ಬೈರೂತ್: ಇರಾನ್-ಅಮೆರಿಕದ ಶಾಂತಿ ಒಪ್ಪಂದದಲ್ಲಿ (US Iran Peace Deal) ಲೆಬನಾನ್ ಮೇಲಿನ ದಾಳಿ ನಿಲ್ಲಿಸುವ ಅಂಶ ಪ್ರಸ್ತಾಪಿಸಿದ್ದರೂ ಇಸ್ರೇಲ್ ಪರಾಕ್ರಮ ಮುಂದುವರಿಸಿದೆ. ಶುಕ್ರವಾರ (ಇಂದು) ಮುಂಜಾನೆ ದಕ್ಷಿಣ ಲೆಬನಾನ್‌ನ ಹಲವು ಪ್ರದೇಶಗಳ ಮೇಲೆ ಇಸ್ರೇಲ್ ವೈಮಾನಿಕ ದಾಳಿ (Israeli Strikes) ನಡೆಸಿದೆ. ಇದರಲ್ಲಿ ಕನಿಷ್ಠ 16 ಮಂದಿ ಸಾವನ್ನಪ್ಪಿದ್ದಾರೆ.
ಲೆಬನಾನ್ (Lebanon) ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ. ಇಸ್ರೇಲ್‌ನ ಈ ಮಿಲಿಟರಿ ಕಾರ್ಯಾಚರಣೆ ಇನ್ನೂ ಕೂಡ ಮುಂದುವರೆದಿದೆ ಎಂದು ಆಕ್ರೋಶ ಹೊರಹಾಕಿದೆ. ಇದನ್ನೂ ಓದಿ: ನೆತನ್ಯಾಹು ಯುದ್ಧ ಬಯಸುತ್ತಾರೆ; ಶಾಂತಿ ಒಪ್ಪಂದದಿಂದ ಅಮೆರಿಕ – ಇಸ್ರೇಲ್ ಮಧ್ಯೆ ಬಿರುಕು!

ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದದ ಪ್ರಕಾರ, ಲೆಬನಾನ್ ಸೇರಿದಂತೆ ಎಲ್ಲಾ ಕಡೆ ತಕ್ಷಣವೇ ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸಬೇಕು. ಜೊತೆಗೆ ಲೆಬನಾನ್ ದೇಶದ ಸಾರ್ವಭೌಮತ್ವ ಹಾಗೂ ಪ್ರಾದೇಶಿಕ ಸಮಗ್ರತೆ ಗೌರವಿಸಬೇಕು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಇದೀಗ ಇಸ್ರೇಲ್ ಮತ್ತೆ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿದ್ದು, ಶಾಂತಿ ಒಪ್ಪಂದ ಮುರಿದು ಬೀಳುತ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ಲೆಬನಾನ್ ಮೇಲಿನ ದಾಳಿಯನ್ನು ನಿಲ್ಲಿಸಲು ಸ್ಪಷ್ಟವಾಗಿ ನಿರಾಕರಿಸಿದ್ದು, ಎಲ್ಲಿತನಕ ಇಸ್ರೇಲ್‌ಗೆ ಹೆಜ್ಬುಲ್ಲಾ ಭೀತಿ ಇರುತ್ತೋ ಅಲ್ಲಿಯವರೆಗೆ ಲೆಬನಾನ್ ಮೇಲೆ ದಾಳಿ ಮುಂದುವರಿಯಲಿದೆ ಎಂದು ಪಟ್ಟು ಎಚ್ಚರಿಕೆ ಕೊಟ್ಟಿದ್ದಾರೆ. ಇದನ್ನೂ ಓದಿ: ನ್ಯೂಯಾರ್ಕ್ ಟೈಮ್ಸ್ ಸ್ಕ್ವೇರ್‌ನಲ್ಲಿ ಗುಂಡಿನ ಸದ್ದು – ಅಪ್ರಾಪ್ತ ಅರೆಸ್ಟ್

ಈ ಉದ್ವಿಗ್ನತೆಯ ಕಾರಣದಿಂದಾಗಿ ಅಮೆರಿಕ ಮತ್ತು ಇರಾನ್ ಯುದ್ಧಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲು ಸ್ವಿಡ್ಜರ್ಲೆಂಡ್‌ನಲ್ಲಿ ನಡೆಯಬೇಕಿದ್ದ ಉಭಯ ದೇಶಗಳ ನಾಯಕರ ಮಾತುಕತೆ ಮುಂದೂಡಲಾಗಿದೆ. ಈ ಮಾತುಕತೆಯ ಮುಂದಾಳತ್ವ ವಹಿಸಬೇಕಿದ್ದ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಗುರುವಾರ ತಮ್ಮ ಸ್ವಿಟ್ಜರ್ಲೆಂಡ್ ಪ್ರವಾಸವನ್ನು ಮುಂದೂಡಿದ್ದಾರೆ.
