ಮುಂಬೈ: ರಾಜಸ್ಥಾನ ರಾಯಲ್ಸ್ ತಂಡದ 15 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Sooryavanshi) ವೆಸ್ಟ್ ಇಂಡೀಸ್‌ನ ದಿಗ್ಗಜ ಆಟಗಾರ ಕ್ರಿಸ್ ಗೇಲ್ (Chris Gayle) ಅವರ ಐತಿಹಾಸಿಕ ಟಿ20 ದಾಖಲೆಗಳನ್ನು ಮುರಿಯುವ ಗುರಿ ಹೊಂದಿದ್ದಾರೆ ಮತ್ತು ಪ್ರಸ್ತುತ ಐಪಿಎಲ್‌ನಲ್ಲಿ (IPL) ಅವರ ದಾಖಲೆಗೆ ಹತ್ತಿರವಾಗಿದ್ದಾರೆ.
ಇತ್ತೀಚೆಗೆ ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ (Kevin Pietersen) ಅವರ ಯೂಟ್ಯೂಬ್ ಶೋನಲ್ಲಿ ಭಾಗವಹಿಸಿದ್ದ ವೈಭವ್ ಟಿ20 ಕ್ರಿಕೆಟ್‌ನಲ್ಲಿ ದ್ವಿಶತಕ (200 ರನ್) ಬಾರಿಸುವ ತನ್ನ ದೊಡ್ಡ ಕನಸನ್ನು ಬಿಚ್ಚಿಟ್ಟಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕ್ರಿಸ್ ಗೇಲ್ ಬಾರಿಸಿರುವ ಅಜೇಯ 175 ರನ್‌ಗಳ ಗರಿಷ್ಠ ವೈಯಕ್ತಿಕ ಸ್ಕೋರ್ ದಾಖಲೆಯನ್ನು ಮುರಿಯುವುದೇ ನನ್ನ ಮುಂದಿನ ಇಂಗಿತ ಎಂದು ವೈಭವ್ ಸೂರ್ಯವಂಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Vaibhav Sooryavanshi Wants To Score 200 Runs In T20! 🤯🔥
Chris Gayle Holds The Record At 175! 😅 pic.twitter.com/liNldqDn0k
— The Switch | Kevin Pietersen (@kptheswitch) May 25, 2026
ಆರ್‌ಸಿಬಿ ಪರ ಆಡಿದ್ದ ಗೇಲ್ 2013 ರಲ್ಲಿ ಪುಣೆ ವಾರಿಯರ್ಸ್ ವಿರುದ್ಧ ಸ್ಫೋಟಕ 175 ರನ್(66 ಎಸೆತ, 13 ಬೌಂಡರಿ, 17 ಸಿಕ್ಸ್) ಚಚ್ಚಿದ್ದರು. ಇದು ಟಿ20 ಯಲ್ಲಿ ಆಟಗಾರನೊಬ್ಬನ ಅತ್ಯಧಿಕ ರನ್ ಆಗಿದೆ.
ಒಂದು ಐಪಿಎಲ್ ಸೀಸನ್‌ನಲ್ಲಿ ಅತಿ ಹೆಚ್ಚು 59 ಸಿಕ್ಸರ್ ಸಿಡಿಸಿದ ದಾಖಲೆ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ವೈಭವ್ ಈಗಾಗಲೇ 53 ಸಿಕ್ಸರ್‌ಗಳನ್ನು ಸಿಡಿಸಿದ್ದು, ಗೇಲ್ ಅವರ ಈ ಅಸಾಧ್ಯ ದಾಖಲೆಯನ್ನು ಮುರಿಯುವ ತೀರಾ ಹತ್ತಿರದಲ್ಲಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ವೈಭವ್ ಸೂರ್ಯವಂಶಿ, ಟಿ20 ಟೂರ್ನಿಯೊಂದರಲ್ಲಿ 500 ರನ್ ಪೂರೈಸಿದ ಅತ್ಯಂತ ಕಿರಿಯ ಆಟಗಾರ ಹಾಗೂ 20 ವರ್ಷ ತುಂಬುವ ಮುನ್ನವೇ ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್ ಎಂಬ ಇತಿಹಾಸ ಬರೆದಿದ್ದಾರೆ. ಇದನ್ನೂ ಓದಿ: ಲಕ್ನೋ ಸೋತರೂ ಗೆದ್ದ ಅರ್ಜುನ್ – ಚೊಚ್ಚಲ ಪಂದ್ಯದ ಪ್ರದರ್ಶನಕ್ಕೆ ತೆಂಡೂಲ್ಕರ್ ಭಾವುಕ ಪೋಸ್ಟ್

ಸಿಗುತ್ತಾ 3 ಪಂದ್ಯಗಳ ಅವಕಾಶ?
ಹಾಲಿ ಸೀಸನ್‌ನ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್, 4ನೇ ತಂಡವಾಗಿ ಅಧಿಕೃತವಾಗಿ ಪ್ಲೇಆಫ್ (Playoffs) ಪ್ರವೇಶಿಸಿದೆ. ಬುಧವಾರ ನಡೆಯಲಿರುವ ಎಲಿಮಿನೇಟರ್ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಾಡಲಿದೆ.
ಒಂದು ವೇಳೆ ರಾಜಸ್ಥಾನ ತಂಡವು ಹೈದರಾಬಾದ್ ವಿರುದ್ಧ ಗೆದ್ದು ಮುನ್ನಡೆದರೆ, ಫೈನಲ್ ತಲುಪಲು ಕ್ವಾಲಿಫೈಯರ್-2 ಪಂದ್ಯವನ್ನು ಆಡಬೇಕಾಗುತ್ತದೆ. ಎಲ್ಲವೂ ರಾಜಸ್ಥಾನ ತಂಡದ ಯೋಜನೆಯಂತೆ ನಡೆದರೆ ವೈಭವ್ ಸೂರ್ಯವಂಶಿಗೆ ಆಡಲು ಇನ್ನೂ ಗರಿಷ್ಠ 3 ಪಂದ್ಯಗಳು ಸಿಗಲಿವೆ. ಗೇಲ್ ಸಿಕ್ಸರ್ ದಾಖಲೆ ಮುರಿಯಲು 6 ಸಿಕ್ಸ್‌ಗಳ ಅಗತ್ಯವಿದ್ದು ,ಈ ಆವೃತ್ತಿಯಲ್ಲೇ ಕ್ರಿಸ್ ಗೇಲ್ ಅವರ 59 ಸಿಕ್ಸರ್‌ಗಳ ಮಹಾ ದಾಖಲೆ ಇತಿಹಾಸದ ಪುಟ ಸೇರುತ್ತಾ ಎಂಬ ಕುತುಹೂಲ ಹೆಚ್ಚಾಗಿದೆ. ಇದನ್ನೂ ಓದಿ: ಈ ಬಾರಿ SRHಗೆ ಚಾಂಪಿಯನ್ ಪಟ್ಟ – ಭವಿಷ್ಯ ನುಡಿದ ಅಕ್ಷರ್ ಪಟೇಲ್
