– ಇರಾನ್ ಆದಾಯ ಮೂಲಗಳನ್ನು ಕಡಿಗೊಳಿಸಲು ಅಮೆರಿಕ ಪ್ಲ್ಯಾನ್
ಟೆಹ್ರಾನ್/ವಾಷಿಂಗ್ಟನ್: ಇರಾನ್‌ನಿಂದ ಪೆಟ್ರೋಲಿಯಂ ಮತ್ತು ಪೆಟ್ರೋಕೆಮಿಕಲ್ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದ್ದಕ್ಕಾಗಿ ಭಾರತ ಮೂಲದ 4 ತೈಲ ಕಂಪನಿಗಳ ಮೇಲೆ (India-based companies) ಅಮೆರಿಕ ನಿರ್ಬಂಧ ಹೇರಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಇರಾನ್‌ನ ತೈಲ ಮತ್ತು ಪೆಟ್ರೋಕೆಮಿಕಲ್ ವ್ಯಾಪಾರದ (Iran Oil Trade) ಹಿನ್ನೆಲೆಯಲ್ಲಿ ಭಾರತ ಮೂಲದ 4 ಕಂಪನಿಗಳು ಹಾಗೂ ಮೂವರು ಭಾರತೀಯ ವ್ಯಕ್ತಿಗಳ ವಿರುದ್ಧ ಅಮೆರಿಕ ನಿರ್ಬಂಧ ವಿಧಿಸಿದೆ.
ಇರಾನ್‌ನ ಜಾಗತಿಕ ಆದಾಯದ ಮೂಲಗಳನ್ನ ನಿರ್ಬಂಧಿಸುವ, 119 ದಶಲಕ್ಷ ಡಾಲರ್ ವ್ಯವಹಾರ ತಪ್ಪಿಸುವ ಪ್ರಯತ್ನದ ಭಾಗ ಇದಾಗಿದೆ. ಅದಕ್ಕಾಗಿ ʻಆಪರೇಷನ್ ಎಕನಾಮಿಕ್ ಔಟ್‌ಕಾಸ್ಟ್ʼ (Operation Economic Outcast) ಕಾರ್ಯಾಚರಣೆ ಅಡಿಯಲ್ಲಿ ನಿರ್ಬಂಧಗಳನ್ನ ಘೋಷಿಸಲಾಗಿದೆ. ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ನಿರ್ಬಂಧವನ್ನ ಘೋಷಿಸಿದ್ದಾರೆ.

ಅಮೆರಿಕದ ಖಜಾನೆ ಇಲಾಖೆ (US Treasury) ಪ್ರಕಾರ, ಭಾರತ ಮೂಲದ ಸದಾಶಿವ ಓವರಸೀಸ್ ಲಿಮಿಟೆಡ್ (Sadashiva Overseas Limited) ಸಂಸ್ಥೆಯು ಫೆಬ್ರವರಿ 2024ರಿಂದ ಜೂನ್ 2025ರ ಅವಧಿಯಲ್ಲಿ ಸುಮಾರು 69 ದಶಲಕ್ಷ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನ ಆಮದು ಮಾಡಿಕೊಂಡಿದೆ. ಈ ಸಾಗಣೆಗಳಲ್ಲಿ ಕೆಲವು ಈಗಾಗಲೇ ಅಮೆರಿಕದಿಂದ ನಿರ್ಬಂಧಕ್ಕೊಳಗಾಗಿರುವ ʻಬೊಂಜೋರ್ ಕಮಾಡಿಟಿ FZEʼ ಸಂಸ್ಥೆಯೊಂದಿಗೆ ಸಂಪರ್ಕ ಹೊಂದಿದ್ದವು ಎಂದು ಅಮೆರಿಕ ಆರೋಪಿಸಿದೆ.
ಇದೇ ವೇಳೆ ಪಿಪಿ ಸಾಫ್ಟ್‌ಟೆಕ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ರಾಕೃತೀಸ್ ಇನ್ಫ್ರಾ ಇಂಪೆಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳು ತಲಾ ಸುಮಾರು 25 ದಶಲಕ್ಷ ಡಾಲರ್ ಮೌಲ್ಯದ ಇರಾನ್ ಮೂಲದ ಪೆಟ್ರೋಲಿಯಂ ಉತ್ಪನ್ನಗಳನ್ನ ಆಮದು ಮಾಡಿಕೊಂಡಿವೆ ಎಂದು ಅಮೆರಿಕ ಹೇಳಿದೆ. ಈ ಮೂರು ಕಂಪನಿಗಳಿಗೆ ಸಂಬಂಧಿಸಿದ ಆಮದುಗಳ ಒಟ್ಟು ಮೌಲ್ಯ ಸುಮಾರು 119 ಮಿಲಿಯನ್ ಡಾಲರ್ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ಪೋರ್ಟೀಸ್ ಪಾರ್ಟ್‌ನರ್ಸ್ LLP ಎಂಬ ಭಾರತ ಮೂಲದ ಕಸ್ಟಮ್ಸ್ ಬ್ರೋಕರ್ ಸಂಸ್ಥೆಯ ಮೇಲೂ ಅಮೆರಿಕ ನಿರ್ಬಂಧಿಸಿದೆ. ಇರಾನ್ ಮೂಲದ ಪೆಟ್ರೋಕೆಮಿಕಲ್ ಉತ್ಪನ್ನಗಳನ್ನ ಭಾರತಕ್ಕೆ ತರಲು ನಡೆದ ಹಲವು ಸಾಗಣೆಗಳಿಗೆ ಈ ಸಂಸ್ಥೆ ನೆರವು ನೀಡಿದೆ ಎಂದು ಅಮೆರಿಕ ಆರೋಪಿಸಿದೆ.
ಮೂವರು ಭಾರತೀಯರ ಮೇಲೂ ನಿರ್ಬಂಧ
ಕಂಪನಿಗಳ ಜೊತೆಗೆ ಮೂವರು ಭಾರತೀಯರ ಮೇಲೂ ಅಮೆರಿಕ ಕ್ರಮ ಕೈಗೊಂಡಿದೆ. PP Softtech ಸಂಸ್ಥೆಯ ನಿರ್ದೇಶಕ ಪ್ರಶಾಂತ್ ಗರ್ಗ್ ಅವರನ್ನು ನಿರ್ಬಂಧಿಸಲಾಗಿದ್ದು, Portease Partnersಗೆ ಸಂಬಂಧಿಸಿದ ಇಂದ್ರಿಸ್ಮಿಯಾ ಅಶರಫ್ಮಿಯಾ ಶೇಖ್ ಮತ್ತು ಹರೀಶ್ ರಾಮಚಂದ್ರ ರಂಗಿ ಅವರ ಮೇಲೂ ನಿರ್ಬಂಧ ಹೇರಲಾಗಿದೆ.
