ನವದೆಹಲಿ: ಕೇಂದ್ರ ಸರ್ಕಾರ ಕರ್ನಾಟಕಕ್ಕೆ 3,454 ಕೋಟಿ ರೂ. ಬರ ಪರಿಹಾರ (Drought Relief Funds) ಘೋಷಣೆ ಮಾಡಿದೆ. ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿಗೆ ಚಂಡಮಾರುತ ಹಾಗೂ ಪ್ರವಾಹ ಪರಿಹಾರವೆಂದು 275 ಕೋಟಿ ರೂ. ನೀಡಿದೆ.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ರಾಜ್ಯ ಸರ್ಕಾರ (Karnataka Government) ಕೇಂದ್ರಕ್ಕೆ ಬರ ಪರಿಹಾರಕ್ಕಾಗಿ 18,174 ಕೋಟಿ ರೂ. ಹಣದ ಬೇಡಿಕೆ ಇಟ್ಟಿತ್ತು. ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡಿರದ ಹಿನ್ನೆಲೆ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್‍ನ (Supreme Court of India) ಮೊರೆ ಹೋಗಿತ್ತು. ಬಳಿಕ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆ ಮಾಡುವುದಾಗಿ ಸುಪ್ರೀಂಕೋರ್ಟ್‍ಗೆ ಹೇಳಿತ್ತು. ಅದರಂತೆ ಇದೀಗ ಕೇಂದ್ರ ಸರ್ಕರ ಬರ ಪರಿಹಾರ ಘೋಷಣೆ ಮಾಡಿದೆ. ಇದನ್ನೂ ಓದಿ: ಬರ ಪರಿಹಾರ ಬಿಡುಗಡೆಗೆ ಈ ವಾರದಲ್ಲಿ ಕ್ರಮ – ಸುಪ್ರೀಂಗೆ ಕೇಂದ್ರ ಸರ್ಕಾರದ ಭರವಸೆ
ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ಗೆ ಸಲ್ಲಿಸಿದ್ದ ಅರ್ಜಿಯನ್ನು ಏಪ್ರಿಲ್ 22 ರಂದು ನ್ಯಾ.ಬಿ.ಆರ್ ಗವಾಯಿ ನೇತೃತ್ವದ ದ್ವಿ ಸದಸ್ಯ ಪೀಠ ವಿಚಾರಣೆ ನಡೆಸಿತ್ತು. ವಿಚಾರಣೆ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ, ಚುನಾವಣಾ ಆಯೋಗದ ಜೊತೆಗೆ ಈ ಬಗ್ಗೆ ಚರ್ಚಿಸಲಾಗಿದ್ದು, ಬರ ಪರಿಹಾರ ಬಿಡುಗಡೆಗೆ ಆಯೋಗ ಅನುಮತಿ ನೀಡಿದೆ. ಹೀಗಾಗಿ ಈ ವಾರದೊಳಗೆ ಈ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದರು.
ಕೇಂದ್ರ ಸರ್ಕಾರ ಭರವಸೆ ನೀಡಿರುವ ಬೆನ್ನಲ್ಲೇ ಮಧ್ಯಪ್ರವೇಶ ಮಾಡಿದ ನ್ಯಾ.ಬಿ.ಆರ್ ಗವಾಯಿ, ಒಕ್ಕೂಟ ವ್ಯವಸ್ಥೆಯಲ್ಲಿ ಇಂತಹ ವಿಷಯಗಳನ್ನು ಸೌರ್ಹಾದಯುತವಾಗಿ ಬಗೆಹರಿಸಿಕೊಳ್ಳಬೇಕು. ಸುಪ್ರೀಂಕೋರ್ಟ್ ತನಕ ಈ ಪ್ರಕರಣ ಬರಬಾರದು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರು. ಬಳಿಕ ಅರ್ಜಿ ವಿಚಾರಣೆಯನ್ನು ಕೋರ್ಟ್ ಏ.29ಕ್ಕೆ ಮುಂದೂಡಿತ್ತು.
ಕೇಂದ್ರ, ರಾಜ್ಯಕ್ಕೆ ಗೃಹ ಇಲಾಖೆ ಷರತ್ತು
ಕೇಂದ್ರದಿಂದ ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಇಲಾಖೆ, ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಕೆಲವು ಷರತ್ತುಗಳನ್ನು ವಿಧಿಸಿದೆ. ಲೋಕಸಭಾ ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅನ್ವಯವಾಗುವಂತೆ ಷರತ್ತನ್ನು ವಿಧಿಸಲಾಗಿದೆ.
ಬರ ಪರಿಹಾರ ಬಿಡುಗಡೆಯನ್ನು ರಾಜಕೀಯವಾಗಿ ಬಳಸಿಕೊಳ್ಳುವಂತಿಲ್ಲ. ಈ ಬಗ್ಗೆ ಮಾಧ್ಯಮಗಳಲ್ಲಿ ಜಾಹೀರಾತು ನೀಡುವಂತಿಲ್ಲ. ರಾಜಕೀಯ ಭಾಷಣಗಳಲ್ಲೂ ಈ ಬಗ್ಗೆ ಉಲ್ಲೇಖಿಸುವಂತಿಲ್ಲ. ಬರ ಪರಿಹಾರದ ವಿಚಾರವಾಗಿ ಸುದ್ದಿಗೋಷ್ಠಿಯನ್ನು ನಡೆಸುವಂತಿಲ್ಲ. ಬರ ಪರಿಹಾರದ ಹಣವನ್ನು ಬದಲಿ ಕಾರ್ಯಗಳಿಗೆ ಬಳಸಿಕೊಳ್ಳುವಂತಿಲ್ಲ ಹಾಗೂ ನೀತಿ ಸಂಹಿತೆ ನಡುವೆ ಹೊಸ ಕಾರ್ಯಗಳನ್ನು ಮಾಡುವಂತಿಲ್ಲ ಎಂದು ಇಲಾಖೆ ಎಚ್ಚರಿಸಿದೆ. ಇದನ್ನೂ ಓದಿ: ರಾಜ್ಯದ ಅತಿದೊಡ್ಡ ಶೈಕ್ಷಣಿಕ ಮೇಳ ಪಬ್ಲಿಕ್ ಟಿವಿ ವಿದ್ಯಾಪೀಠಕ್ಕೆ ಚಾಲನೆ