– ಬಿಡದಿ ಟೌನ್‌ಶಿಪ್ ಯೋಜನೆಗೆ 80% ರೈತರ ವಿರೋಧವಿದೆ
– ಶನಿವಾರ ಕುಮಾರಸ್ವಾಮಿ ಭೈರಮಂಗಲ ಪ್ರವಾಸ
ಮಂಡ್ಯ: ರಾಜ್ಯ ಸರ್ಕಾರದ ಬಿಡದಿ ಟೌನ್‌ಶಿಪ್’ ಯೋಜನೆಯನ್ನು (Bidadi Township Project) ತೀವ್ರವಾಗಿ ವಿರೋಧಿಸಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy), ಈ ಯೋಜನೆಯು ಜನಾಭಿಪ್ರಾಯಕ್ಕೆ ವಿರುದ್ಧವಾಗಿದೆ ಎಂದು ಕಿಡಿಕಾರಿದ್ದಾರೆ.
ಮಂಡ್ಯದ (Mandya) ಶಿವಾರ ಗ್ರಾಮದಲ್ಲಿ ಮಾತನಾಡಿದ ಅವರು, ಈ ವಿಷಯವಾಗಿ ಸರ್ಕಾರಕ್ಕೆ ನೇರ ಸವಾಲು ಹಾಕಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ಕುರಿತಾಗಿ ನಡೆಯುತ್ತಿರುವ ಚರ್ಚೆಗಳ ಬೆನ್ನಲ್ಲೇ, ನಾಳೆ ಭೈರಮಂಗಲಕ್ಕೆ ಭೇಟಿ ನೀಡುತ್ತಿರುವುದಾಗಿ ಕುಮಾರಸ್ವಾಮಿ ಘೋಷಿಸಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಅವರು, ನಾಳೆ ಭೈರಮಂಗಲ ಪ್ರವಾಸ ಕಾರ್ಯಕ್ರಮ ನಿಗದಿಯಾಗಿದೆ. ಮಧ್ಯಾಹ್ನದವರೆಗೆ ನಾನು ಅಲ್ಲಿಯೇ ಇರುತ್ತೇನೆ. ಮುಖ್ಯಮಂತ್ರಿಗಳು ಬರಲು ಸಾಧ್ಯವಾಗದಿದ್ದರೂ ಪರವಾಗಿಲ್ಲ, ಸಂಬಂಧಪಟ್ಟ ಅಧಿಕಾರಿಗಳನ್ನಾದರೂ ಕಳುಹಿಸಲಿ, ಚರ್ಚಿಸೋಣ ಎಂದು ಸವಾಲು ಹಾಕಿದ್ದಾರೆ.
ತಾನು ಈ ಹಿಂದೆ ಬರೆದ ಎರಡು ಪತ್ರಗಳಿಗೆ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುಡಾರಿಗಳ ಬಳಕೆ
ಬಿಡದಿ ಟೌನ್‌ಶಿಪ್ ಯೋಜನೆಗೆ ಸುಮಾರು 80% ರೈತರ ವಿರೋಧವಿದೆ. ಕಾಂಗ್ರೆಸ್ ಪುಡಾರಿಗಳನ್ನ ಬಳಸಿಕೊಂಡು ಹಣದ ಆಮಿಷವೊಡ್ಡಿ ಈ ಯೋಜನೆ ಜಾರಿಗೊಳಿಸಲು ಹೊರಟಿರುವುದು ಏಕೆ? ಈ ಯೋಜನೆಗೆ ಹೊಸ ರೂಪ ಕೊಡಲು ಇಷ್ಟೊಂದು ಹುಚ್ಚು ಏಕೆ? ಇಂತಹ ಜನವಿರೋಧಿ ಸರ್ಕಾರಗಳು ಧೂಳಿಪಟವಾಗುತ್ತವೆ ಎಂದು ಎಚ್ಚರಿಕೆ ನೀಡಿದ್ದಾರೆ.
2007ರಲ್ಲಿ ತಾವು ಮುಖ್ಯಮಂತ್ರಿಯಾಗಿದ್ದಾಗ ರೈತರ ಹಿತದೃಷ್ಟಿಯಿಂದಲೇ ಈ ಯೋಜನೆ ಕೈಬಿಟ್ಟಿದ್ದನ್ನು ಸ್ಮರಿಸಿದ ಅವರು, ಅಂದು ಇದೇ ವಿಷಯದ ಬಗ್ಗೆ ಅಧಿವೇಶನದಲ್ಲಿ ಡಿ.ಕೆ. ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಏನು ಮಾತನಾಡಿದ್ದರು ಎಂಬ ದಾಖಲೆ ತಮ್ಮ ಬಳಿ ಇದೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಗುಂಡಿ ಮುಚ್ಚಲು, ಡಾಂಬರು ಹಾಕಲು ಯೋಗ್ಯತೆ ಇಲ್ಲದ ಸರ್ಕಾರ, ಬೇರೆ ಯೋಜನೆಗಳ ಬಗ್ಗೆ ಮಾತನಾಡುತ್ತದೆ ಎಂದು ಟೀಕಿಸಿದ ಅವರು, ಸ್ವೇಚ್ಛಾಚಾರದ ಆಡಳಿತದಿಂದ ಬೆಂಗಳೂರಿನ ಜನ ಬೇಸತ್ತಿದ್ದಾರೆ. ನನ್ನ ಸಾಧನೆ ಬಗ್ಗೆ ಕೇಳುವ ಇವರು, ಇಷ್ಟು ವರ್ಷ ರಾಜ್ಯಕ್ಕಾಗಿ ಹರಿದಿದ್ದೇನು? ಎಂದು ಹರಿಹಾಯ್ದಿದ್ದಾರೆ.
ಹಾದಿಬೀದಿ ಚರ್ಚೆ ಬೇಡ, ವಿಧಾನಸೌಧಕ್ಕೆ ಬನ್ನಿ ಎಂಬ ಯತೀಂದ್ರ ಸಿದ್ದರಾಮಯ್ಯನವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಯತೀಂದ್ರ ಎಲ್ಲಿ ನಿಂತು ಮಾತನಾಡುತ್ತಿದ್ದರು? ಅಪ್ಪಯ್ಯ, ಅಪ್ಪಯ್ಯ ಎಂದು ಅಧಿಕಾರ ಚಲಾಯಿಸಿದ್ದು ಮರೆತೇ? ಇವರಿಂದ ನಾನು ಕಲಿಯಬೇಕಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
