದ್ದುಬಸ್ತಿನಲ್ಲಿಟ್ಟುಕೊಳ್ಳಿ ಎಂದು ಎಚ್ಚರಿಸಿದ್ದಾರೆ.

Leave a Reply

Your email address will not be published. Required fields are marked *