ವಾಷಿಂಗ್ಟನ್: ಮಧ್ಯಪ್ರಾಚ್ಯದಲ್ಲಿ ಸುದೀರ್ಘ ಕಾಲದಿಂದ ಸಂಘರ್ಷದಲ್ಲಿ ನಿರತವಾಗಿದ್ದ ಅಮೆರಿಕ ಮತ್ತು ಇರಾನ್, ಈಗ ಬಂದೂಕು ಕೆಳಗಿಳಿಸಿ ಶಾಂತಿ ಒಪ್ಪಂದ ಮಾಡಿಕೊಂಡಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trmup) ಮತ್ತು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಔಪಚಾರಿಕವಾಗಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ.
ಸದ್ಯ ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮಾಯವಾಗಿದ್ದು, ಶಾಂತಿ ವಾತಾವರಣ ನೆಲೆಸುತ್ತಿದೆ. ಆದ್ರೆ ಈ ಶಾಂತಿ ಒಪ್ಪಂದ (US Iran Peace Deal) ಅಮೆರಿಕ-ಇಸ್ರೇಲ್ ನಡುವೆಯೇ ಬಿರುಕು ಮೂಡಿಸಿದೆ. ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿ ಮಾಡಿದ್ದರೂ, ಅಂತಿಮ ಅನುಷ್ಠಾನಕ್ಕೆ 60 ದಿನಗಳ ಕಾಲಮಿತಿ ಇದೆ. ಹಾಗಾಗಿ ಅಂತಿಮ ಫಲಿತಾಂಶದ ಮೇಲೆ ಪ್ರಭಾವ ಬೀರಲು ಇಸ್ರೇಲ್ ಪ್ರಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಆಂತರಿಕ ಮೂಲಗಳ ಪ್ರಕಾರ, ಟ್ರಂಪ್ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು (Benjamin Netanyahu) ಅವರಲ್ಲಿ ತೀವ್ರ ಅಸಮಾಧಾನ ತರಿಸಿದೆ. ಹಾಗಾಗಿ ಒಂದು ಕಡೆ ಯುದ್ಧ ಅಂತ್ಯಗೊಳಿಸಿದ ಈ ಒಪ್ಪಂದ ಮತ್ತೊಂದೆಡೆ ಆಂತಕರಿಕ ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿದೆ.
ನೆತನ್ಯಾಹುಗೆ ಏಕೆ ಅಸಮಾಧಾನ?
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನ ಹೊಂದಿದ್ದು, ದಶಕಗಳಿಂದಲೂ ಇಸ್ರೇಲ್‌ನ ಭದ್ರತೆಗೆ ಇರಾನ್ ದೊಡ್ಡ ಬೆದರಿಕೆಯಾಗಿದೆ ಎಂದು ನೆತನ್ಯಾಹು ಪದೇ ಪದೇ ಹೇಳುತ್ತಾ ಬಂದಿದ್ದಾರೆ. ಆದ್ದರಿಂದ ಇರಾನ್ ಮೇಲೆ ಗರಿಷ್ಠ ಒತ್ತಡ ಹೇರಲು ಅಮೆರಿಕ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದಾರೆ.
ಇದೀಗ ಶಾಂತಿ ಒಪ್ಪಂದಕ್ಕೆ ಇರಾನ್ ಸಹಿ ಹಾಕಿದ್ದರೂ ಒಂದಿಷ್ಟು ಕಳವಳಗಳನ್ನ ನೆತನ್ಯಾಹು ಹೊಂದಿದ್ದಾರೆ. ಇರಾನ್ ಪರಮಾಣು ಕಾರ್ಯಕ್ರಮದ ಮೇಲಿನ ಸಂಪೂರ್ಣ ನಿರ್ಬಂಧಗಳನ್ನ ಒಪ್ಪಿಕೊಳ್ಳುತ್ತಾ? ಅನ್ನೋದ್ರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅಮೆರಿಕದ ಕಡ್ಡಾಯ ಷರತ್ತುಗಳನ್ನು ಇರಾನ್ ಪೂರ್ಣವಾಗಿ ಒಪ್ಪಿಕೊಳ್ಳಲು ನಿರಾಕರಿಸುತ್ತಾರೆ ಅನ್ನೋದು ಇಸ್ರೇಲ್ ಅಧಿಕಾರಿಗಳ ಬಲವಾದ ನಂಬಿಕೆಯೂ ಆಗಿದೆ. ಇದು ನೆತನ್ಯಾಹು ಮತ್ತು ಇಸ್ರೇಲ್ ಮಿತ್ರರಾಷ್ಟ್ರಗಳು ಅಮೆರಿಕದಲ್ಲಿ ನಡೆಯುತ್ತಿರುವ ಚರ್ಚೆಗಳ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.

ರಿಪಬ್ಲಿಕನ್ ನಾಯಕರಿಂದಲೂ ಆಕ್ಷೇಪ
ಶಾಂತಿ ಒಪ್ಪಂದದ ಅಡಿಯಲ್ಲಿ ಇರಾನ್‌ಗೆ 300 ಶತಕೋಟಿ ಡಾಲರ್ ಆರ್ಥಿಕ ಪರಿಹಾರ ನೀಡುವುದಾಗಿ ಅಮೆರಿಕ ಒಪ್ಪಿಕೊಂಡಿರುವುದನ್ನು ರಿಪಬ್ಲಿಕನ್ ಪಕ್ಷದ ನಾಯಕರೇ ಟೀಕಿಸಿದ್ದಾರೆ. ಇದು ಅರ್ಥಹೀನ, ಅಮೆರಿಕಕ್ಕೂ ಇದರಿಂದ ನಷ್ಟ ಎಂದು ಅಸಮಾಧಾನ ಹೊರಹಾಕಿದ್ದಾರೆ.
ನಾವು ಈ ಒಪ್ಪಂದಕ್ಕೆ ಬದ್ಧರಲ್ಲ
ಇಸ್ರೇಲ್ ಈ ಶಾಂತಿ ಒಪ್ಪಂದಕ್ಕೆ ಬದ್ಧವಾಗಿರೋದಿಲ್ಲ ಎಂದು ಟ್ರಂಪ್‌ಗೆ ನೆತನ್ಯಾಹು ಹೇಳಿರುವುದಾಗಿ ವರದಿಯಾಗಿದೆ. ಒಪ್ಪಂದದ ಹೊರತಾಗಿಯೂ, ಇಸ್ರೇಲ್ ಮಿಲಿಟರಿ ದಕ್ಷಿಣ ಲೆಬನಾನ್‌ನ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದೆ.

